ಸಂಡೂರು: ರಾಜ್ಯದಲ್ಲಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿರುವ ಮರಾಠ ಸಮಾಜದ ಸ್ಥಿತಿಗತಿ ಮೇಲೆ ಕುಲಶಾಸ್ತ್ರೀಯ ಅಧ್ಯಯನ ಮಾಡಲು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಮಗದ ಅಧ್ಯಕ್ಷ ಜಿ.ಎಚ್. ಮರಿಯೋಜಿರಾವ್ ತಿಳಿಸಿದರು. ಪಟ್ಟಣದ ಎಲ್‌ಬಿ ಕಾಲೋನಿಯಲ್ಲಿ ನೆಲೆಸಿರುವ ನಾಡೋಜ ಡಾ. ವಿ.ಟಿ. ಕಾಳೆ ಅವರನ್ನು ನಿಗಮದ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ರಾಜ್ಯದಲ್ಲಿ ಸಾವಿರಾರು ವರ್ಷಗಳಿಂದ ಮರಾಠ ಸಮಾಜ ನೆಲೆಸಿದೆ. ರಾಜ್ಯದಲ್ಲಿ ಮರಾಠರ ಜನಸಂಖೆ 60 ಲಕ್ಷ ಇದೆ. ಆದರೆ, ಸಮಾಜ ಮಾತ್ರ ಹಿಂದುಳಿದಿದೆ. ಅಧಿಕಾರ ವಹಿಸಿಕೊಂಡು ಎರಡೂವರೆ ತಿಂಗಳಾಗಿದೆ. ಇನ್ನೂ ಎರಡುವರೆ ವರ್ಷ ಕಾಲಾವಧಿಯಲ್ಲಿ ಸಮಾಜದ ಅಭಿವೃದ್ಧಿಗೆ ರಚನಾತ್ಮಕ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ದೇವರಾಜು ಅರಸು ಅವಧಿಯಲ್ಲಿಯೇ ಮರಾಠ ಸಮಾಜವನ್ನು 2ಎ ಗೆ ಸೇರಿಸುವ ಅವಕಾಶ ಸಿಕ್ಕಿತ್ತು. ಆದರೆ, ಇಚ್ಛಾಶಕ್ತಿ ಕೊರತೆಯಿಂದ ಸಾಧ್ಯವಾಗಲಿಲ್ಲ. ಈಗ ಸರ್ಕಾರ ನನ್ನ ಸೇವೆಯನ್ನು ಪರಿಗಣಿಸಿ ಮರಾಠ ಸಮಾಜದ ನಿಗಮದ ಅಧ್ಯಕ್ಷನನ್ನಾಗಿ ಮಾಡಿದೆ. ಈ ಅವಕಾಶ ಬಳಸಿಕೊಂಡು ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ, ಮರಾಠ ಸಮಾಜವನ್ನು 2ಎ ಗೆ ಸೇರಿಸಲು ಎಐಸಿಸಿ ವರಿಷ್ಠರು ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕಾರ್ಮಿಕ ಸಚಿವ ಸಂತೋಷ್ ಲಾಡ್, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ, ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರ ಗಮನ ಸೆಳೆಯಲಾಗುವುದು. ಮರಾಠ ನಿಗಮದ ವ್ಯಾಪ್ತಿಗೆ ಕ್ಷತ್ರಿಯ ಮರಾಠ, ಅರೆ ಕ್ಷತ್ರಿಯ, ಆರ್ಯ ಮರಾಠ, ಆರ್ಯ, ಕೊಂಕಣ ಮರಾಠಿ, ಕೃಷಿಯ ಮರಾಠ ಮತ್ತು ಕುಳವಾಡಿ ಜಾತಿಗಳು ಬರಲಿದ್ದು, ಇವರಿಗೆ ಸೌಲಭ್ಯ ಕಲ್ಪಿಸಲಾಗವುದು ಎಂದರು. ಈ ಸಂದರ್ಭದಲ್ಲಿ ವಿ.ಟಿ. ಕಾಳೆಯವರ ಪತ್ನಿ ಕಾಶಿಬಾಯಿ ವಿ. ಕಾಳೆ, ಚಿತ್ರ ಕಲಾವಿದ ಕಾಶಿನಾಥ ವಿ. ಕಾಳೆ, ಶ್ರೀನಾಥ ವಿ. ಕಾಳೆ, ಕಾರ್ತಿಕ್ ವಿ. ಕಾಳೆ ಹಾಗೂ ಮರಾಠ ಸಮಾಜದ ಮುಖಂಡ ಜಿ.ಎಚ್. ಭೋಸ್ಲೆ ಉಪಸ್ಥಿತರಿದ್ದರು.