ಫಕೃದ್ದೀನ ಎಂ.ಎನ್.
ಪಟ್ಟಣವೂ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಮಹಿಳೆಯರು ತಲೆ ಮೇಲೆ ತವೆ ಇಟ್ಟು ಅದರ ಮೇಲೆ ಜಿಗಟು ಮಣ್ಣಿನಿಂದ ತಯಾರಿಸಿದ ಗುರ್ಜಿ ಮಾಡಿ ಅದನ್ನು ಹೊತ್ತು ಗುರ್ಜಿ... ಗುರ್ಜಿ... ಎಂದು ಹಾಡು ಹೇಳುತ್ತಾ ಗ್ರಾಮದ ಎಲ್ಲ ಮನೆ ಮುಂದೆ ಹೋಗಿ ನಿಲ್ಲುತ್ತಾರೆ. ಆಗ ಮನೆಯವರು ಬಂದು ಗುರ್ಜಿ ಹೊತ್ತವಳ ತಲೆ ಮೇಲೆ ನೀರು ಸುರಿದು ಪೂಜೆ ಮಾಡಿ ಬೇಗ ಮಳೆ ಬಂದು ಭೂಮಿ ತಾಯಿಗೆ ತಂಪೆರಗಲಿ ಎಂದು ಪೂಜೆ ಮಾಡುತ್ತಾರೆ.
ಮಳೆ ಬಾರದೆ ಇದ್ದಾಗ ಪೂರ್ವಜರ ಕಾಲದಿಂದಲೂ ಗ್ರಾಮೀಣವೂ ಸೇರಿ ಪಟ್ಟಣ ಪ್ರದೇಶಗಳಲ್ಲಿ ಹಿರಿಯರ ಕಾಲದಿಂದಲೂ ಆಚರಣೆಯಲ್ಲಿರುವ ಗುರ್ಜಿಪೂಜೆಯನ್ನು ಹಳ್ಳಿಗಳಲ್ಲಿ ಮಹಿಳೆಯರು ವಿಶಿಷ್ಟವಾಗಿ ಆಚರಿಸುತ್ತಾರೆ.ಈ ರೀತಿ ಪೂಜೆ ಮಾಡುವುದರಿಂದ ಮಳೆ ಆಗುವ ನಂಬಿಕೆ ರೈತಾಪಿ ಜನರಲ್ಲಿದೆ. ಮಳೆ ಬರುವ ನಂಬಿಕೆಯಿಂದ ರೈತಾಪಿ ಜನ ಬಿತ್ತನೆ ಮಾಡಿದ್ದು, ಈಗ ಮಳೆಯ ಆಗಮನಕ್ಕಾಗಿ ರೈತರು ಆಕಾಶದತ್ತ ನೋಡುವಂತಾಗಿದೆ. ಮಳೆ ಇಲ್ಲದೇ ಜನ, ಜಾನುವಾರಿಗೂ ಸಂಕಷ್ಟ ಎದುರಾಗಿದ್ದರಿಂದ ಮಹಿಳೆಯರು ಗುರ್ಜಿ ಪೂಜೆಯ ಮೊರೆ ಹೋಗಿದ್ದಾರೆ. ಜಾತಿ, ಮತ, ಪಂಥ-ಪಂಗಡಗಳ ಬೇಧ- ಭಾವವಿಲ್ಲದೇ ಇಡೀ ಊರೇ ಒಗ್ಗೂಡಿ ಸಕಲ ದೇವಾನುದೇವತೆಗಳಲ್ಲಿ ವರುಣನಿಗಾಗಿ ಭಕ್ತಿಪೂರ್ವಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.
ಮುಂಗಾರು ಆರಂಭದಲ್ಲಿ ಸುರಿದ ಮಳೆಗೆ ಈ ಭಾಗದಲ್ಲಿ ಹೆಸರು, ಗೋವಿನಜೋಳ, ಮೆಣಸಿನಕಾಯಿ, ಈರುಳ್ಳಿ, ಎಳ್ಳು, ಹುರುಳಿ ಅನೇಕ ಬೆಳೆಗಳನ್ನು ಬಿತ್ತಿರುವ ರೈತರ ಬೆಳೆಗಳು ಒಣಗಿ ಹೋಗುತ್ತಿವೆ. ಸದ್ಯ 2-3 ದಿನದಲ್ಲಿ ಮಳೆ ಆಗದೆ ಹೋದರೆ ಸಂಪೂರ್ಣ ಬೆಳೆ ಹರಗಬೇಕಾಗುತ್ತದೆ. ಬೀಜ, ಗೊಬ್ಬರ, ಕೂಲಿ, ಬಾಡಿಗೆ ಹೀಗೆ ಸಾಕಷ್ಟು ಖರ್ಚು ಮಾಡಿರುವ ರೈತರು ತಲೆ ಮೇಲೆ ಕೈ ಇಟ್ಟು ಮೋಡ ನೋಡುವಂತೆ ಮಾಡಿದೆ.
ಹಲವು ದಿನಗಳಿಂದ ಮಳೆ ಇಲ್ಲದ ಕಾರಣ ಬೆಳೆಗಳು ಒಣಗುವ ಹಂತಕ್ಕೆ ಬಂದಿವೆ. ಮಳೆ ಬರಲಿ ಎಂದು ಗುರ್ಜಿ ಪೂಜೆ ಮಾಡಲಾಗಿದೆ. ವರುಣ ದೇವರು ಈಗಲಾದರೂ ಕಣ್ಣು ಬಿಡುತ್ತಾನೆ ಎಂಬ ನಂಬಿಕೆಯಿಂದ ಈ ಪೂಜೆ ಮಾಡಲಾಗುತ್ತಿದೆ.
----
ಮಳೆ ಬಾರದ ಸಂದರ್ಭದಲ್ಲಿ ಆಕಳ ಸಗಣಿಯಿಂದ ಈಶ್ವರ ಮೂರ್ತಿ ತಯಾರಿಸಿ ತಲೆ ಮೇಲೆ ಹೊತ್ತು ಗರಿಕೆಯಿಂದ ಪೂಜೆ ಸಲ್ಲಿಸಿದರೆ ಮಳೆಯಾಗುತ್ತದೆ ಎಂಬುದು ಜನರ ನಂಬಿಕೆ. ಹೀಗಾಗಿ ಗುರ್ಜಿ ಪೂಜೆ ಮಾಡುವ ಸಂಪ್ರದಾಯವಾಗಿ ಬೆಳೆದು ಬಂದಿದೆ.
----
ನವಲಗುಂದ ಪಟ್ಟಣದ ಗವಿಮಠದಲ್ಲಿ ಮಳೆಗಾಗಿ ಮಹಿಳೆಯರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
25ಎಚ್‌ಯುಬಿ25ನವಲಗುಂದ ತಾಲ್ಲೂಕಿನ ದಾಟನಾಳ ಗ್ರಾಮದಲ್ಲಿ ಗುರ್ಜಿ ಪೂಜೆ ನೆರವೇರಿಸಲಾಯಿತು.
25ಎಚ್‌ಯುಬಿ26ನವಲಗುಂದ ತಾಲೂಕಿನ ದಾಟನಾಳ ಗ್ರಾಮದ ವಿವಿಧ ದೇವಸ್ಥಾನಗಳಲ್ಲಿ ಮಳೆಗಾಗಿ ಮಹಿಳೆಯರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.