- ರಾಜ್ಯಪಾಲರು ಮಧ್ಯೆ ಪ್ರವೇಶಕ್ಕೆ ಯುವ ಬ್ರಿಗೇಡ್, ಸಹೋದರಿ ನಿವೇದಿತಾ ಪ್ರತಿಷ್ಟಾನ ಒತ್ತಾಯ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಹಿಂದೂಗಳ ಶ್ರದ್ಧಾಭಾವನೆ ಒಪ್ಪದ, ಗೌರವಿಸದ ಬಾನು ಮುಷ್ತಾಕ್ ಅವರಿಂದ ಮೈಸೂರು ದಸರಾ ಉದ್ಘಾಟಿಸುವುದು ಬೇಡವೇ ಬೇಡ ಎಂದು ಯುವ ಬ್ರಿಗೇಡ್, ಸಹೋದರಿ ನಿವೇದಿತಾ ಪ್ರತಿಷ್ಟಾನದಿಂದ ನಗರದಲ್ಲಿ ಗುರುವಾರ ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಲಾಯಿತು.ನಗರದ ಜಿಲ್ಲಾಡಳಿತ ಭವನದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ಸದಸ್ಯ, ಬಿಜೆಪಿ ಮುಖಂಡ ಪಿ.ಸಿ.ಶ್ರೀನಿವಾಸ ಭಟ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಡಾ.ಸಿ.ಕೆ.ಆನಂದ ತೀರ್ಥಾಚಾರ್, ಅನಿಲ ಬಾರೆಂಗಳ್, ಅಚ್ಯುತ್ ಕಾಂತಾವಾರ ಇತರರ ನೇತೃತ್ವದಲ್ಲಿ ಅಪರ ಡಿಸಿ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಲಾಯಿತು.
ಶ್ರೀನಿವಾಸ ಭಟ್ ಮಾತನಾಡಿ, ದಸರಾ ಹಬ್ಬ ನಮ್ಮ ಸಂಸ್ಕೃತಿ, ನಂಬಿಕೆಯ ಗುರುತು, ಆಚರಣೆಯಾಗಿದೆ. ಪರಂಪರೆ ಪ್ರತೀಕವಾದ ದಸರಾ ಹಬ್ಬದಲ್ಲೂ ರಾಜಕೀಯ ಎಳೆ ತಂದು, ಹಿಂದೂಗಳ ಭಾವನೆಗೆ ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ. ಆದರೆ, ಅಂತಹ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ ಎಂದರು.ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರ ಭಾವನೆ ಮತ್ತು ನಾಡಿನ ಪರಂಪರೆಯನ್ನೇ ಲೆಕ್ಕಿಸಿಲ್ಲ. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ನೇರವಾಗಿ ಹಿಂದೂಗಳ ಹೃದಯಕ್ಕೆ ಹೊಡೆದಿದೆ. ಇಂತಹ ನಿರ್ಧಾರ ನಾವು ಸಹಿಸುವುದಿಲ್ಲ. ಈ ಅವಮಾನ ನಾವು ಒಪ್ಪುವುದೂ ಇಲ್ಲ ಎಂದು ಹೇಳಿದರು.
ಸರ್ಕಾರದ ದುರಾಲೋಚನೆ ನಿರ್ಧಾರ ಜನರ ಕೋಪಕ್ಕೆ ಗುರಿಯಾಗಿದೆ. ಸಾರ್ವಜನಿಕರು ಬೀದಿಗಿಳಿದು ಪ್ರತಿಭಟಿಸಿ, ಅನ್ಯಾಯದ ವಿರುದ್ಧ ಹೋರಾಡಲು ಸಜ್ಜಾಗಬೇಕಿದೆ. ತಕ್ಷಣ ರಾಜ್ಯ ಸರ್ಕಾರ ತನ್ನ ನಿರ್ಧಾರ ಹಿಂಪಡೆಯಬೇಕು. ದಸರಾ ಉದ್ಘಾಟನೆ ಗೌರವವು ಹಿಂದೂ ಸಂಸ್ಕೃತಿ, ಪರಂಪರೆ ಪ್ರತಿನಿಧಿಸುವವರ ಪಾಲಾಗಬೇಕು. ಜನರ ಭಾವನೆಗಳನ್ನು ಕೆರಳಿಸಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.ಒಂದುವೇಳೆ ಸರ್ಕಾರ ತನ್ನ ನಿರ್ಧಾರ ಬದಲಿಸದಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳದಿದ್ದರೆ ಸರ್ಕಾರವೇ ಜನರ ಕೋಪಕ್ಕೆ ಕಾರಣವಾಗಿ, ನಮ್ಮ ಪರಂಪರೆ ಉಳಿಸಿಕೊಳ್ಳುವ ಪ್ರತಿಭಟನೆಗಳು ರಾಜ್ಯವ್ಯಾಪಿ ನಡೆಯುವುದಕ್ಕೆ ಕಾಂಗ್ರೆಸ್ ಸರ್ಕಾರವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಾಗಾಗಿ, ರಾಜ್ಯಪಾಲರು ತಕ್ಷಣ ಮಧ್ಯ ಪ್ರವೇಶಿಸಿ, ಕರ್ನಾಟಕ ಸಂಸ್ಕೃತಿಯ ಹಬ್ಬವನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ವೇಳೆ ಸಂಸ್ಥೆಯ ವಿನಯ್ ಪದಕಿ, ಮುರುಳಿ, ಯುವ ಬ್ರಿಗೇಡ್‌ನ ಎಚ್.ಕೆ. ಗಣೇಶಕುಮಾರ, ನಿವೇದಿತಾ ಪ್ರತಿಷ್ಟಾನದ ಕೆ.ಸಿ. ಹೇಮಾವತಿ, ಎಂ.ಆರ್. ರೂಪಾಶ್ರೀ, ರೂಪಾ ಶಶಿಕಾಂತ, ಅನಿತಾ ವಾಸುದೇವ, ಆರುಂಧತಿ, ವಿದ್ಯಾಲಕ್ಷ್ಮೀ, ಭಾರತಿ, ಹೇಮ, ಮಧುರಾ, ಹೊಸಕೆರೆ ಶಿವಕುಮಾರ, ಗಣೇಶಕುಮಾರ, ಹೇಮಾವತಿ, ರೂಪಾಶ್ರೀ, ಮಾಲತಿ ಇತರರು ಇದ್ದರು.- - -
-11ಕೆಡಿವಿಜಿ7.ಜೆಪಿಜಿ:ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಬೇಡವೇ ಬೇಡ, ರಾಜ್ಯಪಾಲರು ಮಧ್ಯ ಪ್ರವೇಶಿಸಿ ರಾಜಕೀಯ ಹಸ್ತಕ್ಷೇಪ ತಡೆಯುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಯುವ ಬ್ರಿಗೇಡ್, ಸಹೋದರಿ ನಿವೇದಿತಾ ಪ್ರತಿಷ್ಟಾನದಿಂದ ದಾವಣಗೆರೆಯಲ್ಲಿ ಅಪರ ಡಿಸಿ ಮುಖಾಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಲಾಯಿತು.