ಉದ್ಯೋಗ ಖಾತ್ರಿ ಕಾರ್ಮಿಕರಿಗೆ ಕೂಲಿ ಪಾವತಿಸಲು ಆಗ್ರಹಿಸಿ ಮನವಿ

KannadaprabhaNewsNetwork |  
Published : May 28, 2025, 12:38 AM IST
ಹಾವೇರಿಯಲ್ಲಿ ಜಿಪಂ ಸಿಇಒ ರುಚಿ ಬಿಂದಲ್ ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಪ್ರತಿ 15 ದಿನಗಳಿಗೊಮ್ಮ ವೇತನ ಪಾವತಿ ಮಾಡಬೇಕೆಂಬ ನಿರ್ದೇಶನ ಇದ್ದಾಗಲೂ ತಾಪಂ ಅಧಿಕಾರಿಗಳು ಜಿಲ್ಲಾ ಪಂಚಾಯಿತಿಯತ್ತ ಬೊಟ್ಟು ಮಾಡುತ್ತಿದ್ದಾರೆ. ಅಲ್ಲಿ ಅನುದಾನ ಬಂದಿಲ್ಲ ಎನ್ನುತ್ತಿದ್ದಾರೆ.

ಹಾವೇರಿ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ಮತ್ತು ಅವರ ನಾಯಕತ್ವ ವಹಿಸುವ ಮೇಟಿಗಳಿಗೆ ಕಳೆದ 2- 3 ತಿಂಗಳಿಂದ ಕೂಲಿ ಹಣ ಬಿಡುಗಡೆಯಾಗಿಲ್ಲ. ಹೀಗಾಗಿ ಬಡ ಕೂಲಿ ಕಾರ್ಮಿಕರು ಜೀವನ ನಡೆಸುವುದೇ ಕಷ್ಟಕರವಾಗಿದ್ದು, ಕೂಡಲೇ ಕೂಲಿ ಹಣ ಬಿಡುಗಡೆ ಮಾಡಬೇಕು ಎಂದು ನರೇಗಾ ಮೇಟಿ ಸಚಿನ್ ಬೂದಿಹಾಳ ಒತ್ತಾಯಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣಾಭಿವೃದ್ಧಿಯಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಹುಮುಖ್ಯ ಪಾತ್ರ ವಹಿಸಿದೆ. ಅಲ್ಲದೇ ಉದ್ಯೋಗಕ್ಕಾಗಿ ಅಲೆಯುತ್ತಿದ್ದ ಗ್ರಾಮೀಣ ಭಾಗದ ಜನರ ಕೈಗೆ ಕೆಲಸ ನೀಡುವಲ್ಲಿ ಯಶಸ್ವಿಯಾಗಿದೆ. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಆಗಿಲ್ಲ ಎಂಬ ಕಾರಣದಿಂದ ಈಗಾಗಲೇ 4 ತಿಂಗಳಿಂದ ವೇತನ ಬಿಡುಗಡೆ ಆಗಿಲ್ಲ. ಇದರಿಂದ ಮಕ್ಕಳ ಶಾಲಾ ಶುಲ್ಕ, ಲಾಲನೆ, ಪೋಷಣೆ ಕಷ್ಟಕರವಾಗಿದೆ. ಕೂಲಿಯನ್ನೇ ಆಶ್ರಯಿಸಿರುವ ಕಾರ್ಮಿಕರ ಗತಿಯೇನು ಎಂದು ಪ್ರಶ್ನಿಸಿದರು.ಪ್ರತಿ 15 ದಿನಗಳಿಗೊಮ್ಮ ವೇತನ ಪಾವತಿ ಮಾಡಬೇಕೆಂಬ ನಿರ್ದೇಶನ ಇದ್ದಾಗಲೂ ತಾಪಂ ಅಧಿಕಾರಿಗಳು ಜಿಲ್ಲಾ ಪಂಚಾಯಿತಿಯತ್ತ ಬೊಟ್ಟು ಮಾಡುತ್ತಿದ್ದಾರೆ. ಅಲ್ಲಿ ಅನುದಾನ ಬಂದಿಲ್ಲ ಎನ್ನುತ್ತಿದ್ದಾರೆ. ಹೀಗೆ ಮುಂದುವರಿದರೆ, ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಹಾಗೂ ಬೆಂಗಳೂರಿನ ವಿಧಾನಸೌಧದ ಎದುರು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಪ್ರತಿ ಗ್ರಾಮದಲ್ಲಿ ಹೀಗೆ ಕೂಲಿ ಕಾರ್ಮಿಕರನ್ನು ಸಂಘಟನೆ ಮಾಡಿ ನೇತೃತ್ವ ವಹಿಸುವವರಿಗೆ ಮೇಟಿ ಎನ್ನಲಾಗುತ್ತದೆ. ಇಲ್ಲಿ ಮೇಟಿಗಳಾಗಿ ಕೆಲಸ ಮಾಡುವವರಿಗೆ ದಿನಕ್ಕೆ ಪುರುಷರಿಗೆ ₹4 ಮತ್ತು ಮಹಿಳೆಯರಿಗೆ ₹5 ಪ್ರೋತ್ಸಾಹಧನ ನೀಡುವ ಕುರಿತು ಆದೇಶ ಮಾಡಲಾಗಿದೆ. ಇದು 2019ರಲ್ಲೇ ಆದೇಶವಾಗಿದ್ದರೂ ಇದುವರೆಗೂ ಪ್ರೋತ್ಸಾಹಧನ ನೀಡುತ್ತಿಲ್ಲ ಎಂದು ದೂರಿದರು.ಕೃಷಿ, ತೋಟಗಾರಿಕೆ, ಅರಣ್ಯ ಹೀಗೆ ವಿವಿಧ ಇಲಾಖೆಗಳಲ್ಲಿ ಕಾಮಗಾರಿ ಕೈಗೊಳ್ಳಲು ಕ್ರಿಯಾಯೋಜನೆ ರೂಪಿಸಿ ಅದಕ್ಕೆ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆಯಬೇಕಿದೆ. ಆದರೆ ಜಿಲ್ಲಾ ಪಂಚಾಯಿತಿ ಯಾವುದೇ ಕಾಮಗಾರಿಗಳಿಗೆ ಅನುಮೋದನೆ ನೀಡದ ಕಾರಣ ಕಾರ್ಮಿಕರು ಕೆಲಸ ಇಲ್ಲದೇ ಕಾಯುವಂತಾಗಿದೆ. ಕಾರಣ ಕೂಲಿ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.ಬೀರಪ್ಪ ಗೋಡೇರ, ನಾಗಪ್ಪ ಹಾವನೂರ, ಮಾಂತೇಶ ಕಮತರ, ರತ್ನವ್ವ ಮುತ್ತಳ್ಳಿ, ಪಾರ್ವತಿ ಸಣ್ಣಮರಡಿ, ಕವಿತಾ ದುಂಡಸಿ, ಗುಡ್ಡಪ್ಪ ಚಿಕ್ಕೇರ, ದಾದಾಪೀರ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ಸಾಧ್ಯ
ಔರಾದ್ ತಾಲೂಕು ಅದ್ಧೂರಿ ಕಸಾಪ ಸಮ್ಮೇಳನ