ಎಸ್.ಜಿ. ತೆಗ್ಗಿನಮನಿ
ನರಗುಂದ: ತಾಲೂಕು ಬರದಿಂದ ತತ್ತರಿಸಿದ್ದು, ಮೊಳಕೆಯೊಡೆದು ಮೇಲೆದ್ದ ಬೆಳೆ ತೇವಾಂಶ ಕೊರತೆಯಿಂದ ಒಣಗುವ ಹಂತಕ್ಕೆ ಬಂದಿವೆ. ಇದಕ್ಕೆ ಸಾಕ್ಷಿಯಾಗಿ ವಾಣಿಜ್ಯ ಬೆಳೆ ಹತ್ತಿ ಮಳೆಯಾಗದೇ ಬಾಡಿದೆ. ಹೀಗಾಗಿ ರೈತರು ಬೆಳೆ ಉಳಿಸಲು ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.ಜೂನ್ ತಿಂಗಳ ಪ್ರಾರಂಭದಲ್ಲಿ ಸ್ವಲ್ಪ ರೈತರಿಗೆ ಬಿತ್ತನೆ ಮಾಡಲು ಅನುಕೂಲವಾಗುವಷ್ಟು ಮಳೆಯಾಯಿತು. ನಂತರ ಮಳೆರಾಯ ಕೈ ಕೊಟ್ಟಿದ್ದರಿಂದ ವಾಣಿಜ್ಯ ಬೆಳೆ ಹತ್ತಿ ಉಳಿಸಲು ರೈತರು ಟ್ಯಾಂಕರ್ ನೀರಿಗೆ ಮೊರೆ ಹೋಗುವಂತಾಗಿದೆ.
ಮುಂಗಾರು ಹಂಗಾಮಿನ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಹತ್ತಿ ರೈತರ ಆರ್ಥಿಕ ಸಬಲೀಕರಣಕ್ಕೆ ಮುನ್ನುಡಿ ಬರೆಯುತ್ತಿದೆ. ಎಕರೆಗೆ ₹20 ಸಾವಿರ ಖರ್ಚು ಮಾಡಿ ಬಿತ್ತನೆ ಕೈಗೊಂಡಿದ್ದಾರೆ. ಆದರೆ ಈಗಿನ ಬೆಳೆಯ ಪರಿಸ್ಥಿತಿ ನೋಡಿದರೆ ಬೆಳೆಯದಂತಹ ಸ್ಥಿತಿ ನಿರ್ಮಾಣವಾಗಿದೆ. ಪುಷ್ಯ ಮಳೆಯೂ ಸಂಪೂರ್ಣ ಕೈಕೊಟ್ಟಿದೆ. ಇದರಿಂದ ಲಾಭ ತರುವ ಹತ್ತಿ ಬೆಳೆ ಫಸಲು ಬರುವ ಲಕ್ಷಣಗಳು ಕಾಣುತ್ತಿಲ್ಲ.ಮುಂಗಾರು ಹಂಗಾಮಿನಲ್ಲಿ ಹೆಸರು, ಗೋವಿನ ಜೋಳ, ಬಿಟಿ ಹತ್ತಿ, ಸೂರ್ಯಕಾಂತಿ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಮಳೆ ಕೈಕೊಟ್ಟಿದ್ದರಿಂದ ಸದ್ಯ ಈ ಎಲ್ಲ ಬೆಳೆಗಳು ತೇವಾಂಶ ಕೊರತೆಯಿಂದ ಬಿಸಿಲಿನ ತಾಪಕ್ಕೆ ಒಣಗುತ್ತಿವೆ.
ಬೆಳೆ ಉಳಿಸಲು ಹರಸಾಹಸ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಕೊಳವೆಬಾವಿ ಹಾಗೂ ಊರಿನ ಸಮೀಪದ ಕೆರೆಗಳಲ್ಲಿರುವ ನೀರನ್ನು ಟ್ಯಾಂಕರ್ ಮೂಲಕ ನೀರು ಬಾಡಿಗೆ ಹಣ ನೀಡಿ ಹತ್ತಿ ಬೆಳೆಗೆ ಹಾಯಿಸುತ್ತಿದ್ದಾರೆ. ಇದರಿಂದ ಹತ್ತಿ ಬೆಳೆ ಉಳಿಸಿಕೊಳ್ಳಲು ಪ್ರಯತ್ನ ತಾಲೂಕಿನ ರೈತ ಸಮುದಾಯ ಮಾಡುತ್ತಿದೆ.
ಒಂದು ಎಕರೆಗೆ ಟ್ಯಾಂಕರ್ ನೀರು ಹಾಕಲು ₹10 ಸಾವಿರದ ವರೆಗೂ ಖರ್ಚಾಗುತ್ತದೆ. ಹೇಗಾದರೂ ಮಾಡಿ ಸದ್ಯ ಮಟ್ಟಿಗೆ ಈ ಹತ್ತಿ ಬೆಳೆ ಉಳಿಸಿಕೊಂಡರೆ ಮುಂದೆ ಮಳೆಯಾದರೆ ಬೆಳೆಗೆ ಅನುಕೂಲವಾಗುವುದೆಂದು ರೈತರು ಬಾಡಿಗೆ ಟ್ಯಾಂಕರ್ ಮೂಲಕ ಹತ್ತಿ ಬೆಳೆಗೆ ನೀರು ಉಣಿಸುತ್ತಿದ್ದಾರೆ.
ಪ್ರತಿವರ್ಷ ಈ ಭಾಗದ ಕಪ್ಪುಮಣ್ಣಿನ ಫಲವತ್ತಾದ ಭೂಮಿಯಲ್ಲಿ ರೈತರು ಹತ್ತಿ ಬಿತ್ತನೆ ಮಾಡುತ್ತಾರೆ. 1 ಎಕರೆಗೆ 10ರಿಂದ 15 ಕ್ವಿಂಟಲ್ ವರೆಗೆ ಹತ್ತಿ ಬೆಳೆಯುತ್ತಾರೆ. ತಾಲೂಕಿನಲ್ಲಿ ಪ್ರಸಕ್ತ ವರ್ಷ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದಾರೆ.ಪರಿಹಾರ ನೀಡಲಿ: ಈ ವರ್ಷ ಮಳೆಯಿಲ್ಲದೆ ರೈತರ ದುಸ್ಥಿತಿಯನ್ನು ಹೇಳತೀರದಾಗಿದೆ. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡಲೇ ಈ ಭಾಗವನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ 1 ಎಕರೆಗೆ ಕನಿಷ್ಠ ₹50 ಸಾವಿರ ಪರಿಹಾರ ನೀಡಬೇಕು ಎಂದು ರೈತ ಸಂಘ ಹಾಗೂ ಹಸಿರುಸೇನೆ ತಾಲೂಕಾಧ್ಯಕ್ಷ ಉಮೇಶ ಮರ್ಚಪ್ಪನವರ