ತೀರ್ಥಹಳ್ಳಿ : ರಾಜ್ಯದಲ್ಲಿ 43 ಸಾವಿರ ಅತಿಥಿ ಶಿಕ್ಷಕರ ನೇಮಕವಾಗಿದ್ದರೂ ಇನ್ನೂ 900 ಶಿಕ್ಷಕರ ಕೊರತೆ ಇದೆ. ಶಾಲಾ ಕೊಠಡಿಗಳ ಬೇಡಿಕೆಯೂ ಇದೆ. ಶಿಕ್ಷಕರ ಕೊರತೆಯಿಂದಾಗಿ ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಕೂಡಾ ಸಮಸ್ಯೆ ಇದ್ದು ಹೆಚ್ಚುವರಿ ಶಿಕ್ಷಕರಿಗಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣ ಸಮೀಪದ ಮೇಲಿನಕುರುವಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 13.90 ಲಕ್ಷ ರು. ವೆಚ್ಚದಲ್ಲಿ ವಿವೇಕ ಯೋಜನೆಯಡಿ ನಿರ್ಮಾಣವಾದ ಶಾಲಾ ಕೊಠಡಿ ಮತ್ತು ದಾನಿಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯವತಿಯಿಂದ ಶನಿವಾರ ಆಯೋಜಿಸಿದ್ದ ಅಭಿವೃದ್ಧಿ ಪಡಿಸಿದ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿ, 48 ಸಾವಿರ ಶಾಲೆಗಳಿರುವ ನನ್ನ ಇಲಾಖೆಗೆ 44 ಸಾವಿರ ಕೋಟಿ ರು. ಅನುದಾನವಿದ್ದರೂ ಎಲ್ಲಾ ಬೇಡಿಕೆಗಳನ್ನು ಸರಿದೂಗಿಸುವುದು ಸವಾಲಾಗಿದೆ ಎಂದು ಹೇಳಿದರು.ಸರ್ಕಾರಿ ಶಾಲೆಗಳಿಗೆ ಬಳಕೆಯಾಗುವ ನೀರು ಮತ್ತು ವಿದ್ಯುತ್ ಶುಲ್ಕದ ಬಗ್ಗೆ ರಿಯಾಯಿತಿ ನೀಡಲಾಗಿದ್ದು, ರಾಜ್ಯದಲ್ಲಿರುವ ಎಲ್ಲಾ 48000 ಸಾವಿರ ಸರ್ಕಾರಿ ಶಾಲೆಗಳಿಗೆ ಇದು ಅನ್ವಯವಾಗಲಿದೆ. ವಿದ್ಯಾರ್ಥಿಗಳ ಪೌಷ್ಟಿಕತೆಯ ದೃಷ್ಟಿಯಿಂದ ಸಿಎಸ್‍ಆರ್ ಅನುದಾನದಲ್ಲಿ 1.80 ಕೋಟಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ ಎಂದರು.
ಸರ್ಕಾರಿ ಶಾಲೆಗಳಿಗೆ ನಮ್ಮೆಲ್ಲರ ಶಾಲೆ ಎಂಬ ಅಭಿಮಾನ ಅಗತ್ಯ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಉತ್ತಮ ಸ್ಥಿತಿಯಲ್ಲಿರುವ ಹಳೆಯ ವಿದ್ಯಾರ್ಥಿಗಳು ಅಭಿವೃದ್ಧಿಗೆ ಕೈ ಜೋಡಿಸಬೇಕು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್ ಅವರ ಕಾರ್ಯ ಸ್ಮರಣೀಯವಾಗಿದೆ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 3000 ಕೆಪಿಎಸ್ ಶಾಲೆಗಳನ್ನು ತೆರೆಯುವ ಉದ್ದೇಶವಿದ್ದು, ಈ ವರ್ಷ 500 ಶಾಲೆಗಳನ್ನು ತೆರೆಯಲಾಗುವುದು. ಈ ತಾಲೂಕಿಗೆ 5 ದ್ವಿಭಾಷಾ ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡುವ ಭರವಸೆ ನೀಡಿದರು. ಶಾಲಾಭಿವೃದ್ಧಿ ಸಮಿತಿ ಹಾಗೂ ವೇದಿಕೆಯಲ್ಲಿದ್ದ ಶಾಸಕ ಆರಗ ಜ್ಞಾನೇಂದ್ರರ ಕೋರಿಕೆ ಮೇಲಿನ ಕುರುವಳ್ಳಿಗೆ ಹೊಸದಾಗಿ ಪ್ರೌಢಶಾಲೆ ಮಂಜೂರು ಮಾಡುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಶಾಸಕ ಆರಗ ಜ್ಞಾನೇಂದ್ರವಹಿಸಿದ್ದರು. ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಸುರೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಗ್ರಾಪಂ ಅಧ್ಯಕ್ಷ ಯು.ಡಿ.ವೆಂಕಟೇಶ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಕೆಸ್ತೂರು ಮಂಜುನಾಥ್, ಮುಡುಬಾ ರಾಘವೇಂದ್ರ, ಡಿಡಿಪಿಐ ಪರಮೇಶ್ವರ್, ಬಿಇಓ ವೈ.ಗಣೇಶ್, ಮುಖ್ಯೋಪಾಧ್ಯಾಯ ಮಂಜುನಾಥ್ ಇದ್ದರು.