ಕುಷ್ಟಗಿ: ಭಾರತ ಸರ್ಕಾರವು ಅಮೆರಿಕದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ)ಕ್ಕೆ ಸಹಿ ಹಾಕಬಾರದು.ಈ ಒಪ್ಪಂದ ಜಾರಿಯಾದರೆ ದೇಶದ ಕೃಷಿ, ಆಹಾರ ಸಾರ್ವಭೌಮತೆ ಹಾಗೂ ಕೋಟ್ಯಂತರ ರೈತರು ಮತ್ತು ಕೃಷಿ ಕಾರ್ಮಿಕರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ದೇಶದ ಕೃಷಿ ವ್ಯವಸ್ಥೆಯೇ ಕಾರ್ಪೊರೇಟ್ ಕಂಪನಿಗಳ ಹಿಡಿತಕ್ಕೆ ಸಿಲುಕುವ ಅಪಾಯವಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಆರ್.ಕೆ. ದೇಸಾಯಿ ಹೇಳಿದರು.
ಅಮೆರಿಕದಂತಹ ರಾಷ್ಟ್ರಗಳು ತಮ್ಮ ರೈತರಿಗೆ ಭಾರೀ ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತಿವೆ. ಅಂತಹ ದೇಶಗಳ ಕೃಷಿ ಉತ್ಪನ್ನ ಭಾರತಕ್ಕೆ ಮುಕ್ತವಾಗಿ ಆಮದುಗೊಂಡರೆ ದೇಶೀಯ ರೈತರು ಸ್ಪರ್ಧಿಸಲು ಸಾಧ್ಯವಿಲ್ಲ. ಇದರಿಂದ ಸಣ್ಣ ಮತ್ತು ಮಧ್ಯಮ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಆರ್ಥಿಕತೆಯ ಮೇಲೆ ನೇರ ಪರಿಣಾಮ ಉಂಟಾಗಲಿದೆ ಎಂದರು.
ಆಹಾರ ಉತ್ಪಾದನೆ ಮತ್ತು ವಿತರಣೆಯ ಮೇಲಿನ ನಿಯಂತ್ರಣ ಕ್ರಮೇಣ ಬಹುರಾಷ್ಟ್ರೀಯ ಹಾಗೂ ದೊಡ್ಡ ಕಾರ್ಪೊರೇಟ್ ಕಂಪನಿಗಳ ಕೈಗೆ ಹೋಗುವ ಅಪಾಯವಿದ್ದು, ಇದು ದೇಶದ ಆಹಾರ ಭದ್ರತೆ ಮತ್ತು ಸ್ವಾವಲಂಬನೆಗೂ ಧಕ್ಕೆಯಾಗಲಿದೆ. ರೈತರ ಹಿತಾಸಕ್ತಿಗೆ ವಿರುದ್ಧ ಯಾವುದೇ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದು ಎಂದು ಆಗ್ರಹಿಸಿದರು.ರೈತರ ಅಭಿಪ್ರಾಯ ಕಡೆಗಣಿಸಿ ಯಾವುದೇ ಅಂತಾರಾಷ್ಟ್ರೀಯ ವ್ಯಾಪಾರ ಒಪ್ಪಂದಕ್ಕೆ ಮುಂದಾಗುವುದು ಸರಿಯಲ್ಲ. ರೈತ ಸಂಘಟನೆ, ಕೃಷಿ ತಜ್ಞರು ಹಾಗೂ ರಾಜ್ಯಗಳ ಅಭಿಪ್ರಾಯ ಪಡೆದು ಮಾತ್ರ ಇಂತಹ ಮಹತ್ವದ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷೆ ಸಂಗಮ್ಮ ಗುಳಗೌಡರ, ಉಪಾಧ್ಯಕ್ಷೆ ಅಕ್ಕಮ್ಮ ಮರೆಗೌಡರ, ಕಾರ್ಯದರ್ಶಿ ಅಮರೇಗೌಡ ಪಾಟೀಲ, ಪಾರ್ವತೆಮ್ಮ ಶಿರಗುಂಪಿ, ಮಲ್ಲಿಕಾರ್ಜುನ ತಳಗೇರಿ, ಶೇಖರ ಎಲಿಗಾರ, ಹುಸೇನಸಾಬ್ ತಾವರಗೇರಾ ಸೇರಿದಂತೆ ಸಂಘದ ಪದಾಧಿಕಾರಿ ಹಾಗೂ ರೈತರು ಉಪಸ್ಥಿತರಿದ್ದರು.