ಯಲಬುರ್ಗಾ: ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿ ಎತೇಚ್ಛವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆದು ಮದ್ಯಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ಕರವೇ (ಎಚ್. ಶಿವರಾಮೇಗೌಡ ಬಣ) ನೇತೃತ್ವದಲ್ಲಿ ಸಾರ್ವಜನಿಕರು, ಮಹಿಳೆಯರು ಬೃಹತ್ ಪ್ರತಿಭಟನೆ ನಡೆಸಿದರು.
ತಾಪಂ ಮಾಜಿ ಸದಸ್ಯ ಶರಣಪ್ಪ ಈಳಿಗೇರ್ ಮಾತನಾಡಿ, ಯುವಕರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ. ಮದ್ಯ ಮಾರಾಟ ವಿರೋಧಿಸಿ ತಾಯಂದಿರು, ಸಾರ್ವಜನಿಕರು ಬೀದಿಗಳಿದು ಹೋರಾಟ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಕೂಡಲೇ ಮದ್ಯ ಅಕ್ರಮ ಮಾರಾಟ ನಿಲ್ಲಬೇಕು ಎಂದರು.
ಬೇಡಿಕೆಗಳು: ಅಕ್ರಮ ಮದ್ಯ ಮಾರಾಟ ತಡೆಯಬೇಕು. ಮದ್ಯ ಮಾರಾಟ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಸೇವನೆಯಿಂದ ಮರಣ ಹೊಂದಿದ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಮದ್ಯ ಅಕ್ರಮವಾಗಿ ಸರಬರಾಜು ಮಾಡುತ್ತಿರುವ ಅಂಗಡಿ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಗ್ರಾಪಂ ಚಾಕಚೇರಿಯಿಂದ ಜಾಗೃತಿ ಮೂಡಿಸಬೇಕು.ಯುವಕರು ಮನೆಯಲ್ಲಿರುವ ಒಡವೆ, ಅಕ್ಕಿ, ಬೆಲ್ಲ ಬೇಳೆ ಮಾರಾಟ ಮಾಡಿ ಮದ್ಯ ಸೇವಿಸಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಾವು ಮನೆ ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಮದ್ಯ ಮಾರಾಟ ತಡೆಯಬೇಕೆಂದು ಧ್ವನಿ ಎತ್ತಿದರೆ ಬೆದರಿಕೆ ಹಾಕುತ್ತಾರೆ. ಹೀಗಾದರೆ ಬದುಕು ಹೇಗೆ ನಡೆಸಬೇಕು ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ತಾಪಂ ಇಒ ನೀಲಗಂಗಾ ಬಬಲಾದ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಪಿಎಸ್ಐ ವಿಜಯ ಪ್ರತಾಪ, ಅಬಕಾರಿ ಇಲಾಖೆ ಸಿಪಿಐ ರವಿಕುಮಾರ, ಪಿಎಸ್ಐ ನೀಲಾ, ತಹಸೀಲ್ ಕಚೇರಿ ಶಿರಸ್ತೇದಾರ ದೇವರಡ್ಡಿ, ಸಿಬ್ಬಂದಿ ಕೊಟ್ರಯ್ಯ, ಪಿಡಿಒ ರವಿಕುಮಾರ ಲಿಂಗಣ್ಣವರ, ಕಳಕನಗೌಡ ಪಾಟೀಲ್, ದುರಗಪ್ಪ ನಡುಲಮನಿ, ದೇವಪ್ಪ ಪರಂಗಿ, ಚನ್ನಮ್ಮ, ಮರಿಯಮ್ಮ, ದುರಗಮ್ಮ, ಅನ್ನಪೂರ್ಣ,ಕರವೇ ಮುಖಂಡ ಶಿವರಾಜ ಚಿಕ್ಕೊಪ್ಪ, ಕಲ್ಲಿನಾಥ ಹಡಪದ, ಚಿದಾನಂದ ಈಳಗೇರ, ಶರಣಪ್ಪ ಹಳ್ಳಿಗುಡಿ, ಮಂಜುನಾಥ ಕುದ್ರಿಕೊಟಗಿ, ಮುದಕಪ್ಪ ಗೌಡ್ರ, ಮಂಜುನಾಥ ಅಟಮಾಳಗಿ, ಬಸವರಾಜ ಕಂಬಳಿ, ರುದ್ರೇಶ ಮುಶಿಗೇರಿ, ರಮೇಶ ಕಂಬಳಿ ಸೇರಿದಂತೆ ಮತ್ತಿತರರು ಇದ್ದರು.