ಮುರುವದಲ್ಲಿ ಅಪ್ರಾಪ್ತೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಸಮಗ್ರ ತನಿಖೆಗೆ ಮನವಿ

KannadaprabhaNewsNetwork | Updated : Apr 05 2025, 12:10 PM IST

ಸಾರಾಂಶ

ಮುರುವದಲ್ಲಿ ಅಪ್ರಾಪ್ತೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಮಾನವ ಬಂಧುತ್ವ ವೇದಿಕೆಯ ಪದಾಧಿಕಾರಿಗಳು ವಿಟ್ಲ ಪೊಲೀಸ್ ಉಪನಿರೀಕ್ಷಕರಿಗೆ ಮನವಿ ನೀಡಿದ್ದಾರೆ.

  ಬಂಟ್ವಾಳ : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಮುರುವದಲ್ಲಿ ಅಪ್ರಾಪ್ತೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಮಾನವ ಬಂಧುತ್ವ ವೇದಿಕೆಯ ಪದಾಧಿಕಾರಿಗಳು ವಿಟ್ಲ ಪೊಲೀಸ್ ಉಪನಿರೀಕ್ಷಕರಿಗೆ ಮನವಿ ನೀಡಿದ್ದಾರೆ. ಬಾಲಕಿಯ ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳುವ ಜತೆಗೆ ಧನ ಸಹಾಯ ನೀಡಿದರು.

ಮುರುವ ಗ್ರಾಮದ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ದಾಖಲಾಗಿರುವ ಪ್ರಕರಣಕ್ಕೆ ಸಬಂಧಿಸಿ ಆರೋಪಿಯನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದ ಬಗ್ಗೆ ಅನುಮಾನಗಳಿದ್ದು, ಗರ್ಭಪಾತ ನಡೆಸಿದ ಶಂಕೆಯೂ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಸಂತ್ರಸ್ತೆ ಅಪ್ರಾಪ್ತ ವಯಸ್ಕೆಯೂ, ಪರಿಶಿಷ್ಟ ಜಾತಿಗೆ ಸೇರಿದವಳೂ ಆಗಿರುವುದರಿಂದ ಆಕೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳ ಗಂಭೀರತೆಯ ಅರಿವಿಲ್ಲದವಳಾಗಿದ್ದಾಳೆ. ಆಕೆಯು ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದು ಜನರನ್ನು ಭೇಟಿಯಾಗಲು ಹಿಂಜರಿಯುತ್ತಿದ್ದಾಳೆ. ಈ ಎಲ್ಲಾ ಕಾರಣಗಳಿಂದ ಸಂತ್ರಸ್ತೆ ಖಿನ್ನತೆಗೆ ಈಡಾಗಿದ್ದು ತನ್ನ ಮೇಲೆ ನಡೆದ ಲೈಂಗಿಕ ದಾಳಿಯ ವಿವರಗಳನ್ನು ನೀಡಲು ಅಸಮರ್ಥಳಾದುದರಿಂದ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಕಂಡುಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಬಾಲಕಿ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದು ಆಕೆಗೆ ತಜ್ಞ ಸಮಾಲೋಚಕರಿಂದ ಆಪ್ತಸಲಹೆ ನೀಡಿ ಉಪಚರಿಸಬೇಕು. ಆರೋಪಿಯ ಸಹಚರರು ದೂರುದಾರರನ್ನು ಬೆದರಿಸುತ್ತಿರುವ ಬಗ್ಗೆ ಇದೇ ಠಾಣೆಯಲ್ಲಿ ದೂರು ದಾಖಲಾಗಿದ್ದು ಬೆದರಿಕೆ ಆರೋಪಿ ಹರೀಶ ಮಣಿಯಾಣಿ ಎಂಬಾತನನ್ನೂ ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ನಿಯೋಗದಲ್ಲಿ ಅಮಳ ರಾಮಚಂದ್ರ, ಎಂ.ಬಿ.ವಿಶ್ವನಾಥ ರೈ , ರಾಮಣ್ಣ ಪಿಲಿಂಜ, ಮೌರಿಸ್ ಮಸ್ಕರೇನ್ಹಸ್, ಉಲ್ಲಾಸ್ ಕೋಟ್ಯಾನ್, ವಿಜಯಲಕ್ಷ್ಮಿ, ಶೇಷಪ್ಪ ನೆಕ್ಕಿಲು, ಅಬ್ದುಲ್ ರೆಹಮಾನ್ ಯೂನಿಕ್, ಜಾನ್ ಕೆನ್ಯೂಟ್, ಅಬ್ದುಲ್ ಖಾದರ್ ಆದರ್ಶನಗರ ಹಾಜರಿದ್ದರು.

Share this article