ವಿದ್ಯಾರ್ಥಿನಿ ಕೈಗೆ ಬ್ಲೇಡ್‌ನಿಂದ ಇರಿದ ವಿದ್ಯಾರ್ಥಿ: ಕೇಸು ದಾಖಲು

KannadaprabhaNewsNetwork | Published : Aug 21, 2024 12:36 AM

ಸಾರಾಂಶ

ಹಲ್ಲೆ ನಡೆಸಿದಾತ ಪಿಯುಸಿ ಆರ್ಟ್ಸ್ ವಿದ್ಯಾರ್ಥಿಯಾಗಿದ್ದು, ಹಲ್ಲೆಗೊಳಗಾದ ವಿದ್ಯಾರ್ಥಿನಿ ಕಾಮರ್ಸ್ ವಿದ್ಯಾರ್ಥಿನಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ ಅಪ್ರಾಪ್ರ ವಿದ್ಯಾರ್ಥಿಯೊಬ್ಬ ಅದೇ ಕಾಲೇಜಿನಲ್ಲಿ ಕಲಿಯುತ್ತಿರುವ ಅಪ್ರಾಪ್ತ ವಿದ್ಯಾರ್ಥಿನಿಗೆ ಹರಿತವಾದ ಬ್ಲೇಡ್‌ನಿಂದ ಇರಿದ ಪ್ರಕರಣ ಮಂಗಳವಾರ ಪುತ್ತೂರು ನಗರದ ಕೊಂಬೆಟ್ಟು ಶಾಲಾ ಬಳಿಯಲ್ಲಿ ನಡೆದಿದೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ನಡೆಸಿದಾತ ಪಿಯುಸಿ ಆರ್ಟ್ಸ್ ವಿದ್ಯಾರ್ಥಿಯಾಗಿದ್ದು, ಹಲ್ಲೆಗೊಳಗಾದ ವಿದ್ಯಾರ್ಥಿನಿ ಕಾಮರ್ಸ್ ವಿದ್ಯಾರ್ಥಿನಿಯಾಗಿದ್ದಾರೆ.

ಈ ಬಗ್ಗೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ವಿದ್ಯಾರ್ಥಿನಿ ನೀಡಿದ ಹೇಳಿಕೆಯಂತೆ ದೂರು ದಾಖಲಾಗಿದೆ. ಮಂಗಳವಾರ ಬೆಳಗ್ಗೆ ಸುಮಾರು ೮.೪೫ಕ್ಕೆ ಆರೋಪಿ ವಿದ್ಯಾರ್ಥಿಯು ನನ್ನನ್ನ ಕಾಲೇಜು ಬಳಿ ಫಾಲೋ ಮಾಡಿಕೊಂಡು ಬಂದು ನನ್ನ ಬಳಿ ಬಂದು ನೀನು ಹೇಮಲತಾನ ಗೆಳತಿ ಅಲ್ವಾ ಅಂತ ಕೇಳಿದ, ಅಲ್ಲದೇ ನಾನು ಹೇಮಲತಾಳನ್ನು ಲವ್ ಮಾಡಲ್ಲ, ನಿನ್ನ ಲವ್ ಮಾಡ್ತೇನೆ ಅಂದ. ಆಗ ನಾನು ವಿರೋಧಿಸಿದ್ದಕ್ಕೆ ನನ್ನ ಕೈಗೆ ಇರಿದು ಓಡಿದ ಯಾವುದರಲ್ಲಿ ಇರಿದ ಗೊತ್ತಾಗಿಲ್ಲ, ಬಹುಶಃ ಬ್ಲೇಡ್‌ನಲ್ಲಿ ಇರಬಹುದು ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ನಗರ ಠಾಣೆಯ ಪೊಲೀಸರು ಆರೋಪಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಬೇಕು: ಅರುಣ್‌ ಕುಮಾರ್‌ ಪುತ್ತಿಲ ಪುತ್ತೂರಿನ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿಗೆ ಚೂರಿ ಇರಿತ ಎಂಬ ಆರೋಪದ ಬಗ್ಗೆ ಅನುಮಾನವಿದ್ದು ತನಿಖೆ ನಡೆಸಿ ಶೀಘ್ರ ಸತ್ಯಸತ್ಯತೆ ಹೊರತರಬೇಕು ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಆಗ್ರಹಿಸಿದ್ದಾರೆ.

ಪುತ್ತೂರಿನ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿನಿಗೆ ಚೂರಿ ಇರಿತ ಎಂಬ ಆರೋಪದ ಬಗ್ಗೆ ಕ್ಷಣಕ್ಕೊಂದು ಹೇಳಿಕೆ ಬಗ್ಗೆ ಅನುಮಾನ ಸೃಷ್ಟಿಯಾಗಿದ್ದು, ಶೀಘ್ರ ಪೊಲೀಸರು ತನಿಖೆ ನಡೆಸಿ ಸತ್ಯಸತ್ಯತೆ ಹೊರ ತರಬೇಕು ಮೊದಲು ಚೂರಿಯಿಂದ ಇರಿತ ಎಂಬ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿತ್ತು, ನಂತರ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿಯ ವಿಡಿಯೋ ಬಿಡುಗಡೆಗೊಳಿಸಲಾಯಿತು. ಇದೀಗ ಚೂರಿ ಎಂಬ ಆರೋಪದ ಬದಲು ಬ್ಲೇಡ್, ಗ್ಲಾಸ್‌ನಿಂದ ಇರಿದಿದ್ದಾರೆ ಎಂಬ ಆರೋಪ ಬದಲಾಗುತ್ತಿರುವುದು ಮಾಧ್ಯಮ ವರದಿ ಮೂಲಕ ತಿಳಿದುಬಂತು. ಶಿಕ್ಷಣ ಕ್ಷೇತ್ರದಲ್ಲಿ ನಡೆದ ಘಟನೆಯ ಸತ್ಯಸತ್ಯತೆಯನ್ನು ಶೀಘ್ರ ಪೊಲೀಸರು ತನಿಖೆ ನಡೆಸಿ ಹೊರತರಬೇಕು. ಯಾವೂದೇ ರಾಜಕೀಯ ಒತ್ತಡಕ್ಕೆ ಪೊಲೀಸ್ ಇಲಾಖೆ ಬಗ್ಗದೆ ಘಟನೆಯ ನೈಜತೆಯನ್ನು ಶೀಘ್ರ ಹೊರತರಬೇಕು ಎಂದು ಅವರು ಆಗ್ರಹಿಸಿದ್ದಾರೆ. ಹಿಂಜಾವೇ ಆಗ್ರಹ: ಈ ಪ್ರಕರಣ ಕೋಮು ಗಲಭೆ ಸೃಷ್ಟಿಸುವ ಪೂರ್ವ ನಿಯೋಜಿತ ಕೃತ್ಯ, ಇದರ ಹಿಂದೆ ಇರುವ ಮತೀಯವಾದಿ ಸಂಘಟನೆ ಯಾವುದೆಂದು ಸೂಕ್ತ ತನಿಖೆ ನಡೆಸಿ ಪ್ರಕರಣ ದಾಖಲಿಸುವಂತೆ ಹಿಂದು ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಮಿತಿ ಒತ್ತಾಯಿಸಿದೆ.

Share this article