ಶರಾವತಿ ಮುಳುಗಡೆ ಸಂತ್ರಸ್ಥರ ನೆರವಿಗೆ ಕೇಂದ್ರಕ್ಕೆ ಮನವಿ

KannadaprabhaNewsNetwork | Published : Dec 12, 2024 12:32 AM

ಸಾರಾಂಶ

Appeal to center for help of Sharavati drowning victims

-ಲೋಕಸಭೆಯಲ್ಲಿ ಸಭಾಧ್ಯಕ್ಷರ ಗಮನಸೆಳೆದು ಮಾತನಾಡಿದ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ

----

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಾಡಿಗೆ ಬೆಳಕು ನೀಡಿದ ಶರಾವತಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡು ಇದುವರೆಗೆ ಯಾವುದೇ ಸಮರ್ಪಕ ಪರಿಹಾರ ಪಡೆಯಲು ಸಾಧ್ಯವಾಗದೆ ಯೋಜನೆಯ ಸಂತ್ರಸ್ಥರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರಕ್ಕೆ ಅಗತ್ಯವಿರುವ ಎಲ್ಲ ಬೆಂಬಲ ನೀಡಬೇಕು ಎಂದು ಸಂಸದ ಬಿ. ವೈ. ರಾಘವೇಂದ್ರ ಲೋಕಸಭೆಯಲ್ಲಿ ಒತ್ತಾಯಿಸಿದರು.

ಯೋಜನೆಯಿಂದ ಸಂತ್ರಸ್ಥರಾದ ರೈತರ ಪುನರ್ವಸತಿಗೆ ಬಳಸಲಾದ ಅರಣ್ಯ ಭೂಮಿಯನ್ನು ‘ಡಿ ರಿಸರ್ವ್’ ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರದ ಸಲಹೆಯ ಮೇರೆಗೆ ರಾಜ್ಯ ಸರ್ಕಾರವು ಸುಪ್ರಿಂಕೋರ್ಟ್ ನಲ್ಲಿ ಐಎ ಮಧ್ಯಂತರ ಅರ್ಜಿ ಹಾಕಿದ್ದು, ಡಿ. 3ರಂದು ಸುಪ್ರೀಂಕೋರ್ಟ್ ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಪ್ರಯತ್ನಪಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಹಿನ್ನೆಲೆ ರೈತರು ಕೃಷಿ ಮಾಡುತ್ತಿರುವ ಜಮೀನಿನ ಮೇಲಿನ ಹಕ್ಕನ್ನು ನೀಡಲು ಅನುಕೂಲವಾಗುವಂತೆ ಈ ಅರಣ್ಯ ಪ್ರದೇಶವನ್ನು ಡಿ ರಿಸರ್ವ್ ಮಾಡಲು ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.

ದೀರ್ಘ ಕಾಲ ಸಿಗದ ಪರಿಹಾರ:

1958 ರಿಂದ 1964 ರ ನಡುವೆ ಜಾರಿಗೊಂಡ ಈ ಯೋಜನೆಯಲ್ಲಿ ಸಾವಿರಾರು ಎಕರೆ ಸರ್ಕಾರಿ ಮತ್ತು ರೈತರ ಕೃಷಿ ಭೂಮಿ ಮುಳುಗಡೆಯಾಯಿತು. 1980 ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬರುವ ಮುನ್ನವೇ ಯೋಜನೆಯಲ್ಲಿ ಸಂತ್ರಸ್ಥರಾದ ರೈತರಿಗೆ ನೆರವಾಗಲು 9136 ಎಕರೆ ಅರಣ್ಯ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲಾಯಿತು. ಆದರೆ, ರೈತರಿಗೆ ಪಟ್ಟಾ ನೀಡುವ ಪ್ರಕ್ರಿಯೆ ಮುಗಿಯದ ಕಾರಣ ರೈತರ ಹೆಸರಿನಲ್ಲಿ ಭೂಮಿ ಇಲ್ಲವಾಗಿದೆ. ಕೇಂದ್ರ ಸರ್ಕಾರ ನೀಡುವ ಅನೇಕ ಕಲ್ಯಾಣ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗಿರುವುದಿಲ್ಲ. ಸ್ವಂತ ಮನೆ ನಿರ್ಮಾಣಕ್ಕೆ ಬ್ಯಾಂಕ್ ನಿಂದ ಸಾಲ ಸೌಲಭ್ಯ ಕೂಡ ದೊರೆಯದಂತಾಗಿದೆ ಎಂದು ಸಂಸದರು ಸಭೆಯಲ್ಲಿ ರೈತರ ಸಂಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸಾವಿರಾರು ರೈತರ ಸಂಕಷ್ಟ ದೊಡ್ಡದಾಗಿದೆ. ಯಾವುದೇ ಅಭಿವೃದ್ಧಿ ಯೋಜನೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ರೈತರ ಹಕ್ಕುಗಳ ಹೋರಾಟಗಾರರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ ಪ್ರಯತ್ನವನ್ನು ಗುರುತಿಸುವುದು ಮುಖ್ಯವಾಗಿದೆ. ಈ ಸಮಸ್ಯೆ ಬಗೆಹರಿಸುವಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರು ನಡೆಸಿದ ಪ್ರಾಮಾಣಿಕ ಯತ್ನಕ್ಕೆ ಧನ್ಯವಾದ ಹೇಳುತ್ತಿದ್ದು, ಇದುವರೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸಿದೆ. ಮಲೆನಾಡಿನ ಶರಾವತಿ ಸಂತ್ರಸ್ಥರ ಸಮಸ್ಯೆಗಳನ್ನು ಕೂಡ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

------------------------------------

ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಅವರು ಲೋಕಸಭೆಯಲ್ಲಿ ಶರಾವತಿ ಸಂತ್ರಸ್ಥರ ಸಮಸ್ಯೆಗಳನ್ನು ಪ್ರಸ್ತಾಪಿಸಿ ಅವುಗಳ ಪರಿಹಾರಕ್ಕೆ ನೆರವಾಗುವಂತೆ ಮನವಿ ಮಾಡಿದರು.

Share this article