ನಿವೇಶನ ಹದ್ದುಬಸ್ತಿಗೆ ಅಲೆಮಾರಿ ಸಮುದಾಯದಿಂದ ಮನವಿ

KannadaprabhaNewsNetwork | Published : Mar 27, 2025 1:01 AM

ಸಾರಾಂಶ

ಈ ಕುರಿತು ಮಾತನಾಡಿದ ಸುಡುಗಾಡುಸಿದ್ದ ಸಮಾಜದ ಸೋಮಣ್ಣ ಕೂಡ್ಲಿಗಿ, ನಮ್ಮನ್ನು ಈ ಊರಿನ ಹೊರಭಾಗಕ್ಕೆ ಸ್ಥಳಾಂತರಿಸಿ ಯಾವುದೇ ಸೌಲಭ್ಯ ನೀಡದೇ ಅಧಿಕಾರಿಗಳು ಸಮುದಾಯವನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದರು.

ಹಾನಗಲ್ಲ: ಪಟ್ಟಣದ ಹೊರವಲಯದ ಪಾಳಾ ರಸ್ತೆಗೆ ಹೊಂದಿಕೊಂಡಿರುವ ಆಶ್ರಯ ನಿವೇಶನಗಳಲ್ಲಿ ವಾಸಿಸುತ್ತಿರುವ ಸುಡಗಾಡು ಸಿದ್ದರು ಹಾಗೂ ಡೊಂಬರು ಸಮುದಾಯದವರು ತಮಗೆ ನೀಡಿದ್ದ ನಿವೇಶನಗಳನ್ನು ಸರಿಯಾಗಿ ಅಳತೆ ಮಾಡಿಕೊಡುವಂತೆ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.ಮಂಗಳವಾರ ತಹಸೀಲ್ದಾರ್ ಎಸ್. ರೇಣುಕಾ ಅವರಿಗೆ ಮನವಿ ಸಲ್ಲಿಸಿರುವ ಅವರು, 2020- 21ರಲ್ಲಿಯೇ ಈ ನಿವೇಶನಗಳ ಹಕ್ಕುಪತ್ರದ ಝೆರಾಕ್ಸ್ ಪ್ರತಿಯನ್ನು ಪುರಸಭೆ ಈ ಫಲಾನುಭವಿಗಳಿಗೆ ವಿತರಿಸಿದೆ. ಪ್ರತಿ ನಿವೇಶನದ ಅಳತೆ 20x30 ಎಂದು ಹಕ್ಕುಪತ್ರದಲ್ಲಿ ನಮೂದಿಸಲಾಗಿದೆ. ಆದರೆ ನಿವೇಶನಗಳ ಅಳತೆ ಕಡಿಮೆ ಅಳತೆಯಲ್ಲಿವೆ. ಈ ಬಗ್ಗೆ ಹಲವು ಬಾರಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಎಲ್ಲ ಫಲಾನುಭವಿಗಳು ನಿವೇಶನದಲ್ಲಿ ಮನೆ ನಿರ್ಮಿಸಿಕೊಳ್ಳಲು ಸಮಸ್ಯೆ ಎದುರಾಗಿದೆ.

ಇದರೊಂದಿಗೆ ಮೂಲ ಸೌಲಭ್ಯಗಳ ಕೊರತೆಯೂ ಇದೆ. ಪುರಸಭೆಯಿಂದ ಕುಡಿಯುವ ನೀರಿಗಾಗಿ ಯಾವುದೇ ಅನುಕೂಲತೆ ಒದಗಿಸಿಲ್ಲ. ಈ ನಿವೇಶನಗಳ ಪಕ್ಕದಲ್ಲಿರುವ ಜಮೀನಿನ ಕೊಳವೆ ಬಾವಿಯಿಂದ ನೀರನ್ನು ಹೊತ್ತು ತರಬೇಕಾದ ಅನಿವಾರ್ಯತೆ ಈ ಫಲಾನುಭವಿಗಳಿಗೆ ಎದುರಾಗಿದೆ. ಜಮೀನಿನಲ್ಲಿರುವ ಈ ರೈತರ ಕೊಳವೆ ಬಾವಿ ಕೆಟ್ಟುಹೋದರೆ ನೀರಿಲ್ಲದೇ ಎಲ್ಲ ಕುಟುಂಬಗಳೂ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ. ಕೂಡಲೇ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.ಈ ಕುರಿತು ಮಾತನಾಡಿದ ಸುಡುಗಾಡುಸಿದ್ದ ಸಮಾಜದ ಸೋಮಣ್ಣ ಕೂಡ್ಲಿಗಿ, ನಮ್ಮನ್ನು ಈ ಊರಿನ ಹೊರಭಾಗಕ್ಕೆ ಸ್ಥಳಾಂತರಿಸಿ ಯಾವುದೇ ಸೌಲಭ್ಯ ನೀಡದೇ ಅಧಿಕಾರಿಗಳು ಸಮುದಾಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಇಲ್ಲಿ ಬಹುತೇಕ ಸುಡಗಾಡುಸಿದ್ದರು ಹಾಗೂ ಡೊಂಬರು ಸಮುದಾಯದವರೇ ಇದ್ದಾರೆ. ಹಳ್ಳಿ- ಪಟ್ಟಣಗಳಿಗೆ ತೆರಳಿ ಸಣ್ಣಪುಟ್ಟ ವ್ಯಾಪಾರ, ವ್ಯವಹಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ನಮಗೆ ಎರಡು ಹೊತ್ತಿನ ಊಟಕ್ಕೂ ತೊಂದರೆಯಿದೆ. ಇಂಥದ್ದರಲ್ಲಿ ಮೂಲ ಸೌಲಭ್ಯಗಳೂ ಇಲ್ಲದೇ ಜೀವನ ದೂಡುವಂತಾಗಿದೆ. ಕೂಡಲೇ ತಾಲೂಕು ಆಡಳಿತ ನಮಗೆ ಅಗತ್ಯ ಸೌಲಭ್ಯ ಒದಗಿಸಿ, ಉಪಕರಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ದುರಗಪ್ಪ ಕರಿಯವರ, ವೀರೇಶ ಕೂಡ್ಲಿಗಿ, ದುರಗಪ್ಪ ವಿಭೂತಿ, ರಾಜು ಕಲ್ಯಾಣದವರ, ಚಂದ್ರಶೇಖರ ಒಂಟೆತ್ತಿನವರ, ಸಣ್ಣಹುಸೇನಪ್ಪ ಒಂಟೆತ್ತಿನವರ ಇತರರು ಇದ್ದರು. 28ರಂದು ರೇನ್‌ಬೋ ಕಾಲೇಜಿನ ಕಟ್ಟಡ ಉದ್ಘಾಟನೆ

ರಾಣಿಬೆನ್ನೂರು: ತಾಲೂಕಿನ ಕಮದೋಡ ಗ್ರಾಮದ ಪಿಬಿ ರಸ್ತೆ ಬಳಿ ರೇನ್‌ಬೋ ರೆಸಿಡೆನ್ಸಿಯಲ್ ಸ್ಕೂಲ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪಿಯು ಕಾಲೇಜಿನ ಕಟ್ಟಡ ಉದ್ಘಾಟನೆ ಸಮಾರಂಭ ಮಾ. 28ರಂದು ಬೆಳಗ್ಗೆ 11ಕ್ಕೆ ಜರುಗಲಿದೆ.ಸಂಸದ ಬಸವರಾಜ ಬೊಮ್ಮಾಯಿ ಮುಖ್ಯ ಅತಿಥಿಯಾಗಿ ಆಗಮಿಸುವರು. ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸುವರು.

ಹಾವೇರಿಯ ಪ್ರಭಾರಿ ಉಪನಿರ್ದೇಶಕ ಆನಂದ ಮುದುಕಮ್ಮನವರ, ಜಿಲ್ಲಾ ಬುಡಕಟ್ಟು ಕಲ್ಯಾಣ ಅಧಿಕಾರಿ ಮಂಜಾ ನಾಯ್ಕ, ವಿಶ್ರಾಂತ ಪ್ರಾಚಾರ್ಯ ಎಸ್.ಎನ್. ಕಟ್ಟೀಮನಿ ಇತರರು ವಿಶೇಷ ಆಹ್ವಾನಿತರಾಗಿ ಆಗಮಿಸುವರು ಎಂದು ಸಂಸ್ಥೆಯ ಅಧ್ಯಕ್ಷ ಡಾ. ಸುರೇಶ ಸಿ.ಟಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article