ಭಟ್ಕಳ: ತಾಲೂಕಿನಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಮರಳು ಸರಬರಾಜು ಸ್ಥಗಿತಗೊಂಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಾವಿರಾರು ಕಾರ್ಮಿಕರು ಬುಧವಾರ ಪಟ್ಟಣದಲ್ಲಿ ಕಾರ್ಮಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಮತ್ತು ಮರಳು ಸರಬರಾಜು ಆರಂಭಿಸಬೇಕು ಎಂದು ತಾಲೂಕು ಆಡಳಿತ ಸೌಧದ ಮುಂದೆ ಎರಡೂವರೆ ತಾಸಿಗೂ ಅಧಿಕ ಕಾಲ ಧರಣಿ ನಡೆಸಿದರು.
ಆರಂಭದಲ್ಲಿ ಎಸಿ ಡಾ. ನಯನಾ ಅವರು ಮನವಿ ಸ್ವೀಕರಿಸಲು ಆಗಮಿಸಿದರೂ ಸ್ಥಳಕ್ಕೆ ಡಿಸಿ ಅವರೇ ಬರಬೇಕು ಎಂದು ಪ್ರತಿಭಟನಾನಿರತ ಕಾರ್ಮಿಕರು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಸುರೇಶ ಪೂಜಾರಿ, ಆರು ತಿಂಗಳಿನಿಂದ ಮರಳು ಸರಬರಾಜು ಇಲ್ಲದೇ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲಸವಿಲ್ಲದೇ ಖಾಲಿ ಕುಳಿತುಕೊಳ್ಳುವಂತಾಗಿದೆ.
ಕಾರ್ಮಿಕರು ಈ ಸಲ ದೀಪಾವಳಿ ಹಬ್ಬವನ್ನೂ ಸರಿಯಾಗಿ ಆಚರಿಸಿಲ್ಲ. ಮರಳಿಲ್ಲದೇ ವ್ಯಾಪಾರ- ವಹಿವಾಟಿಗೂ ಹೊಡೆತ ಬಿದ್ದಿದೆ. ಬೇರೆ ತಾಲೂಕುಗಳಲ್ಲಿ ಮರಳಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಆದರೆ ಭಟ್ಕಳದಲ್ಲಿ ಮಾತ್ರ ಮರಳಿಗೆ ಭಾರೀ ಸಮಸ್ಯೆ ಉಂಟಾಗಿದೆ. ಮರಳಿಲ್ಲದೇ ಅಭಿವೃದ್ಧಿ ಕಾಮಗಾರಿ, ಮನೆ, ಕಟ್ಟಡ ಮುಂತಾದ ನಿರ್ಮಾಣ ಕೆಲಸಕ್ಕೆ ಭಾರೀ ಹಿನ್ನಡೆ ಆಗಿದೆ. ಮರಳು ಸಮಸ್ಯೆಯಿಂದ ಕಾರ್ಮಿಕರು ಭಾರೀ ತೊಂದರೆ ಅನುಭವಿಸಿದ್ದರಿಂದ ಸರ್ಕಾರ ಕಾರ್ಮಿಕರಿಗೆ ವಿಶೇಷ ಪರಿಹಾರದ ಪ್ಯಾಕೇಜ್ ಬಿಡುಗಡೆ ಮಾಡಬೇಕು. ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಕುಂದಾಪುರ ತಾಲೂಕಿನಿಂದ ಮರಳು ಸರಬರಾಜು ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಕಾರ್ಮಿಕ ಸಂಘಟನೆಯ ಶ್ರೀಧರ ನಾಯ್ಕ, ಲೋಕೇಶ ನಾಯ್ಕ, ರಾಮಾ ನಾಯ್ಕ ಮುಂತಾದವರು ಮಾತನಾಡಿ, ಮರಳು ಸಮಸ್ಯೆಯನ್ನು ಜಿಲ್ಲಾಡಳಿತ ಆದಷ್ಟು ಬೇಗ ಬಗೆಹರಿಸಿ ಕಾರ್ಮಿಕರಿಗೆ ಕೆಲಸ ಸಿಗುವಂತೆ ಮಾಡಬೇಕೆಂದು ಆಗ್ರಹಿಸಿದರು.
ಒಂದು ಹಂತದಲ್ಲಿ ಕಾರ್ಮಿಕರು ಡೀಸಿ ಮತ್ತು ಉಸ್ತುವಾರಿ ಸಚಿವರು ಸ್ಥಳಕ್ಕೆ ಬರದಿದ್ದರೆ ರಸ್ತೆಗಿಳಿದು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿಯೂ ಎಚ್ಚರಿಕೆ ನೀಡಿದರು. ಆಕ್ರೋಶಗೊಂಡಿದ್ದ ಕಾರ್ಮಿಕರನ್ನು ಸಮಾಧಾನ ಪಡಿಸಲು ಕಾರ್ಮಿಕ ಸಂಘಟನೆಯ ಪ್ರಮುಖರು ಹರಸಾಹಸಪಟ್ಟರು. ಅಂತಿಮವಾಗಿ ಸಹಾಯಕ ಆಯುಕ್ತರು ಆಗಮಿಸಿ ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಅವರಿಗೆ ವಿಷಯ ತಿಳಿಸಿರುವುದಾಗಿ ಹೇಳಿದರು.
ಸಂಘಟನೆಯ ಪ್ರಮುಖರ ಮಾತುಗಳನ್ನೂ ಕೇಳದೇ ಮರಳು ಸರಬರಾಜು ಭರವಸೆ ಸಿಗುವ ವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ನೇತೃತ್ವ ವಹಿಸಿದ್ದ ಕಾರ್ಮಿಕ ಸಂಘಟನೆಗಳ ಪ್ರಮುಖರಿಗೂ ದಿಕ್ಕು ತೋಚದಂತಾಯಿತು. ಒಂದು ಹಂತದಲ್ಲಿ ನೇತೃತ್ವದ ವಹಿಸಿದ್ದ ಪ್ರಮುಖರನ್ನೇ ತೀವ್ರ ತರಾಟೆಗೆ ತೆಗೆದುಕೊಂಡ ಕಾರ್ಮಿಕರು ತಾವೇ ಮೈಕ್ ಹಿಡಿದು ತಮ್ಮ ಆಕ್ರೋಶ ಹೊರಹಾಕಲು ಶುರು ಮಾಡಿದ್ದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಯಿತು.ತಾಳ್ಮೆ ಪರೀಕ್ಷಿಸದಿರಿ ಎಂದ ಕಾರ್ಮಿಕ ಮಹಿಳೆ