ಕನ್ನಡಪ್ರಭ ವಾರ್ತೆ ಬೆಳಗಾವಿ
ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ, ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ವಲಯದ ಅಪ್ಪಾಸಾಹೇಬ್ ಅವರ ಆಯ್ಕೆ ಅನಿರೀಕ್ಷಿತ ಎಂದೇ ಹೇಳಲಾಗುತ್ತಿದೆ. ಜಾರಕಿಹೊಳಿ ಬ್ರದರ್ಸ್ ನೇತೃತ್ವದಲ್ಲಿ ಬುಧವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಲಾಯಿತು. ಇದಕ್ಕೆ ಎಲ್ಲ ನಿರ್ದೇಶಕರು ಕೂಡ ಸಹಮತ ವ್ಯಕ್ತಪಡಿಸುವ ಮೂಲಕ ಒಮ್ಮತದ ಅಭ್ಯರ್ಥಿ ಹೆಸರು ಸಚಿವ ಸತೀಶ್ ಜಾರಕಿಹೊಳಿ ಘೋಷಣೆ ಮಾಡಿದರು. ಜತೆಗೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಸುಭಾಷ ಡವಳೇಶ್ವರ ಮುಂದುವರಿಯುವುದಾಗಿಯೂ ತಿಳಿಸಿದರು.
ಈ ಮೂಲಕ ಇದುವರೆಗೆ ಬಿಜೆಪಿ ಪ್ರಾಬಲ್ಯವಿದ್ದು ಬಿಡಿಸಿಸಿ ಬ್ಯಾಂಕ್‌ನಲ್ಲಿ ಈಗ ಕಾಂಗ್ರೆಸ್ ತನ್ನ ಅಸ್ತಿತ್ವ ಸಾಧಿಸಿದಂತಾಗಿದೆ. ಮಾತ್ರವಲ್ಲ, ಡಿಸಿಸಿ ಬ್ಯಾಂಕ್‌ನಲ್ಲಿ ಪರೋಕ್ಷವಾಗಿ ಜಾರಕಿಹೊಳಿ ಬ್ರದರ್ಸ್ ತಮ್ಮ ಹಿಡಿತವನ್ನು ಕೂಡ ಪರೋಕ್ಷವಾಗಿ ಹಿಡಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ 10 ವರ್ಷಗಳಿಂದ ಕತ್ತಿ ಸಹೋದರರ ಕೈಯಲ್ಲಿದ್ದ ಬಿಡಿಸಿಸಿ ಬ್ಯಾಂಕ್ ಈಗ ಜಾರಕಿಹೊಳಿ ಅವರ ಆಪ್ತ ವಲಯಕ್ಕೆ ಹಸ್ತಾಂತರವಾದಂತಾಗಿದೆ.ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಆಯ್ಕೆಯಾಗುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗಿತ್ತು. ಇವರ ಜತೆಗೆ ಮಹಾಂತೇಶ ದೊಡ್ಡಗೌಡರ, ಸುಭಾಷ ಢವಳೇಶ್ವರ ಅವರ ಹೆಸರು ಕೂಡ ಚಾಲ್ತಿಯಲ್ಲಿದ್ದವು. ಆದರೆ, ಅಚ್ಚರಿ ಎಂಬಂತೆ ಅಪ್ಪಾಸಾಹೇಬ್ ಕುಲಗೋಡೆ ಅವರ ಹೆಸರು ಅಂತಿಮವಾಗಿರುವುದು ಹಲವು ವಿಶ್ಲೇಷಣೆಗೂ ಕಾರಣವಾಗಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಜಾರಕಿಹೊಳಿ ಬ್ರದರ್ಸ್ ನೇತೃತ್ವದಲ್ಲಿ ಬುಧವಾರ ನಡೆದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಸಭೆಗೆ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ, ಸಚಿವ ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ, ಅಣ್ಣಾಸಾಹೇಬ ಜೊಲ್ಲೆ, ಸುಭಾಷ ಢವಳೇಶ್ವರ, ಮಹಾಂತೇಶ ದೊಡ್ಡಗೌಡರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.ಎಲ್ಲ ರೈತರಿಗೂ ಈ ಮೊದಲಿನಂತೆಯೇ ಸವಲತ್ತುಗಳನ್ನು ಕೊಡುವ ವ್ಯವಸ್ಥೆ ಮಾಡುತ್ತೇವೆ. ಎಲ್ಲರೂ ಪಕ್ಷಾತೀತವಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಎಲ್ಲ ನಿರ್ದೇಶಕರ ಸಹಕಾರದಿಂದ ಉತ್ತಮ ಕೆಲಸ ಮಾಡುತ್ತೇವೆ. ಎಲ್ಲರೂ ಕೂಡಿಕೊಂಡೇ ಕೆಲಸ ಮಾಡುತ್ತೇವೆ.
- ಅಪ್ಪಾಸಾಹೇಬ ಕುಲಗೋಡೆ, ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ