ಕಾಸರಗೋಡು ಕನ್ನಡಿಗರಿಗೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಮನವಿಕೇರಳ ಸರ್ಕಾರಕ್ಕೆ ಕರ್ನಾಟಕ ನವನಿರ್ಮಾಣ ಸೇನೆ ಮನವಿ

KannadaprabhaNewsNetwork | Published : Nov 24, 2024 1:47 AM

ಸಾರಾಂಶ

ಒಂದು ವೇಳೆ ಕಾಸರಗೋಡು ಕನ್ನಡಿಗರಿಗೆ ಕೇರಳ ಸರ್ಕಾರ ಅನ್ಯಾಯ ಮಾಡಿದ್ದೇ ಆದರೆ ಕರ್ನಾಟಕ ನವನಿರ್ಮಾಣ ಸೇನೆ ತಿರುವನಂತಪುರಂನ ಸೆಕ್ರೆಟ್ರಿಯೇಟ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಿದೆ ಎಂದು ಕರ್ನಾಟಕ ನವನಿರ್ಮಾಣ ಸೇನೆ ಮನವಿಯಲ್ಲಿ ಎಚ್ಚರಿಕೆ ನೀಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಗಡಿನಾಡು ಕಾಸರಗೋಡು ಜಿಲ್ಲೆಯ ಕನ್ನಡಿಗರಿಗೆ ಭಾಷಾ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವಂತೆ ಕೇರಳ ಸರ್ಕಾರಕ್ಕೆ ಕರ್ನಾಟಕ ನವನಿರ್ಮಾಣ ಸೇನೆ ಮನವಿ ಸಲ್ಲಿಸಿದೆ. ಕಾಸರಗೋಡು ಜಿಲ್ಲಾಧಿಕಾರಿಗೆ ಸೇನೆಯ ರಾಜ್ಯಾಧ್ಯಕ್ಷ ಭೀಮಾ ಶಂಕರ ಪಾಟೀಲ್‌ ಶನಿವಾರ ಮನವಿ ಸಲ್ಲಿಸಿ, ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭದಲ್ಲಿ ಉದ್ದೇಶಪೂರ್ವಕ ಸಂಚಿನಿಂದ ಕಾಸರಗೋಡು ಕನ್ನಡಿಗರಿಗೆ ಆದ ಅನ್ಯಾಯವನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.

ಕರ್ನಾಟಕದ ಭೂ ಭಾಗವಾಗಿದ್ದ ಕಾಸರಗೋಡು ಅಪ್ಪಟ ಕನ್ನಡದ ನೆಲ. ಇಂದು ಭೌಗೋಳಿಕವಾಗಿ ಕೇರಳ ರಾಜ್ಯದಲ್ಲಿದ್ದರೂ ಇಲ್ಲಿಯ ಕನ್ನಡಿಗರ ಮಾತೃ ಭಾಷೆ ಕನ್ನಡ. ಕೇರಳ ಸರ್ಕಾರ ಬಲವಂತವಾಗಿ ಮಲಯಾಳಂ ಹೇರಿಕೆ ಮಾಡಿ ಕಾಸರಗೋಡು ಕನ್ನಡಿಗರ ಸಂವಿಧಾನಬದ್ಧ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯುತ್ತಿರುವುದು ಖಂಡನಿಯ. ಶಿಕ್ಷಣ, ಉದ್ಯೋಗ, ನಾಮಫಲಕಗಳಲ್ಲಿ ಭಾಷಾ ಅಲ್ಪಸಂಖ್ಯಾತರ ಕಾಯಿದೆಯ ಪ್ರಕಾರ ಇಲ್ಲಿಯ ಕನ್ನಡಿಗರಿಗೆ ಕೇರಳ ಸರ್ಕಾರ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಕೆಲಸ ಮಾಡಬೇಕು.

ಕೇರಳ ಸರ್ಕಾರ ಕಾಸರಗೋಡಿನ ವಿಚಾರದಲ್ಲಿ ಭಾಷಾ ದ್ವೇಷದ ಕೆಲಸ ಮಾಡುತ್ತಿದೆ. ಕಾಸರಗೋಡು ಕನ್ನಡಿಗರಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡದೆ ಮಲಯಾಳಂ ಭಾಷಾ ಮಾಧ್ಯಮ ಜಾರಿಗೆ ತಂದು ಬಲವಂತವಾಗಿ ಮಲಯಾಳಂ ಹೇರಿಕೆ ಮಾಡುತ್ತಿದೆ. ಕನ್ನಡಿಗರನ್ನು ಕೇರಳ ಸರ್ಕಾರ ಸವತಿ ಮಕ್ಕಳಂತೆ ಕಾಣುವ ಕೆಲಸ ಮಾಡಬಾರದು. ಕಾಸರಗೋಡಿನ ಕನ್ನಡಿಗರ ಹಕ್ಕು ರಕ್ಷಣೆಯ ಜೊತೆಯಲ್ಲಿ ಹಿತ ಕಾಯುವ ಕೆಲಸ ಕೇರಳ ಸರ್ಕಾರ ಮಾಡಬೇಕು. ಕಾಸರಗೋಡು ಜಿಲ್ಲೆ ವ್ಯಾಪ್ತಿಯಲ್ಲಿ ಕಡ್ಡಾಯ ಕನ್ನಡ ನಾಮಫಲಕ ಪ್ರದರ್ಶಿಸುವ ಕೆಲಸ ತಕ್ಷಣದಿಂದ ಕೇರಳ ಸರ್ಕಾರ ಮಾಡಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆ ಆಗ್ರಹಿಸಿದೆ.

ಕಾಸರಗೋಡು ಕನ್ನಡಿಗರಿಗೆ ಭಾಷಾ ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕು. ಮಲಯಾಳಂ ಭಾಷಾ ಮಸೂದೆಯಿಂದ ಕಾಸರಗೋಡು ಜಿಲ್ಲೆಯನ್ನು ಹೊರಗಿಡಬೇಕು. ಒಂದು ವೇಳೆ ಕಾಸರಗೋಡು ಕನ್ನಡಿಗರಿಗೆ ಕೇರಳ ಸರ್ಕಾರ ಅನ್ಯಾಯ ಮಾಡಿದ್ದೇ ಆದರೆ ಕರ್ನಾಟಕ ನವನಿರ್ಮಾಣ ಸೇನೆ ತಿರುವನಂತಪುರಂನ ಸೆಕ್ರೆಟ್ರಿಯೇಟ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಿದೆ ಎಂದು ಕರ್ನಾಟಕ ನವನಿರ್ಮಾಣ ಸೇನೆ ಮನವಿಯಲ್ಲಿ ಎಚ್ಚರಿಕೆ ನೀಡಿದೆ.

Share this article