ಹುಬ್ಬಳ್ಳಿ: ವಿವಿಧ ರೈಲು ಯೋಜನೆ ಮತ್ತು ಸೇವೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಂ. ಮಹೇಶ್ವರ ಸ್ವಾಮಿ ಅವರ ನೇತೃತ್ವದ ನಿಯೋಗವು ನೈಋತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಪದ್ಮನಾಭ ಅನಂತ್ ಹಾಗೂ ಹುಬ್ಬಳ್ಳಿ ವಿಭಾಗದ ಡಿಆರ್‌ಎಂ ಮೀನಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಬಳ್ಳಾರಿಯಿಂದ ಬೆಂಗಳೂರಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಉದಯ್ ಇಂಟರ್‌ಸಿಟಿ, ಜನಶತಾಬ್ದಿ ಅಥವಾ ವಂದೇ ಭಾರತ್ ರೈಲನ್ನು ಆರಂಭಿಸಬೇಕೆಂಬ 20 ವರ್ಷಗಳ ಹಳೆಯ ಬೇಡಿಕೆ ಈಡೇರಿಸುವಂತೆ ಮನವಿ ಮಾಡಲಾಯಿತು. ಇದಲ್ಲದೆ, ಹೊಸಪೇಟೆ-ಮುಂಬೈ ರೈಲಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬಳ್ಳಾರಿಯಿಂದ ಬೆಳಗ್ಗೆ 11.30ಕ್ಕೆ ಹೊಸ ರೈಲು ಸೇವೆ ಆರಂಭಿಸುವಂತೆ ಕೋರಲಾಯಿತು.
ಶಿವಮೊಗ್ಗ-ಬಳ್ಳಾರಿ-ಚೆನ್ನೈ ಬೈ-ವೀಕ್ಲಿ ಎಕ್ಸ್‌ಪ್ರೆಸ್ ರೈಲನ್ನು ಪುನರಾರಂಭಿಸಬೇಕು, ಬೆಳಗಾವಿ-ಮುನಗೂರು ಎಕ್ಸ್‌ಪ್ರೆಸ್ ಅನ್ನು ವಾರದ ಸೇವೆಯಿಂದ ದಿನನಿತ್ಯದ ರೈಲಾಗಿ ಪರಿವರ್ತಿಸಬೇಕು ಹಾಗೂ ಬಳ್ಳಾರಿಯ ಹೊಸ ಬಸ್ ನಿಲ್ದಾಣದ ಹಿಂಭಾಗದಲ್ಲಿ ಬಳ್ಳಾರಿ ಬೈಪಾಸ್ ರೈಲು ನಿಲ್ದಾಣವನ್ನು ಸ್ಥಾಪಿಸಬೇಕೆಂಬ ಬೇಡಿಕೆಗಳನ್ನೂ ನಿಯೋಗ ಮುಂದಿಟ್ಟಿತು.ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಈ ಹಿಂದೆ ಇದ್ದಂತೆ 12 ಸ್ಲೀಪರ್ ಬೋಗಿಗಳನ್ನು ಮರು ಅಳವಡಿಸಬೇಕು. ಪ್ರಸ್ತುತ ಇರುವ 9 ಸ್ಲೀಪರ್ ಬೋಗಿಗಳು ಪ್ರಯಾಣಿಕರ ಬೇಡಿಕೆಗೆ ಸಾಕಾಗುತ್ತಿಲ್ಲ ಎಂದು ತಿಳಿಸಲಾಯಿತು.