ಕನ್ನಡಪ್ರಭ ವಾರ್ತೆ ಇಂಡಿ
ಕಳೆದ ಬಾರಿ ಭೀಮಾನದಿ ಪ್ರವಾಹದಿಂದಾಗಿ ಸಾಕಷ್ಟು ಹಾನಿಯಾಗಿದೆ. ಇದಕ್ಕೆ ಆ ನದಿ ಪಾತ್ರದಲ್ಲಿರುವ ಸೊನ್ನ ಬ್ಯಾರೇಜ್ ನಿರ್ವಹಣೆಯಲ್ಲಿ ಅಚಾತುರ್ಯ ಕಾರಣ. ಆದರೆ, ಈ ಬಾರಿ ಅಧಿಕಾರಿಗಳು ನಿರ್ವಹಣೆ ಸರಿಯಾಗಿ ಮಾಡಿರುವುದರಿಂದ ಅಷ್ಟೊಂದು ಪ್ರಮಾಣದಲ್ಲಿ ಹಾನಿ ಸಂಭವಿಸಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಬಹುತೇಕ ರಸ್ತೆಗಳು ಹಾಳಾಗಿದ್ದು, ಸರ್ಕಾರದ ಅನುದಾನ ಅನುಪಾತದ ಮೇರೆಗೆ ಕೇವಲ ಎರಡು ವರ್ಷಗಳಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.ಈ ಬಾರಿ ಭೀಮಾನದಿ ಪ್ರವಾಹದಿಂದ ತೊಗರಿ, ಉದ್ದು ನದಿ ದಡದಲ್ಲಿ ಹಾನಿಯಾಗಿವೆ. ತಾಲೂಕು, ಜಿಲ್ಲಾಡಳಿತ ಸರ್ಕಾರಕ್ಕೆ ಹಾನಿಯಾದ ಬಗ್ಗೆ ವರದಿ ಸಲ್ಲಿಸಿದೆ. ನಾನು ಕೂಡ ಈ ಭಾಗದ ಜನಪ್ರತಿನಿಧಿಯಾಗಿ ರೈತರ ಸಮಸ್ಯೆಯನ್ನು ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೇನೆ. ಪರಿಹಾರ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಕಳೆದ ಬಾರಿಗಿಂತ ಈ ಬಾರಿ ಮಳೆ ಪ್ರಮಾಣ ಹೆಚ್ಚಾಗಿದೆ. ಇದರಿಂದ ರೈತರು ಬೆಳೆದ ತೊಗರಿ ಹಾನಿಯಾಗಿದೆ. ಅನೇಕ ರೈತರು ಹಾನಿಯಾದ ಬಗ್ಗೆ ತಮ್ಮ ನೋವು ತೋಡಿಕೊಂಡಿದ್ದಾರೆ. ಹಾನಿಯಾದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ವರ್ಷ ಭೀಕರ ಬೇಸಿಗೆ ಬಿಸಿಲಿನಲ್ಲಿ 43 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದರೂ ಕಾಲುವೆ ನೀರು ಕಾಲುವೆಯ ಕೊನೆಯವರೆಗೆ ನೀರು ಹರಿಸಲು ಅಧಿಕಾರಿಗಳು ಶ್ರಮಿಸಿದ್ದಾರೆ ಎಂದರು.ಕರ್ನಾಟಕವು ಜಿಎಸ್ಟಿ ತುಂಬುವಲ್ಲಿ ಮುಂದಿದೆ. ಕೇಂದ್ರ ಸರ್ಕಾರ ಸರಿಯಾಗಿ ಅನುದಾನ ನೀಡುತ್ತಿಲ್ಲ. ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಕರ್ನಾಟಕದಿಂದ ₹3 ಲಕ್ಷ ಕೋಟಿ ಜಿಎಸ್ಟಿ ಭರಿಸಲಾಗುತ್ತಿದೆ. ಕೇಂದ್ರ ಸರ್ಕಾರ ಸಹಾಯ ಮಾಡಿದರೆ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಆಗುತ್ತಿತ್ತು. ರಾಜ್ಯ ಮತ್ತು ಕೇಂದ್ರ ನಡೆಸುತ್ತಿರುವವರು ಜನಹಿತ ಕಾಪಾಡಬೇಕು. ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಕಿವಿಮಾತು ಹೇಳಿದರು.ಗೋಷ್ಠಿಯಲ್ಲಿ ಜೀತಪ್ಪ ಕಲ್ಯಾಣಿ, ಶಿವಯೋಗೆಪ್ಪ ಚನಗೊಂಡ, ಶಿವಯೊಗೆಪ್ಪ ಜೊತಗೊಂಡ, ಸದಾಶಿವ ಪ್ಯಾಟಿ, ಲಿಂಬಾಜಿ ರಾಠೋಡ, ಜಹಾಂಗೀರ ಸೌದಾಗರ, ಸಂತೋಷ ಪರಸೆನವರ, ಎಸ್.ಜೆ.ಮಾಡ್ಯಾಳ ಇತರರು ಇದ್ದರು.
ಜಿಲ್ಲೆಯ ಸಮಗ್ರ ನೀರಾವರಿಗೆ ₹92 ಸಾವಿರ ಕೋಟಿ ಅನುದಾನ ಒದಗಿಸಿದರೇ ಅಭಿವೃದ್ಧಿಯಾಗುತ್ತದೆ. ಸರ್ಕಾರಗಳು ಪ್ರತಿಯೊಂದು ಯೋಜನೆಗಳಿಗೆ ಆದ್ಯತೆಗಳಿಗೆ ಅನುಗುಣವಾಗಿ, ವಲಯಗಳಾಗಿ ಮಾಡಿ ಅನುದಾನ ಹಂಚಿಕೆ ಮಾಡುವುದು ಸರ್ಕಾರಗಳ ಕರ್ತವ್ಯವಾಗಿದೆ.
- ಯಶವಂತರಾಯಗೌಡ ಪಾಟೀಲ, ಶಾಸಕರು.