ಸಿದ್ದಾಪುರ: ಸಿಇಟಿ ಪರೀಕ್ಷೆ ವೇಳೆ ಜನಿವಾರ ಕತ್ತರಿಸಿರುವುದು, ಓಲೆ, ಮೂಗುತಿ ತೆಗೆಸಿರುವ ಕ್ರಮ ಖಂಡಿಸಿ ಪಟ್ಟಣದಲ್ಲಿ ವಿವಿಧ ಸಮಾಜದ ಮುಖಂಡರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಸರ್ಕಾರದ ಹಿಂದೂ ವಿರೋಧಿ ನಡೆಯನ್ನು ತಾಲೂಕಿನ ಹವ್ಯಕ, ದೈವಜ್ಞ, ಗೌಡ ಸಾರಸ್ವತ ಬ್ರಾಹ್ಮಣ ಸಮಾಜ, ನಾಮಧಾರಿ ಹಾಗೂ ಇತರ ಸಮಾಜದವರು ಖಂಡಿಸಿದರು. ಜನಿವಾರ ತೆಗೆಸಿದ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಹವ್ಯಕ ಸಮಾಜದ ಪ್ರಮುಖ ಮಹೇಶ ಹೆಗಡೆ ಚಟ್ನಹಳ್ಳಿ ಮಾತನಾಡಿ, ಭಾರತೀಯ ಸಂಸ್ಕೃತಿ ಅತ್ಯಂತ ವಿಶಿಷ್ಟವಾದದ್ದು. ನಮ್ಮ ಸಂಸ್ಕೃತಿಯಲ್ಲಿ ಶಾಸ್ತ್ರಗಳಿಗೆ ವಿಶೇಷ ಸ್ಥಾನಮಾನವಿದೆ. ಪ್ರತಿಯೊಂದು ಧರ್ಮಕ್ಕೂ ಅದರದೇ ಆದ ಪ್ರಾಮುಖ್ಯತೆ ಇದೆ. ಆದರೆ ಇತ್ತೀಚೆಗೆ ಬ್ರಾಹ್ಮಣರನ್ನು ಅವಹೇಳನ ಮಾಡುವಂತಹ ಅನೇಕ ಪ್ರಕರಣಗಳು ನಡೆಯುತ್ತಿವೆ. ಇಂಥ ಕೃತ್ಯಗಳು ಒಂದು ವ್ಯಕ್ತಿಯಿಂದ ಆಗಿದ್ದಲ್ಲ. ಸಂಘಟಿತರಾಗಿ ಸಮಾಜದ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು. ಇದೇ ರೀತಿ ಮುಂದುವರಿದರೆ ನಮ್ಮ ಬ್ರಾಹ್ಮಣ ಸಮಾಜ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬ್ರಾಹ್ಮಣ ಮಹಾಸಭೆಯ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಮಾತನಾಡಿ, ಜನಿವಾರ ತೆಗೆಸಿದ್ದು ಕಾನೂನು ಬಾಹಿರ ಪ್ರಹಾರವಾಗಿದೆ. ಇದನ್ನು ಬ್ರಾಹ್ಮಣರಿಗೆ ಸೀಮಿತವಾಗಿರದೆ ಇದು ಸಮಸ್ತ ಹಿಂದೂ ಬಂಧುಗಳ ಮೇಲೆ ಆದ ಅಪಚಾರ ಎಂದು ಭಾವಿಸಿ, ಸರ್ಕಾರ ಸ್ಪಷ್ಟೀಕರಣದೊಂದಿಗೆ ಸರ್ಕಾರ ತನ್ನ ನಿಲುವನ್ನು ಸಾಬೀತುಪಡಿಸಬೇಕು. ಸರ್ಕಾರ ಸಮಸ್ತ ರಾಜ್ಯದ ಕ್ಷಮೆ ಯಾಚಿಸಬೇಕು. ಇಂಥ ಘಟನೆಗಳು ಮರುಕಳಿಸಿದಂತೆ ಸರ್ಕಾರ ಎಚ್ಚರ ವಹಿಸಬೇಕು. ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ಸರ್ಕಾರದ ವೆಚ್ಚದಿಂದ ಅವರು ಕೇಳುವ ಕಾಲೇಜುಗಳಲ್ಲಿ ಪ್ರವೇಶ ನೀಡಬೇಕು ಎಂದರು.ತಾಲೂಕು ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ. ನಾಯ್ಕ ಮಾತನಾಡಿ, ತೊಂದರೆಗೊಳಗಾದ ವಿದ್ಯಾರ್ಥಿಗೆ ಯಾವುದೇ ಕಾಲೇಜಿಲ್ಲಿ ಪ್ರವೇಶ ನೀಡುತ್ತೇನೆ ಎಂದರೆ ಮಾಡಿದ ಘಟನೆ ಮುಗಿದು ಹೋಗುವುದಿಲ್ಲ. ಇಂಥ ಘಟನೆಗಳು ಅಲ್ಪಸಂಖ್ಯಾತರವರ ಮೇಲೆ ನಡೆದಿದ್ದರೆ ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಸ್ಪಷ್ಟನೆ ಕೊಡುತ್ತಿದ್ದರು. ನಾವು ಇನ್ನೂ ಸಂಘಟಿತರಾಗದೆ ಹೋದರೆ ಕಾಶ್ಮೀರದಲ್ಲಿ ನಡೆದಂತಹ ಘಟನೆ ಸಿದ್ದಾಪುರದಲ್ಲಿಯೂ ನಡೆಯಬಹುದು. ಜನಿವಾರ ತೆಗೆಸಿದರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ತೊಂದರೆಗಳಗಾದ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಕೊಡಿಸಬೇಕು, ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದರು. ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖ ಸದಸ್ಯ ಗುರುರಾಜ, ಅಖಿಲ ಭಾರತ ಹವ್ಯಕ ಸಮಾಜದ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ದೈವಜ್ಞ ಬ್ರಾಹ್ಮದ ಪ್ರಮುಖ ವಿನಾಯಕ ಶೇಟ್, ಹಿರಿಯ ವಕೀಲ ರವಿ ಹೆಗಡೆ ಹೂವಿನಮನೆ ಮಾತನಾಡಿದರು.
ಉಪ ತಹಸೀಲ್ದಾರ್ ಶ್ಯಾಮಸುಂದರ್ ನಾಯ್ಕ್ ಮನವಿ ಸ್ವೀಕರಿಸಿದರು.