ಕನ್ನಡಪ್ರಭ ವಾರ್ತೆ ಬೇಲೂರು
ಬೇಲೂರಿನಿಂದ ಬಿಕ್ಕೋಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆಯು ಸಂಪೂರ್ಣ ಗುಂಡಿಮಯವಾಗಿದ್ದು ವಾಹನ ಸವಾರರು ಚಾಲನೆ ಮಾಡಲು ಪರದಾಡುವಂತಾಗಿದೆ. ಈ ನರಕ ಯಾತನೆಯಿಂದ ಮುಕ್ತಿ ಯಾವಾಗ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.ಹೆಸರಿಗಷ್ಟೇ ರಾಜ್ಯ ಹೆದ್ದಾರಿ :
ಬೇಲೂರು ಮುಖ್ಯ ಕೇಂದ್ರದಿಂದ ಕೊಡ್ಲಿಪೇಟೆಗೆ ನೇರ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯು ಇದಾಗಿದೆ. ಬಿಕ್ಕೋಡಿನಿಂದ ಬೆಳಗೋಡು ಮೂಲಕ ಸೋಮವಾರಪೇಟೆಗೆ ಹಾಗೂ ಅರೇಹಳ್ಳಿ ಮಾರ್ಗವಾಗಿ ಸಕಲೇಶಪುರದಿಂದ ಹಾದು ರಾಷ್ಟ್ರೀಯ ಹೆದ್ದಾರಿ ೭೫ ಸಂಪರ್ಕ ಕಲ್ಪಿಸುತ್ತದೆ. ಮಂಗಳೂರು, ಹಾಸನ, ಕೊಡಗಿನಂತಹ ಪ್ರಮುಖ ಜಿಲ್ಲೆಗಳಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ವಾಣಿಜ್ಯ ವಹಿವಾಟಿಗೆ ಆಧಾರವಾಗಿರುವ ಈ ರಸ್ತೆಯನ್ನು ಅಗಲೀಕರಣ ಮಾಡುವುದಾಗಿ ಹಲವಾರು ವರ್ಷಗಳಿಂದ ಭಾಷಣದಲ್ಲಿ ಹೇಳುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ಮುನ್ಸೂಚನೆ ದೊರೆತಿಲ್ಲ.
ಕಳಪೆಯಾದ ತೇಪೆ ಕಾಮಗಾರಿ:
ರಾಜ್ಯ ಹೆದ್ದಾರಿಯಲ್ಲಿ ಪ್ರವಾಸಿಗರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಗುಂಡಿ ಬಿದ್ದ ಇದೇ ರಸ್ತೆಯಲ್ಲಿ ತೆರಳಬೇಕಾದ ದುಸ್ಥಿತಿ ಬಂದಿದೆ. ಮೂರು ವರ್ಷಗಳ ಹಿಂದೆ ಮಾಜಿ ಶಾಸಕ ಲಿಂಗೇಶ್ ಅವಧಿಯಲ್ಲಿ ರೈತ ಸಂಘದ ಉಗ್ರ ಪ್ರತಿಭಟನೆಗೆ ಗುಂಡಿ ಮುಚ್ಚುವ ಕಾಮಗಾರಿ ನಡೆದಿತ್ತು. ಆದರೆ ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದಾಗಿ ಒಂದೇ ತಿಂಗಳಲ್ಲಿ ಗುಂಡಿಗೆ ಹಾಕಿದ್ದ ಜೆಲ್ಲಿ ಕಲ್ಲುಗಳೆಲ್ಲ ಮೇಲೆದ್ದು ಗುಂಡಿ ಇನ್ನೂ ಹೆಚ್ಚಾಯ್ತು. ತದನಂತರದಲ್ಲಿ ರಸ್ತೆ ದುರಸ್ತಿ ಸಂಬಂಧ ಕಿಂಚಿತ್ತು ಆಸಕ್ತಿ ತೋರುತ್ತಿಲ್ಲ. ಜನಪ್ರತಿನಿಧಿಗಳು ದಿನನಿತ್ಯಿ ಈ ರಸ್ತೆಯಲ್ಲಿ ಅಡ್ಡಾಡಿದರೂ ಇವರ ಗಮನಕ್ಕೆ ಯಾಕೆ ಇನ್ನೂ ಬಂದಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ.ಯಮಲೋಕಕ್ಕೆ ರಹದಾರಿ:
ಬೇಲೂರಿನಿಂದ ಬಿಕ್ಕೋಡಿಗೆ ತೆರಳುವ ರಾಜ್ಯ ಹೆದ್ದಾರಿ ಅಧೋಗತಿ ತಲುಪಿದ್ದು ವಾಹನ ಚಾಲನೆ ಮಾಡಲು ಗುಂಡಿಗೆ ಗಟ್ಟಿ ಇರಬೇಕು. ಈ ರಸ್ತೆಯಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳು ಸೇರಿದಂತೆ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಗುಂಡಿಬಿದ್ದ ರಸ್ತೆಯಲ್ಲಿ ಮೂಲ ರಸ್ತೆಯನ್ನು ಹುಡುಕಿ ಬಹಳ ಎಚ್ಚರಿಕೆಯಿಂದ ತೆರಳಬೇಕಾದ ಸಂಕಷ್ಟಕ್ಕೆ ವಾಹನ ಸವಾರರು ಸಿಲುಕಿದ್ದಾರೆ. ಮಳೆ ನೀರಿನಿಂದ ತುಂಬಿರುವ ಗುಂಡಿಗಳನ್ನು ತಪ್ಪಿಸಲು ಹೋಗಿ ಮುಂದಿನ ವಾಹನಕ್ಕೆ ಡಿಕ್ಕಿ ಹೊಡೆದು ಹಲವಾರು ಅಪಘಾತಗಳು ಸಂಭವಿಸಿವೆ.
ಗುಂಡಿ ರಸ್ತೆಯಿಂದ ಸಮಯ ಹಾಳು :
ಬೇಲೂರು ಪಟ್ಟಣದಿಂದ ಒಂದೆರಡು ಕಿ.ಮೀ ದೂರವಿರುವ ಸನ್ಯಾಸಿಹಳ್ಳಿಯಿಂದ ಕಾಚೀಹಳ್ಳಿ, ಕೋಗಿಲೆಮನೆ, ಬೊಮ್ಮಡಿಹಳ್ಳಿ ಮಾರ್ಗವಾಗಿ ಬಿಕ್ಕೋಡಿಗೆ ತೆರಳುವ ೧೦ ಕಿ.ಮೀ. ರಸ್ತೆಯಂತೂ ಸಂಪೂರ್ಣ ಗುಂಡಿ ಬಿದ್ದಿದೆ. ಈ ಹಿಂದೆ ಬಿಕ್ಕೋಡಿನಿಂದ ಬೇಲೂರಿಗೆ ಸಂಚರಿಸಲು ೨೦ ನಿಮಿಷ ಸಾಕಾಗಿತ್ತು. ಆದರೆ ಈಗ ರಸ್ತೆಯ ಅವಾಂತರದಿಂದ ಗಂಟೆಗಟ್ಟಲೆ ಸಮಯ ಬೇಕು. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಬಸ್ ಬಾರದೆ ಶಾಲಾ ಮಕ್ಕಳು ಹಾಗೂ ಪ್ರಯಾಣಿಕರು ಮತ್ತು ರೋಗಿಗಳು ವಾಹನ ಸವಾರರು ಗಮ್ಯ ಸ್ಥಾನಕ್ಕೆ ತಲುಪಲು ಸಾಧ್ಯವಾಗದೆ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.ಅವಾಂತರದ ರಸ್ತೆಗೆ ಪ್ರವಾಸಿಗರ ಆಕ್ರೋಶ:
ಪ್ರವಾಸಿಕೇಂದ್ರ ಬೇಲೂರು ಹಳೇಬೀಡು ಐತಿಹಾಸಿಕ ಸ್ಥಳಗಳನ್ನು ವೀಕ್ಷಣೆ ಮಾಡಲು ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಬಳಿಕ ಸಕಲೇಶಪುರ ತಾಲೂಕು ವ್ಯಾಪ್ತಿಯ ಮಂಜರಾಬಾದ್ ಕೋಟೆಯ ಜೊತೆಗೆ ಧಾರ್ಮಿಕ ಕೇಂದ್ರಗಳ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ತೆರಳಲು ಬಿಕ್ಕೋಡು ಮಾರ್ಗವನ್ನು ಬಳಸಬೇಕಾರುವುದರಿಂದ ರಸ್ತೆಯ ದುಸ್ಥಿತಿ ನೋಡಿ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲು ಪ್ರವಾಸಿಗರು ಹಿಂದೇಟು ಹಾಕುವಂತಹ ಸ್ಥಿತಿ ಬಂದಿದೆ.
*ಹೇಳಿಕೆ-1
ಬಿಕ್ಕೋಡಿನಿಂದ ಬೇಲೂರಿಗೆ ತೆರಳುವ ರಸ್ತೆ ತುಂಬಾ ಹಾಳಾಗಿದ್ದು ವಾಹನದಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಕೇವಲ ಹದಿನೈದು ಕಿ.ಮೀ. ರಸ್ತೆಯನ್ನು ದುರಸ್ತಿ ಮಾಡಲು ಜನಪ್ರತಿನಿಧಿಗಳಿಗೆ ಸಾಧ್ಯವಾಗಿಲ್ಲ, ಇನ್ನು ತಾಲೂಕಿನ ಅಭಿವೃದ್ಧಿ ಇವರಿಂದ ಹೇಗೆ ಸಾಧ್ಯ.- ಮಲ್ಲಿಕ್, ಬಿಕ್ಕೋಡು ಹೋಬಳಿ ಕಾಂಗ್ರೆಸ್ ಅಧ್ಯಕ್ಷ
*ಹೇಳಿಕೆ-2
ಬೇಲೂರು-ಸಕಲೇಶಪುರ ಮುಖ್ಯ ರಸ್ತೆ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅನುದಾನ ತಂದು ರಸ್ತೆ ನಿರ್ಮಾಣ ಮಾಡಬೇಕಾದ ಸ್ಥಳಿಯ ಶಾಸಕ ಎಚ್. ಕೆ ಸುರೇಶ್ ಬಿಕ್ಕೋಡು ಭಾಗದತ್ತ ತಲೆಹಾಕಿಲ್ಲ. ಗುಂಡಿ ಸಮಸ್ಯೆಯ ನೋವನ್ನು ಯಾರ ಬಳಿ ತೋಡಿಕೊಳ್ಳೋಣ.ಚೇತನ್ ಸಿ ಗೌಡ, ಕೆಡಿಪಿ ಸದಸ್ಯ