ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಸಿಕ್ಕಷ್ಟು ಮಹತ್ವ ವಿಜ್ಞಾನಕ್ಕಿಲ್ಲ: ಐಐಟಿ ಪ್ರಾಧ್ಯಾಪಕ ಶಿವಪ್ರಸಾದ

KannadaprabhaNewsNetwork |  
Published : Dec 12, 2025, 02:30 AM IST
ಮದಮದಮದಮ | Kannada Prabha

ಸಾರಾಂಶ

ಪ್ರಕೃತಿಯ ಕೌತುಕದ ಕುರಿತು ವಿಚಾರ ಮಾಡುವವರು ವಿಜ್ಞಾನಿ. ಅವರು ಹೇಳಿದ್ದನ್ನು ಅಧ್ಯಯನ ಮಾಡಿ, ಏನೆಲ್ಲ ಮಾಡಬಹುದೆಂದು ಯೋಚಿಸುವವರು ತಂತ್ರಜ್ಞಾನಿ. ಇದನ್ನು ಕಾರ್ಯರೂಪಕ್ಕೆ ತರುವವರು ಎಂಜಿನಿಯರ್‌ಗಳು.

ಹುಬ್ಬಳ್ಳಿ:

ದೇಶದಲ್ಲಿ ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಸಿಕ್ಕಷ್ಟು ಮಹತ್ವ ವಿಜ್ಞಾನ ಕ್ಷೇತ್ರಕ್ಕೆ ಸಿಕ್ಕಿಲ್ಲ ಎಂದು ಧಾರವಾಡ ಐಐಟಿ ಪ್ರಾಧ್ಯಾಪಕ ಎಸ್‌.ಎಂ. ಶಿವಪ್ರಸಾದ ಅಭಿಪ್ರಾಯಪಟ್ಟರು. ನಗರದ ಲ್ಯಾಮಿಂಗ್ಟನ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಜ್ಞಾನ ಕಾರ್ಯಾಗಾರ ಹಾಗೂ ವಿಜ್ಞಾನ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಜ್ಞಾನಿ, ತಂತ್ರಜ್ಞಾನಿ ಹಾಗೂ ಎಂಜಿನಿಯರ್‌ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಇದರ ಅರಿವು ವಿದ್ಯಾರ್ಥಿಗಳಿಗೆ ಇರಬೇಕು. ಜತೆಗೆ ಅದರ ಆಧಾರದ ಮೇಲೆ ತಮ್ಮ ಜೀವನದ ಗುರಿ ನಿಗದಿಪಡಿಸಿಕೊಂಡು ಮುನ್ನಡೆಯಬೇಕು ಎಂದರು.

ಪ್ರಕೃತಿಯ ಕೌತುಕದ ಕುರಿತು ವಿಚಾರ ಮಾಡುವವರು ವಿಜ್ಞಾನಿ. ಅವರು ಹೇಳಿದ್ದನ್ನು ಅಧ್ಯಯನ ಮಾಡಿ, ಏನೆಲ್ಲ ಮಾಡಬಹುದೆಂದು ಯೋಚಿಸುವವರು ತಂತ್ರಜ್ಞಾನಿ. ಇದನ್ನು ಕಾರ್ಯರೂಪಕ್ಕೆ ತರುವವರು ಎಂಜಿನಿಯರ್‌ಗಳು ಎಂದು ತಿಳಿಸಿದರು.100 ವರ್ಷಗಳಲ್ಲಿ ವಿಜ್ಞಾನವು ತಂತ್ರಜ್ಞಾನವಾಗಿ ಪರಿವರ್ತನೆಯಾಗಿದೆ. ವಾಹನ ಚಾಲನೆ, ಬ್ಯಾಂಕಿಂಗ್‌, ನಿರ್ಮಾಣ ವಲಯ, ವೈದ್ಯಕೀಯ, ಸಾಫ್ಟ್‌ವೇರ್‌, ನ್ಯಾಯಾಲಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂದಿನ 10ರಿಂದ 15 ವರ್ಷಗಳಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಮಾನವನೇ ಇಲ್ಲದೆ, ಎಲ್ಲ ಕೆಲಸಗಳನ್ನು ಯಂತ್ರಗಳೇ ಮಾಡಲಿವೆ ಎಂದರು.

ಮನೆ ಮನೆಗೆ ರೋಬೋಟ್‌ ಬರುವ ಕಾಲ ದೂರವಿಲ್ಲ. ಮನುಷ್ಯನಿಗೆ ಉದ್ಯೋಗವೇ ಇರದ ಆ ಸಂದರ್ಭವನ್ನು ಎದುರಿಸಲು ವಿದ್ಯಾರ್ಥಿಗಳು ಈಗಿನಿಂದಲೇ ಚಿಂತನೆ ನಡೆಸಬೇಕು. ಮಹತ್ತರವಾದ ಸಾಧನೆಯ ಕನಸು ಕಂಡು, ಅದರ ಬೆನ್ನತ್ತಿ ಯಶಸ್ವಿಯಾಗಬೇಕು. ಅಂಕಗಳಿಗೆ ಬೆಲೆ ಇಲ್ಲ ಎಂಬುದನ್ನು ಮನಗಂಡು, ತಮ್ಮ ಆಸಕ್ತಿ ನಿಗದಿಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು, ಮಕ್ಕಳನ್ನು ಸಜ್ಜುಗೊಳಿಸಿಬೇಕು ಎಂದು ಸಲಹೆ ನೀಡಿದರು.

ಮೇಳದ ಸಂಯೋಜಕಿ ಎಸ್.ಎಸ್. ಮುಲ್ಕಿಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಪ್ರಾಥಮಿಕ ಶಾಲೆ, ಬಾಲಕರ ಪ್ರೌಢಶಾಲೆ ಹಾಗೂ ಬಾಲಕಿಯರ ಪ್ರೌಢಶಾಲೆ ವಿಭಾಗದಲ್ಲಿ ಉತ್ತಮ ಮಾದರಿ ತಯಾರಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕ್ಷೇತ್ರ ಸಂಪನ್ಮೂಲ ಅಧಿಕಾರಿ ಅನುರಾಧ, ಲ್ಯಾಮಿಂಗ್ಟನ್‌ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಎಂ. ಪೈಕೋಟಿ, ಕಾರ್ಯಾಧ್ಯಕ್ಷ ಸುರೇಶ ಕಿಣಿ, ಆಡಳಿತ ಮಂಡಳಿ ಕಾರ್ಯದರ್ಶಿ ಶಶಿ ಸಾಲಿ, ಸದಸ್ಯ ಮುರುಳೀಧರ ಕರ್ಜಗಿ, ಪ್ರಾಥಮಿಕ ಶಾಲೆಯ ಪ್ರಾಚಾರ್ಯೆ ಸೌಮ್ಯಪ್ರಭು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ