ವಸತಿಹೀನರಿಗೂ ಕೇಂದ್ರಸರ್ಕಾರ ವಸತಿ ಸೌಕರ್ಯ ಕಲ್ಪಿಸುತ್ತಿದೆ. ದೇವಾಲಯವನ್ನು ಸಂರಕ್ಷಿಸಿ ಅಮೂಲ್ಯ ಆಭರಣಗಳನ್ನು ತಲೆತಲಾಂತರಿಂದ ಸಂರಕ್ಷಿಸುತ್ತಾ ಬಂದಿರುವ ಕೈಂಕರ್ಯಪರರಿಗೆ ಮಾತ್ರ ಕೇಂದ್ರ ಸರ್ಕಾರದ ನೀತಿಯಿಂದ ಅಭದ್ರತೆ ಕಾಡುತ್ತಿದೆ ಎಂದು ದೂರಿದರು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಚೆಲುವನಾರಾಯಣಸ್ವಾಮಿ ದೇವಾಲಯದ ಕೈಂಕರ್ಯ ಪರರು ಕೇಂದ್ರ ಸರ್ಕಾರದ ಪ್ರಾಚ್ಯವಸ್ತು ಇಲಾಖೆಯಿಂದ ತಮಗಾಗುತ್ತಿರುವ ತೊಂದರೆಯನ್ನು ವಿವರಿಸಿ ಸಮಸ್ಯೆ ಬಗೆಹರಿಸುವಂತೆ ಕೇಂದ್ರ ವಿತ್ತಸಚಿವೆ ನಿರ್ಮಲಸೀತಾರಾಮನ್ ಅವರಿಗೆ ಮನವಿ ಮಾಡಿದರು.
ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಯಿಂದ ದೇಗುಲದ 100 ಮೀಟರ್ ವ್ಯಾಪ್ತಿ ಸಾವಿರಾರು ವರ್ಷದಿಂದ ವಾಸವಿರುವ ಕೈಂಕರ್ಯ ಪರರಿಗೆ ತೊಂದರೆಯಾಗಿದೆ. ನಮ್ಮದೇ ಜಾಗವಿದ್ದರೂ ಮನೆಕಟ್ಟಲು, ರಿಪೇರಿ ಮಾಡಿಕೊಳ್ಳಲೂ ಇಲಾಖೆ ಅವಕಾಶ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಸತಿಹೀನರಿಗೂ ಕೇಂದ್ರಸರ್ಕಾರ ವಸತಿ ಸೌಕರ್ಯ ಕಲ್ಪಿಸುತ್ತಿದೆ. ದೇವಾಲಯವನ್ನು ಸಂರಕ್ಷಿಸಿ ಅಮೂಲ್ಯ ಆಭರಣಗಳನ್ನು ತಲೆತಲಾಂತರಿಂದ ಸಂರಕ್ಷಿಸುತ್ತಾ ಬಂದಿರುವ ಕೈಂಕರ್ಯಪರರಿಗೆ ಮಾತ್ರ ಕೇಂದ್ರ ಸರ್ಕಾರದ ನೀತಿಯಿಂದ ಅಭದ್ರತೆ ಕಾಡುತ್ತಿದೆ ಎಂದು ದೂರಿದರು.
100ಮೀ. ವ್ಯಾಪ್ತಿ ಹೊಸಕಟ್ಟಡ ನಿರ್ಮಾಣಕ್ಕೆ ಅವಕಾಶ ಬೇಡ. ಆದರೆ, ತಲೆತಲಾಂತರಿಂದ ಹಳೆಯಕಾಲದ ಮನೆಗಳಿಗೆ ರಿಪೇರಿ ಮಾಡಲು, ಪುನರ್ನಿಮಿಸಲು ಅವಕಾಶ ಮಾಡಿಕೊಡಬೇಕು. ದೇವಾಲಯದ ಹೊರಪ್ರಕಾರದ ಸುತ್ತಲೂ ಶಿಥಿಲವಾಗಿರುವ ಸಣ್ಣ ಗೋಪುರಗಳ ಎಲ್ಲಾ ವಿಗ್ರಹಗಳನ್ನು ಶಾಸ್ತ್ರೋಕ್ತವಾಗಿ ಪೂರ್ಣ ನಿರ್ಮಿಸಲು ಆದೇಶ ಮಾಡಿ ಎಂದು ಮನವಿ ಮಾಡಿದರು.
ಕೈಂಕರ್ಯಪರರ ಎಲ್ಲಾ ಮನವಿ ಆಲಿಸಿದ ಕೇಂದ್ರ ಸಚಿವರು, ಸಂಪೂರ್ಣ ವಿವರದೊಂದಿಗೆ ಪ್ರತ್ಯೇಕ ಮನವಿಗಳನ್ನು ಕೊಡಿ. ಸಾಧ್ಯವಾದರೆ ಎಲ್ಲರೂ ಒಮ್ಮೆ ನನ್ನ ಕಚೇರಿಗೆ ಬನ್ನಿ, ಕೇಂದ್ರ ಸರ್ಕಾರ ನಿಮ್ಮ ಪರವಾಗಿದೆ. ಸ್ಥಳೀಯ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸಹ ನಿಮಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ ಎಂದರು.
ಕೇವಲ ಇಲ್ಲಿ ಮನವಿ ನೀಡಿ ಸುಮ್ಮನಾದರೆ ಪ್ರಯೋಜನವಿಲ್ಲ. ನಮ್ಮನ್ನು ನೆನಪಿಸುವ ಕಾರ್ಯ ಮಾಡಬೇಕು. ನೀವು ಮನವಿ ಮಾಡಿದಂತೆ ದೇವಾಲಯದ ಗೋಪುರಗಳ ವಿಗ್ರಹಗಳ ನಿರ್ಮಾಣ ಮತ್ತು ಮೇಲುಕೋಟೆಯಲ್ಲಿ ಭಕ್ತರಿಗೆ ಮೂಲಸೌಕರ್ಯ ಅಭಿವೃದ್ಧಿಗೂ ಸಹಕಾರ ನೀಡುತ್ತೇವೆ ಎಂದರು.
ಶ್ರೀರಂಗಂ ಸಂಪತ್ಕುಮಾರನ್ ಆಹ್ವಾನ ಮೇರೆಗೆ ಮೈಸೂರಿನಿಂದ ಮೇಲುಕೋಟೆಗೆ ಆಗಮಿಸಿದ್ದ ಕೇಂದ್ರಸಚಿವರ ಭೇಟಿ ವೇಳೆ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್, ಪರಿಚಾರಕ ಪಾರ್ಥಸಾರಥಿ, ಸ್ಥಾನೀಕಂ ಮುಕುಂದನ್ ಪ್ರಸನ್ನಕುಮಾರ್ ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಆನಂದಾಳ್ವಾರ್, ಸ್ವಾಮಿಸನ್ನಿಧಿ ಅರ್ಚಕ ವರದರಾಜಭಟ್ಟರ್ , ಅಮ್ಮನವರ ಸನ್ನಿಧಿ ಅರ್ಚಕ ನಾರಾಯಣಭಟ್ಟರ್, ಅರೈಯರ್ ಪಾರ್ಥಸಾರಥಿ ರಾಮಸ್ವಾಮಿ ಅಯ್ಯಂಗಾರ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪರಮೇಶಗೌಡ ಹಾಗೂ ಸದಸ್ಯರು ಇದ್ದರು. ಮೇಲುಕೋಟೆ ದರ್ಶನ ಮುಗಿಸಿ ಶ್ರೀರಂಗಪಟ್ಟಣದ ರಂಗನಾಥನ ದರ್ಶನಮಾಡಿ ಮೈಸೂರಿಗೆ ವಾಸ್ತವ್ಯಕ್ಕೆ ತೆರಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.