ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ತಾಲೂಕಿನ ಹುಲಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಮೆಗಾ ಮಾರುಕಟ್ಟೆಯಲ್ಲಿ ವರ್ತಕರಿಗೆ ನಿವೇಶನ ಹಂಚಿಕೆ ಹಾಗೂ ದರ ನಿಗದಿಯಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಸ್ಥಳೀಯ ಎಪಿಎಂಸಿ ವರ್ತಕರು ಬುಧವಾರ ನಗರದಲ್ಲಿ ಪ್ರತಿಭಟಿಸಿ ಎಪಿಎಂಸಿ ಕಾರ್ಯದರ್ಶಿ ಎಂ.ವಿ. ಶೈಲಜಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಇಲ್ಲಿನ ಸ್ಟೇಷನ್ ರಸ್ತೆ ವರ್ತಕರ ಸಂಘದ ಬಳಿಯಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ಬಸ್ ನಿಲ್ದಾಣ ರಸ್ತೆ, ಪೊಸ್ಟ್ ಸರ್ಕಲ್, ಅಶೋಕ ಸರ್ಕಲ್ ಮಾರ್ಗವಾಗಿ ಎಪಿಎಂಸಿ ಕಚೇರಿವರೆಗೆ ಸಾಗಿದರು.
ಈ ಸಮಯದಲ್ಲಿ ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡ್ರ ಮಾತನಾಡಿ, ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿನ ನಿವೇಶನಗಳನ್ನು ಪ್ರತಿ ಚದರ ಅಡಿಗೆ ₹400 ದರ ನಿಗದಿ ಪಡಿಸಿ ಎಬಿಸಿಡಿಇ ಬ್ಲಾಕ್‌ಗಳಲ್ಲಿಯ ಒಟ್ಟು 522 ನಿವೇಶನಗಳ ಬದಲಾಗಿ 300 ನಿವೇಶನಗಳ ಹಂಚಿಕೆ ಮಾಡಲು ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕರೆದು ಮಾಹಿತಿ ನೀಡಲಾಗಿದೆ ಎಂದು ಎಪಿಎಂಸಿ ಕೇಂದ್ರ ಕಚೇರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ. ಆದರೆ ಆ ಸಭೆಗೆ ಆಡಳಿತಾಧಿಕಾರಿಗಳು ಗೈರು ಹಾಜರಾಗಿದ್ದರು. ಮೇಲಾಗಿ ಈ ಸಭೆಯಲ್ಲಿ ನಮ್ಮ ಸಂಘ ಮತ್ತು ವರ್ತಕರ ಬೇಡಿಕೆಗಳನ್ನು ಪತ್ರದ ಮುಖಾಂತರ ಮತ್ತು ಮೌಖಿಕವಾಗಿ ಒಕ್ಕೊರಲಿನಿಂದ ತಿಳಿಸಿದ್ದೇವು. ಆದರೆ ನಮ್ಮ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ದೊರಕಲಿಲ್ಲ. ಇದಲ್ಲದೆ ಜ.12ರ ಕನ್ನಡ ದಿನ ಪತ್ರಿಕೆಯಲ್ಲಿ ನಿವೇಶನ ಹಂಚಿಕೆ ಕುರಿತಂತೆ ಕೆಲವೊಂದು ಷರತ್ತು ವಿಧಿಸಿ ಪ್ರಕಟಣೆ ನೀಡಲಾಗಿದೆ ಎಂದರು.ಮೆಗಾ ಮಾರುಕಟ್ಟೆಯಲ್ಲಿ ನಿವೇಶನಗಳನ್ನು ರಾಣಿಬೆನ್ನೂರಿನ ವರ್ತಕರಿಗೆ ಶೇ.60 ಹಾಗೂ ಹೊರಗಿನ ಭಾಗದ ವರ್ತಕರಿಗೆ ಶೇ.40 ಎಂದು ನಿಗದಿಪಡಿಸಿದ್ದಿರಿ. ಎರಡೂ ಭಾಗದ ವರ್ತಕರುಗಳು ಅನುಪಾತಕ್ಕೆ ಅನುಸರಿಸಿ ಸಂಖ್ಯೆಯಲ್ಲಿ ಭಾಗವಹಿಸದಿದ್ದರೆ, ಅಂತಹ ಉಳಿಕೆ ನಿವೇಶನಗಳನ್ನು ರಾಣಿಬೆನ್ನೂರಿನ ವರ್ತಕರಿಂದ ಹೊರಗಿನ ವರ್ತಕರಿಗೆ ಮತ್ತು ಹೊರಗಿನ ಭಾಗದ ವರ್ತಕರಿಂದ ರಾಣಿಬೆನ್ನೂರಿನ ವರ್ತಕರುಗಳಿಗೆ ವರ್ಗಾಯಿಸಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಈ ಷರತ್ತಿಗೆ ನಮ್ಮ ಒಪ್ಪಿಗೆ ಇರುವುದಿಲ್ಲ. ಎಲ್ಲಾ ನಿವೇಶನಗಳನ್ನು ರಾಣಿಬೆನ್ನೂರಿನ ವರ್ತಕರುಗಳಿಗೆ ಹಂಚಿಕೆ ಮಾಡಬೇಕು. ಇದಲ್ಲದೆ ಬಿ ಬ್ಲಾಕ್‌ನ ಎಲ್ಲಾ ನಿವೇಶನಗಳನ್ನು ಮೆಣಸಿನಕಾಯಿ ವರ್ತಕರುಗಳಿಗೆ ಮೀಸಲಿರಿಸಲಾಗಿದೆ ಎಂದು ತಿಳಿಸಲಾಗಿದೆ. ಆದರೆ ಮೆಣಸಿನಕಾಯಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಎಪಿಎಂಸಿಯವರು ನಮ್ಮ ಸಂಘದ ಜತೆ ಯಾವತ್ತೂ ಪ್ರಸ್ತಾಪ ಮಾಡಲೇ ಇಲ್ಲಾ. ಇದು ಸ್ಥಳೀಯ ವರ್ತಕರಿಗೆ ಮಾರಕವಾಗಿದ್ದು, ಈ ಷರತ್ತನ್ನು ಹಿಂದಕ್ಕೆ ಪಡೆಯಬೇಕು ಎಂದರು.
ಇದಲ್ಲದೆ ನಿವೇಶನ ಹಂಚಿಕೆ ವಿಚಾರವಾಗಿ ನ್ಯಾಯಾಲಯದ ಆದೇಶದಂತೆ ಹೆಚ್ಚುವರಿ ಭೂ ಪರಿಹಾರ ಪಾವತಿಸಿದಲ್ಲಿ ಅದನ್ನು ಪಡೆದ ಪೇಟೆ ಕಾರ್ಯಕರ್ತರು ವಿಸ್ತೀರ್ಣಕ್ಕೆ ಅನುಗುಣವಾಗಿ ಪಾವತಿ ಮಾಡಬೇಕು ಮತ್ತು ಇದಕ್ಕೆ ಬದ್ಧವಾಗಿರುವ ಕುರಿತು ಅರ್ಜಿಯೊಂದಿಗೆ ಪ್ರಮಾಣ ಪತ್ರ ಲಗತ್ತಿಸಬೇಕು ಎಂಬ ಷರತ್ತು ವಿಧಿಸಲಾಗಿದೆ. ಆದರೆ ಯಾವುದೇ ಷರತ್ತುಗಳ ಕುರಿತು ಸಮಿತಿಯವರು ಎಂದಿಗೂ ವರ್ತಕರ ಸಂಘದ ಜತೆ ಚರ್ಚೆ ನಡೆಸಿಲ್ಲ. ಆದ್ದರಿಂದ ನಿವೇಶಗಳ ಹಂಚಿಕೆ ಪ್ರಕ್ರಿಯೆಯನ್ನು ಇಂದೇ ತಡೆ ಹಿಡಿದು ಎಲ್ಲ ಸಮಸ್ಯೆಗಳನ್ನು ಪರಿಹರಿಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮುಖಂಡತಾದ ಮಲ್ಲಿಕಾರ್ಜುನ ಅರಳಿ, ಸದಾಶಿವ ಉಪ್ಪಿನ, ವೀರೇಶ ಮೋಟಗಿ, ವಿ.ಪಿ. ಲಿಂಗನಗೌಡ್ರ ಮಾತನಾಡಿದರು.
ಗುರುಪ್ರಕಾಶ ಜಂಬಗಿ, ಮಾಲತೇಶ ಕಜ್ಜರಿ, ಉಮೇಶ ಹೊನ್ನಾಳಿ, ಸುಧೀರ ಕುರವತ್ತಿ, ಬಿ.ಎಸ್. ಸಣ್ಣಗೌಡ್ರ, ಸಚಿನ ಲಿಂಗನಗೌಡ್ರ, ಶಿವಾನಂದ ಸುಣಗಾರ, ರಘು ಮಜ್ಜಗಿ, ಪರಮೇಶಪ್ಪ ಬಣಕಾರ, ಪರಮೇಶಪ್ಪ ಹೊಟ್ಟಿಗೌಡ್ರ, ಮಾಲತೇಶ ಚಳಗೇರಿ, ಮಾಲತೇಶ ಕರಚಿಕ್ಕಪ್ಪನವರ, ಕಿರಣ ಅಂತರವಳ್ಳಿ, ಯಮನೂರಪ್ಪ ಯಲಗುರೇಶ್ವರ, ಬಸವರಾಜ ಹುಲ್ಲತ್ತೇರ, ಪರಶುರಾಮ ಮಾಳೋದೆ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.