ಕನ್ನಡಪ್ರಭ ವಾರ್ತೆ ತುಮಕೂರು
ಆಟೋ ಚಾಲಕರು, ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಪ್ರತಾಪ್ ಮದಕರಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿದ ಆಟೊ ಚಾಲಕರು, ಬೈಕ್ ಟ್ಯಾಕ್ಸಿಗಳು ಕಾರ್ಯಾರಂಭ ಮಾಡಿರುವುದರಿಂದ ಆಟೋ ಚಾಲಕರ ವ್ಯವಹಾರಕ್ಕೆ ಪೆಟ್ಟು ಬಿದ್ದಿದೆ ಎಂದಿದ್ದಾರೆ.
ಬಹುತೇಕ ಬಡವರ್ಗದವರೇ ಆಟೋ ಚಾಲನೆ ಮಾಡಿಕೊಂಡು ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಇತ್ತೀಚೆಗೆ ನಗರದಲ್ಲಿ ಅನಧಿಕೃತವಾಗಿ ಬೈಕ್ ಟ್ಯಾಕ್ಸಿಗಳ ಒಡಾಟ ಆರಂಭವಾಗಿದೆ. ಇದಕ್ಕೆ ನಿರ್ಬಂಧ ಹಾಕಬೇಕು, ಅಂತಹ ಬೈಕ್ ಟ್ಯಾಕ್ಸಿಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.ತುಮಕೂರು ನಗರದಲ್ಲಿ ಸುಮಾರು 11 ಸಾವಿರ ಆಟೋಗಳಿವೆ. ನಿರುದ್ಯೋಗಿಗಳು ತಮ್ಮ ಬದುಕು ಸಾಗಿಸಲು ಆಟೋ ಚಾಲನೆ ವ್ಯವಹಾರ ಮಾಡುತ್ತಿದ್ದಾರೆ. ಬಾಡಿಗೆ ಹಣದಿಂದ ತಮ್ಮ ಮಕ್ಕಳ ಶಾಲಾ ಕಾಲೇಜು ಖರ್ಚು, ತಂದೆತಾಯಿಯರ ಆರೋಗ್ಯದ ವೆಚ್ಚ, ಕುಟುಂಬ ನಿರ್ವಹಣೆ ಇದರಿಂದಲೇ ಸಾಗಬೇಕಾಗಿದೆ. ಸರ್ಕಾರದ ಶಕ್ತಿ ಯೋಜನೆಯಡಿ ಹೆಣ್ಣುಮಕ್ಕಳಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಜಾರಿಯಾದಾಗಿನಿಂದ ನಗರದಲ್ಲಿ ಆಟೋ ವ್ಯವಹಾರ ಕುಸಿದಿದೆ.
ಇದೇ ವಿಚಾರವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೂ ಮನವಿ ಪತ್ರ ಸಲ್ಲಿಸಿದ ಆಟೋ ಚಾಲಕ, ಮಾಲೀಕರು ನಗರದಲ್ಲಿ ಬೈಕ್ ಟ್ಯಾಕ್ಸಿ ನಿರ್ಬಂಧ ಮಾಡಲು ಕೋರಿದರು.
ಸಂಘದ ಪದಾಧಿಕಾರಿಗಳಾದ ತಿಪ್ಪೇಸ್ವಾಮಿ, ನವೀನ್‌ಕುಮಾರ್, ನವೀನ್‌ಗೌಡ, ಉಪ್ಪಾರಹಳ್ಳಿ ಮಂಜುನಾಥ್, ನವೀನ್ ಮೊದಲಾದವರು ಹಾಜರಿದ್ದರು.