ಕನ್ನಡಪ್ರಭ ವಾರ್ತೆ ಮುಂಡಗೋಡ
ಮುಂಡಗೋಡ ಸಾರಿಗೆ ಘಟಕದಿಂದ ಹುಬ್ಬಳ್ಳಿ ಮಾರ್ಗಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಹಾಗೂ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಸಾರ್ವಜನಿಕರು ಗುರುವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಹಲವು ದಿನಗಳಿಂದ ಹುಬ್ಬಳ್ಳಿ ಮಾರ್ಗಕ್ಕೆ ಪ್ರಯಾಣಿಸುವುದು ಸಾರ್ವಜನಿಕರಿಗೆ ಬಹಳ ಕಷ್ಟಕರವಾಗಿದೆ. ಸುಮಾರು ಎರಡುವರೆ ವರ್ಷಗಳ ಹಿಂದೆ ನೂತನವಾಗಿ ನಿರ್ಮಿಸಲಾದ ಮುಂಡಗೋಡ ಸಾರಿಗೆ ಘಟಕವನ್ನು ಸ್ವತಃ ಸಾರಿಗೆ ಸಚಿವರು ಬಂದು ಉದ್ಘಾಟನೆ ಮಾಡಿದ್ದರು. ಆಗ ಈ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಆಶಾಭಾವನೆ ಸಾರ್ವಜನಿಕರಲ್ಲಿ ಮೂಡಿತ್ತು. ಆದರೆ ಕಾರ್ಯಾಚರಣೆ ಪ್ರಾರಂಭವಾಗದೆ ಬಹುಕಾಲ ಕಳೆದ ಬಳಿಕ ಕಳೆದ ನಾಲ್ಕು ತಿಂಗಳ ಹಿಂದೆ ಕೇವಲ ನಾಲ್ಕು ಬಸ್‌ಗಳನ್ನು ಇತರೆ ಮಾರ್ಗಗಳಲ್ಲಿ ಆರಂಭಿಸಿದ್ದು, ಹುಬ್ಬಳ್ಳಿ ಮಾರ್ಗದಲ್ಲಿ ಯಾವುದೇ ಬಸ್ ಚಾಲನೆ ಮಾಡಲಾಗಿಲ್ಲ ಎಂಬುದು ವಿಷಾದನೀಯ ಸಂಗತಿ.
ಈ ವಿಷಯವನ್ನು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಹುಬ್ಬಳ್ಳಿ ಮಾರ್ಗವನ್ನು ಅನೇಕ ವಿದ್ಯಾರ್ಥಿಗಳು, ನೌಕರರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ದಿನನಿತ್ಯದ ಕೆಲಸಕಾರ್ಯಗಳಿಗೆ ಅವಲಂಬಿಸುತ್ತಿದ್ದಾರೆ. ಆದರೆ ಹೊಸ ಸಾರಿಗೆ ಘಟಕದಿಂದ ಈ ಮಾರ್ಗಕ್ಕೆ ಇಂದಿಗೂ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರು ತೊಂದರೆಅನುಭವಿಸುತ್ತಿದ್ದಾರೆ.
ಮುಂಡಗೋಡ ಸಾರಿಗೆ ನಿಲ್ದಾಣ ಅಧಿಕಾರಿಗಳು ಸಾರ್ವಜನಿಕರ ಮನವಿಗೆ ಸರಿಯಾದ ಸ್ಪಂದನೆ ನೀಡುತ್ತಿಲ್ಲ. ದಿನನಿತ್ಯ ಪ್ರಯಾಣ ಮಾಡುವವರು ಮಾಸಿಕ ಪಾಸ್ ಮಾಡಿಸಲು ಹೋದರೆ, ಇಂದು ಪಾಸ್ ಇಲ್ಲ. ನಾಳೆ ಬನ್ನಿ. ಎಂದು ಕೆಲವೊಮ್ಮೆ ಮಾಸಿಕ ಪಾಸ್ ಖಾಲಿಯಾಗಿದೆ ಎಂದು ಉಡಾಫೆ ಉತ್ತರ ನೀಡುತ್ತಾರೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ಹಾಗೂ ನೌಕರರು ತೊಂದರೆ ಅನುಭವಿಸುತ್ತಿದ್ದಾರೆ.ನಿಲ್ದಾಣದ ಅಧಿಕಾರಿಗಳಿಗೆ, ಶಾಸಕರಿಗೆ ಹಾಗೂ ಸಾರಿಗೆ ನಿಯಂತ್ರಣ ಅಧಿಕಾರಿಗೆ ಮನವಿ ನೀಡಲಾಗಿದ್ದು, ಸಮಸ್ಯೆಗೆ ಪರಿಹಾರ ಸಿಗದೇ ಇದ್ದಲ್ಲಿ ನ. 17ರಂದು ಪ್ರತಿಭಟನೆ ನಡೆಸಿ, ಶಿವಾಜಿ ವೃತ್ತದಲ್ಲಿ ರಸ್ತೆ ತಡೆ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.