ಕನ್ನಡಪ್ರಭ ವಾರ್ತೆ ಮೂಲ್ಕಿ
ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಗಳಿಗೆ ಪಂಚಾಯಿತಿಯಿಂದ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಚೇಳೈರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಾನಂದ ಚೇಳೈರು ಹೇಳಿದ್ದಾರೆ.ಚೇಳೈರು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಚೇಳೈರು ಗ್ರಾಮ ಪಂಚಾಯಿತಿಯ 2024/25 ನೇ ಸಾಲಿನ ಅನುದಾನದಲ್ಲಿ ಶಾಲೆಗಳಿಗೆ ,ಅರೋಗ್ಯ ಕೇಂದ್ರ ಹಾಗೂ, ಪರಿಶಿಷ್ಟ ಜಾತಿ ಪಂಗಡದವರಿಗೆ, ವೈಯಕ್ತಿಕ ಫಲಾನುಭವಿಗಳಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು.
ಚೇಳೈರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಶಾಸಕರ ಮುತುವರ್ಜಿಯಲ್ಲಿ ವಿವಿಧ ಇಲಾಖೆಗಳ ಮುಖಾಂತರ 30 ಕೋಟಿ ರು. ಅನುದಾನದ ಕಾಮಗಾರಿ ನಡೆದಿದೆ. ಮಧ್ಯ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನಿವೇಶನಕ್ಕೆ 4 ಎಕರೆ ಸರ್ಕಾಕಾರಿ ಜಾಗವಿದ್ದು ಅದಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಎರಡು ವರ್ಷಗಳ ಹಿಂದೆ ಕೋಟ ಶ್ರೀನಿವಾಸ ಪೂಜಾರಿ ಮುಖಾಂತರ 1 ಕೋಟಿ ರು. ಅನುದಾನ ಅಭಿವೃದ್ಧಿಗೆ ಬಿಡುಗಡೆಯಾಗಿದೆ. ಪಂಚಾಯಿತಿ ನಿವೇಶನ ನೀಡಲು ಫಲಾನುಭವಿಗಳ ಆಯ್ಕೆ ಮಾಡಿದ್ದು ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು ಅದಷ್ಟು ಬೇಗ ಪೂರ್ತಿಗೊಳಿಸುವ ಜವಾಬ್ದಾರಿ ಸಮಾಜ ಕಲ್ಯಾಣ ಇಲಾಖೆ ಮತ್ತು ನಿರ್ಮಿತಿ ಕೇಂದ್ರದ್ದಾಗಿದೆ ಎಂದರು.ಮಧ್ಯ ಗ್ರಾಮದಲ್ಲಿ 8 ಎಕರೆ ಇತರರಿಗೆ ನಿವೇಶನ ನೀಡಲು ಸರ್ಕಾರಿ ಜಾಗವಿದ್ದು ಅದರಲ್ಲಿ 4 ಎಕರೆ ಜಾಗದಲ್ಲಿ ಫಲಾನುಭವಿಗಳನ್ನು ಗುರುತಿಸಿ ಅದಷ್ಟು ಶೀಘ್ರವಾಗಿ ನಿವೇಶನ ರಹಿತರಿಗೆ ನಿವೇಶನ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿತ್ಯಾನಂದ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ಮನೆ ತೆರಿಗೆ, ನೀರಿನ ತೆರಿಗೆ ಕಟ್ಟಿ ಸಹಕರಿಸಬೇಕು. ಯಾವುದೇ ತೆರಿಗೆ ಬಾಕಿ ಇರಿಸಿದ್ದಲ್ಲಿ ಪಂಚಾಯಿತಿ ವತಿಯಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೇಖಾ, ಸದಸ್ಯರಾದ ಸುಧಾಕರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಯಶೋದ ಬಿ, ಸುಕುಮಾರಿ, ಚರಣ್ ಕುಮಾರ್, ಲತಾ, ಚೇಳೈರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜ್ಯೋತಿ ಚೇಳೈರು, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ತೆರೇಸಾ ವೇಗಸ್, ಗ್ರಾಮ ಪಂಚಾಯಿತಿಯ ಸುರೇಶ್, ರಾಜೇಶ್ವರಿ, ವಿನಯ ಸಾಲ್ಯಾನ್, ಸಂತೋಷ್ ಶೆಟ್ಟಿ, ಶಕೀಲಾ, ಮೋದಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.