ಗ್ಯಾಂಗ್‌ರೇಪ್‌ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲು ಮನವಿ

KannadaprabhaNewsNetwork |  
Published : May 25, 2025, 02:51 AM IST
ಹಾನಗಲ್ಲಿನಲ್ಲಿ ಮಹಿಳೆಯರು ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿದರು. | Kannada Prabha

ಸಾರಾಂಶ

ಹಾನಗಲ್ಲ ತಾಲೂಕಿನಲ್ಲಿ ಹಿಂದೆ ನಡೆದ ಗ್ಯಾಂಗ್‌ರೇಪ್‌ನಲ್ಲಿ ಭಾಗಿಯಾಗಿದ್ದರೆನ್ನಲಾದ ಆರೋಪಿತರು ಜಾಮೀನು ಮೇಲೆ ಬಿಡುಗಡೆಯಾದಾಗ ನಡೆದುಕೊಂಡ ರೀತಿ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದಾಗಿದ್ದು, ಅವರೆಲ್ಲರನ್ನೂ ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಹಾನಗಲ್ಲಿನ ಜಾಗ್ರತ ಮಹಿಳಾ ವೇದಿಕೆ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.

ಹಾನಗಲ್ಲ: ತಾಲೂಕಿನಲ್ಲಿ ಹಿಂದೆ ನಡೆದ ಗ್ಯಾಂಗ್‌ರೇಪ್‌ನಲ್ಲಿ ಭಾಗಿಯಾಗಿದ್ದರೆನ್ನಲಾದ ಆರೋಪಿತರು ಜಾಮೀನು ಮೇಲೆ ಬಿಡುಗಡೆಯಾದಾಗ ನಡೆದುಕೊಂಡ ರೀತಿ ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದಾಗಿದ್ದು, ಅವರೆಲ್ಲರನ್ನೂ ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಹಾನಗಲ್ಲಿನ ಜಾಗ್ರತ ಮಹಿಳಾ ವೇದಿಕೆ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.

ಶನಿವಾರ ಹಾನಗಲ್ಲಿನ ತಹಸೀಲ್ದಾರ್‌ ಕಚೇರಿಯಲ್ಲಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಮಧುಮತಿ ಪೂಜಾರ, ಮಹಿಳೆಗೆ ರಕ್ಷಣೆಯೇ ಇಲ್ಲ ಎಂಬ ಭಾವನೆ ಮೂಡಿದೆ. ಮಹಿಳೆಯರನ್ನು ಗೌರವಿಸದೇ ಇರುವುದು ಈ ಸಾಮಾಜಿಕ ವ್ಯವಸ್ಥೆಯ ಅತ್ಯಂತ ಅನಾರಿಕತೆಯಾಗಿದೆ. ಈ ಪ್ರಕರಣದಲ್ಲಿ ಆರೋಪಿತರು ಜಾಮೀನು ಸಿಕ್ಕ ಮಾತ್ರಕ್ಕೆ ಇಡೀ ಮಹಿಳಾ ಸಮಾಜಕ್ಕೆ ಅವಮಾನ ಆಗುವಂತಹ ರೀತಿಯಲ್ಲಿ ಮೆರವಣಿಗೆ ಮಾಡಿದ್ದು ಹಾಗೂ ಅವನ್ನೆಲ್ಲ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ್ದು, ಕಾನೂನಿನ ಭಯವೇ ಅವರಿಗಿಲ್ಲ ಎಂದು ಭಾಸವಾಗುತ್ತದೆ. ಶಿಕ್ಷೆ ಅನುಭವಿಸಬೇಕಾದವರು, ಜಾಮೀನು ಸಿಕ್ಕ ತಕ್ಷಣ ನ್ಯಾಯಾಲಯದ ಸಮೀಪದಿಂದಲೇ ಇಂತಹ ಕೃತ್ಯಕ್ಕೆ ಮುಂದಾಗಿರುವುದು ಕಾನೂನು ಸುವಸ್ಥೆಯನ್ನು ಪ್ರಶ್ನಿಸುವಂತಾಗಿದೆ. ೭ ಆರೋಪಿತರಲ್ಲದೆ, ಅದನ್ನು ಬೆಂಬಲಿಸಿದ ಎಲ್ಲರ ಮೇಲೂ ಪ್ರಕರಣ ದಾಖಲಿಸಿ ಪಾಠ ಕಲಿಸಬೇಕು. ಇಲ್ಲದಿದ್ದರೆ ಇಂತಹ ಪ್ರಕರಣಗಳಿಗೆ ಇನ್ನಷ್ಟು ಪುಷ್ಟಿ ನೀಡಿದಂತಾಗುತ್ತದೆ. ಪುಂಡಾಟಗಳು ನಿಲ್ಲಬೇಕು. ಅದಕ್ಕಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕಾಣದ ಕೈಗಳು ಈ ಆರೋಪಿತರನ್ನು ರಕ್ಷಿಸಲು ಮುಂದಾಗಬಾರದು. ಜಾಮೀನು ದೊರೆತ ದಿನವೇ ಇಂಥ ರೋಡ್‌ ಶೋ ನಡೆಸಿರುವುದು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರ ಸಂಕೇತ. ರೋಡ್‌ಶೋಗೆ ಬಳಸಿದ ವಾಹನಗಳು, ಅರೋಪಿಗಳನ್ನು ಬಂಧಿಸಿ, ಇಡೀ ಸಮಾಜವೇ ಮೆಚ್ಚುವಂತಹ ಶಿಕ್ಷೆಯನ್ನು ಕಾನೂನು ವ್ಯಾಪ್ತಿಯಲ್ಲಿ ನೀಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಮಹಾಂತೇಶ ದಾನಮ್ಮನವರ, ಪ್ರಕರಣ ನಿರ್ಲಕ್ಷ್ಯ ಮಾಡುವುದಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಕ್ರಮ ಜರುಗಿಸಲಾಗುತ್ತದೆ. ಈ ಪ್ರಕರಣದಲ್ಲಿ ತಪ್ಪಿಸತಸ್ಥರನ್ನು ರಕ್ಷಿಸುವ ಪ್ರಶ್ನೇಯೇ ಉದ್ಭವಿಸದು ಎಂದರು. ತಹಸೀಲ್ದಾರ್‌ ಎಸ್. ರೇಣುಕಾ ಈ ಸಂದರ್ಭದಲ್ಲಿದ್ದರು.

ಜಾಗ್ರತ ಮಹಿಳಾ ವೇದಿಕೆ ಹಾಗೂ ಇತರ ಮಹಿಳಾ ಸಂಘಟನೆಗಳ ಮುಖಂಡರಾದ ರೇಖಾ ಶೆಟ್ಟರ, ಸುಜಾತಾ ನಂದೀಶೆಟ್ಟರ, ಕಮಲಾಕ್ಷಿ ಕೊಂಡೋಜಿ, ಮಂಜುಳಾ ಮಡಿವಾಳರ, ಆರ್.ಆರ್. ನೇತ್ರಾವತಿ, ನ್ಯಾಯವಾದಿ ವೀಣಾ ಬ್ಯಾತನಾಳ, ಅನುಪಮಾ ಉಪ್ಪಿನ ಹಾಗೂ ಹಲವು ಮಹಿಳೆಯರು ಪಾಲ್ಗೊಂಡಿದ್ದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ