ಕನ್ನಡಪ್ರಭ ವಾರ್ತೆ ವಿಜಯಪುರ
ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಪ್ರಮುಖ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಗೆ ಮನವಿ ಸಲ್ಲಿಸಿದರು.ಮನವಿ ಪತ್ರ ಸಲ್ಲಿಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಪುತ್ರ ಕಿರನಳ್ಳಿ, ಈವರೆಗೆ ಸರ್ಕಾರವು ಮಾನವೀಯ ದೃಷ್ಟಿಯಿಂದ, ಕಾನೂನು ದೃಷ್ಟಿಯಿಂದ ಮತ್ತು ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆಯನ್ನು ಪರಿಗಣಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಿರುವುದಿಲ್ಲ. ಇದರಿಂದ ನಮ್ಮ ಮನಸ್ಸಿಗೆ ತುಂಬಾ ನೋವಾಗಿರುವುದಲ್ಲದೆ ನಮ್ಮ ಭವಿಷ್ಯದ ಬದುಕನ್ನು ಭದ್ರತೆಯಿಂದ ಸಾಗಿಸುವುದು ಕೂಡ ಕಷ್ಟವಾಗಿದೆ. ಹಾಗಾಗಿ ನಮ್ಮ ಮಾನವೀಯ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯ ಒಳಗಾಗಿ ಈಡೇರಿಸಬೇಕೆಂದು ವಿನಂತಿ ಮಾಡಿದರು. ಒಂದು ವೇಳೆ ಸೆ.5 ರೊಳಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮತ್ತೆ ರಾಜ್ಯಾದ್ಯಂತ ಏಕಕಾಲಕ್ಕೆ ಶಾಲಾ-ಕಾಲೇಜುಗಳನ್ನು ಬಂದ್ ಮಾಡಿ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲು ಸಂಘಟನೆ ತೀರ್ಮಾನಿಸಬೇಕಾಗುತ್ತದೆ. ಆ ಬಳಿಕ ಆಗುಹೋಗುಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಹಕ್ಕೊತ್ತಾಯ ಮಾಡಿದರು. ಅಷ್ಟರೊಳಗೆ ವಿವಿಧ ಬೇಡಿಕೆಗಳನ್ನು ಸರಕಾರಕ್ಕೆ ಈಡೇರಿಸುವಂತೆ ಒತ್ತಾಯಿಸಿದರು.ಈ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಸಂಘದ ಅದ್ಯಕ್ಷ ಬಸಯ್ಯ ಹಿರೇಮಠ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶಿವಾನಂದ ಹಿರೇಕುರಬರ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ ವಪ್ಪಾರಿ, ಪ್ರಧಾನ ಕಾರ್ಯದರ್ಶಿ ಗಿರೀಶ ಬಿರಾದಾರ, ಆರ್.ಎಸ್.ತುಂಗಳ, ಎಸ್.ಜಿ.ಹಂಚಿನಾಳ, ಸರಕಾರಿ ಎನ್.ಪಿ.ಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಡಲಗೇರಿ, ಆನಂದ ಕುಲಕರ್ಣಿ, ಸಂಜೀವ ಫುಲಾರಿ, ವಿ.ಎನ್.ಚವ್ಹಾಣ, ರಮೇಶ ಗಂಗನಳ್ಳಿ, ಎಸ್.ಆರ್.ಮಠ, ಎನ್.ಎಸ್.ಕಾಳೆ, ಎನ್.ಎಸ್.ಕುಂದರಗಿ, ಅಶೋಕ ಕಟ್ಟಿ, ಮೌನೇಶ ಗೌಂಡಿ, ಶಿವಲಿಂಗ ಉಮ್ಮರಗಿ, ಮಂಜು ನಾಯ್ಕೋಡಿ, ಮಲ್ಲಿಕಾರ್ಜುನ ಲೋಣಿ, ವಿವಿಧ ತಾಲೂಕುಗಳ ಪದಾಧಿಕಾರಿಗಳು ನೌಕರರು ಉಪಸ್ಥಿತರಿದ್ದರು.