ಹೂವಿನಹಡಗಲಿ: ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಸಾಧಕ-ಬಾಧಕ ಮತ್ತು ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ, ಕಾಲುವೆ ನಿರ್ವಹಣೆಗೆ ಅನುದಾನ ಕೊರತೆ ಇನ್ನಿತರ ಸಮಸ್ಯೆಗಳ ಕುರಿತು ಶಾಸಕ ಕೃಷ್ಣನಾಯ್ಕ ಸದನದಲ್ಲಿ ಚರ್ಚಿಸಿದರು.
ಇದಕ್ಕೆ ಉಪ ಮುಖ್ಯಮಂತ್ರಿಗಳ ಪರವಾಗಿ ಸಚಿವ ಎಚ್.ಕೆ. ಪಾಟೀಲ್, ಸಿಂಗಟಾಲೂರು ಏತ ನೀರಾವರಿ ಯೋಜನೆಯು ಬಲದಂಡೆ ಭಾಗದಲ್ಲಿ 35791 ಎಕರೆ, ಎಡದಂಡೆ ಭಾಗದಲ್ಲಿ 2,65,229 ಎಕರೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಇದೇ ನೀರಿನಿಂದ ಗದಗ ದ್ರೋಣ ಕೆರೆ, ಡಂಬಳ ಕೆರೆಗೂ ನೀರು ತುಂಬಿಸಲಾಗುತ್ತಿದೆ. ಜತೆಗೆ ಬಲ ದಂಡೆ ಭಾಗದಲ್ಲಿ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಇದಕ್ಕಾಗಿ 768 ಎಕರೆಗೆ ₹8.38 ಕೋಟಿ ಪರಿಹಾರ ವಿತರಣೆ ಬಾಕಿ ಇದೆ. ಈಗಾಗಲೇ ಕೆಲ ಜರೂರು ಇರುವ ಕಾಮಗಾರಿಗೆ ₹5 ಕೋಟಿ ಮಂಜೂರು ಮಾಡಿದ್ದೇವೆ ಎಂದು ಉತ್ತರ ನೀಡಿದರು.
ಇದಕ್ಕೆ ಶಾಸಕ ಕೃಷ್ಣನಾಯ್ಕ, ನಮ್ಮ ತಾಲೂಕಿನಲ್ಲಿರುವ ವಿಶೇಷ ಭೂ ಸ್ವಾಧೀನಾಧಿಕಾರಿಗಳ ಕಚೇರಿಯಲ್ಲಿ ಯಾವೊಬ್ಬ ಅಧಿಕಾರಿಯೂ ಇಲ್ಲ, ರೈತರ ಭೂಮಿ ಸರ್ವೆ ಮಾಡಿ ಪರಿಹಾರ ನೀಡಲು ಸರ್ವೆಯರ್ ಇಲ್ಲ, ಹೀಗೆ ಒಟ್ಟಾರೆ ಅಧಿಕಾರಿಗಳೇ ಇಲ್ಲ ಅಂದ ಮೇಲೆ ನೀವು ರೈತರಿಗೆ ಹೇಗೆ ಪರಿಹಾರ ನೀಡುತ್ತೀರಿ ಎಂದರು.ಹೂವಿನಹಡಗಲಿ ತಾಲೂಕಿನ 35791 ಎಕರೆ ನೀರಾವರಿ ಪ್ರದೇಶದಲ್ಲಿ, ಕಾಲುವೆ ಸೋರುತ್ತಿದೆ. ಪೈಪ್‌ಲೈನ್ ಸೋರಿಕೆಯಿಂದ ರೈತರ ಜಮೀನುಗಳಲ್ಲಿ ನೀರು ನಿಂತು ರೈತರು ಹಾನಿ ಅನುಭವಿಸುತ್ತಿದ್ದಾರೆ. ಹೆಚ್ಚುವರಿ ಪಂಪ್, ಮೋಟಾರ್‌ಗಳಿಲ್ಲ, ವಿದ್ಯುತ್ ಪರಿವರ್ತಕಗಳಿಲ್ಲ, ಸಾಕಷ್ಟು ಬಾರಿ ಮೋಟಾರ್‌ಗಳು ಸುಟ್ಟಿವೆ. ಜತೆಗೆ ₹28.94 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ. ಇದರಿಂದ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ. ಆದರಿಂದ ಈ ಯೋಜನೆ ಪೂರ್ಣಗೊಂಡು 15 ವರ್ಷಗಳು ಕಳೆದರೂ ಇನ್ನು ಕಾಮಗಾರಿ ಅರೆಬರೆಯಾಗಿದೆ. ರೈತರಿಗೆ ಸಮರ್ಪಕ ರೀತಿಯಲ್ಲಿ ನೀರು ಕೊಡಲು ಆಗುತ್ತಿಲ್ಲ. ಅತ್ತ ತಳಕಲ್ಲು, ಹಿರೇಮಲ್ಲನಕೆರೆಯ ಕೆರೆ, ಬನ್ನಿಕಲ್ಲು ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಹೇಳಿದರು.
ಇದಕ್ಕೆ ಸಚಿವ ಎಚ್.ಕೆ. ಪಾಟೀಲ್, ಈ ಯೋಜನೆಯ ವ್ಯಾಪ್ತಿಯ ಶಾಸಕರು, ಸಚಿವರು ಸೇರಿಕೊಂಡು ಉಪ ಮುಖ್ಯಮಂತ್ರಿ ಬಳಿ ಹೋಗಿ ಮೋಟಾರ್‌ಗಳು, ಪಂಪು ಸೇರಿದಂತೆ ಇದರ ಸಾಧಕ-ಬಾಧಕಗಳನ್ನು ಚರ್ಚಿಸೋಣ ಎಂದರು.