
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಗೃಹ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋರಾಟಗಾರರ ಬಗ್ಗೆ ನನಗೆ ಗೌರವವಿದೆ. ನಾನೇ ಈಗಾಗಲೇ ಒಮ್ಮೆ ಎಲ್ಲ ಹೋರಾಟಗಾರರನ್ನು ಸಿಎಂ ಅವರನ್ನು ಭೇಟಿ ಮಾಡಿಸಿದ್ದೇನೆ. ಆ ವೇಳೆ ಸಿಎಂ ಅವರು ಸರ್ಕಾರಿ ಕಾಲೇಜು ಮಾಡಲು ಸಾಕಷ್ಟು ಹಣಬೇಕು. ಅದಕ್ಕೆ ಸಮಯ ಬೇಕು ಎಂದರು. ಸಿಎಂ ಅವರ ಮಾತಿಗೆ ಹೋರಾಟಗಾರರೆಲ್ಲ ಎರಡು ವರ್ಷವಾಗಲಿ ಅಥವಾ ಅದಕ್ಕೂ ಹೆಚ್ಚಿನ ಸಮಯವಾದರೂ ಸರಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಾಡಿ ಎಂದರು. ಅದಕ್ಕೆ ಸಿಎಂ ಅವರು ಒಪ್ಪಿದ್ದರೂ ಹೋರಾಟವನ್ನು ಯಾಕೆ ಮುಂದುವರಿಸಿದ್ದಾರೆ ತಿಳಯುತ್ತಿಲ್ಲ. ಈಗ ಮತ್ತೆ ಇನ್ನೊಮ್ಮೆ ಅವರನ್ನು ಕರೆದುಕೊಂಡು ಹೋಗಿ ಸಿಎಂ ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ತಿಳಿಸಿದರು.
ಕೆಲ ಬಿಜೆಪಿಗರ ವಿರುದ್ಧ ಕಿಡಿ:ಮೆಡಿಕಲ್ ಕಾಲೇಜಿಗಾಗಿ ಹೋರಾಟ ಮಾಡುತ್ತಿರುವ ಹೋರಾಟಗಾರರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಆ ಸ್ಥಳಕ್ಕೆ ಹೋಗಿ ಜಿಲ್ಲೆಯ ಕೆಲ ಬಿಜೆಪಿ ಪುಡಾರಿಗಳು ನನ್ನ ಬಗ್ಗೆ ಮಾತನಾಡಿದ್ದಾರೆ. ಮಾತನಾಡುವ ಮೊದಲು ಪಿಪಿಪಿ ಮಾಡಿದ್ದು ಯಾರು ಎಂಬುದನ್ನು ಅವರು ತಿಳಿದುಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಪಿಪಿ ಆರಂಭವಾಗಿದ್ದೇ ಬಿಜೆಪಿಯಿಂದ, ಪಿಪಿಪಿ ಮಾದರಿ ತಂದವರೇ ಬಿಜೆಪಿಯವರು. 2022ರಲ್ಲಿ ಬಿಜೆಪಿ ಸರ್ಕಾರದಲ್ಲಿ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವೈದ್ಯಕೀಯ ಸಚಿವ ಸುಧಾಕರ ಅವರು ಸೇರಿ ರಾಜ್ಯದ 11 ಜಿಲ್ಲೆಗಳಲ್ಲಿ ಪಿಪಿಪಿ ಮಾದರಿ ಮಾಡಲು ನಿರ್ಧರಿಸಿದ್ದರು. ಬಿಜೆಪಿಯವರು ಹೋಗಿ ಭಾಷಣ ಮಾಡುವ ಮೊದಲು ಪಿಪಿಪಿ ಎಂಬುದು ಬಿಜೆಪಿಯದ್ದೆ ಕಲ್ಪನೆ ಎಂಬುದು ತಿಳಿದುಕೊಳ್ಳಬೇಕು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದ್ದಾರೆ. ಪಿಪಿಪಿ ಬೇಡ ಸರ್ಕಾರಿ ಮಾಡಿ ಎಂದು ಮೋದಿಗೆ ಹೇಳಬೇಕಲ್ಲವಾ?. ಪಿಪಿಪಿ ಎನ್ನುವುದೇ ಮೋದಿ ಅವರ ಕೂಸು. ಹೋರಾಟಗಾರರ ಬಗ್ಗೆ ನನ್ನದೇನು ತಕರಾರಿಲ್ಲ. ಅಲ್ಲಿ ಹೋಗಿ ನನ್ನ ಬಗ್ಗೆ ಮಾತನಾಡುವ ಕೆಲ ಬಿಜೆಪಿ ಪುಡಾರಿಗಳ ಬಗ್ಗೆ ಆಕ್ಷೇಪವಿದೆ. ಬಿಜೆಪಿಯವರು ಹೋಗಿ ನಾಟಕ ಮಾಡೋದು, ಪ್ರಚೋದನಕಾರಿಯಾಗಿ ಭಾಷಣ ಮಾಡೋದು ಬಿಡಬೇಕು ಎಂದು ಕಿಡಿಕಾರಿದರು.ನರೇಗಾ ಹೆಸರು ಬದಲಾಯಿಸಿ ಜಿ ರಾಮ್ ಜಿ ಎಂದು ಹೆಸರಿಡುವುದು ತಪ್ಪು. ಮಹಾತ್ಮಾಗಾಂಧಿಯವರ ಹೆಸರು ತೆಗೆದು ರಾಮ ಅವರ ಹೆಸರು ಇಡುವುದು ಸೂಕ್ತವಲ್ಲ. ಹಾಗೆಯೇ ರಾಮ ಅವರ ಹೆಸರು ತೆಗೆದು ಮಹಾತ್ಮಾಗಾಂಧಿ ಹೆಸರಿಡುವುದು ಸೂಕ್ತವಲ್ಲ ಎಂದರು.
ದ್ವೇಷ ಭಾಷಣ ವಿರೋಧಿ ನೀತಿ ಜಾರಿಗೆ ತರಲು ಕೆಲವರು ವಿರೋಧಿಸುವುದು ಏಕೆ?. ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಿದ್ದರೆ ವಿರೋಧಿಸಬೇಕು. ದ್ವೇಷ ಭಾಷಣದ ಬಗ್ಗೆ ಯಾಕೆ ವಿರೋಧಿಸಬೇಕು? ಕುಂಬಳಕಾಯಿ ಕಳ್ಳ ಎಂದರೆ ನೀವೇಕೆ ಹೆಗಲು ಮುಟ್ಟಿಕೊಂಡು ನೋಡುತ್ತೀರಿ?. ಇದನ್ನು ವಿರೋಧಿಸುತ್ತಿರುವ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನಮಾಜ್ ಮಾಡುವ ಫೋಟೊಗಳೇ ಬಿಡುಗಡೆಯಾಗಿವೆ. ಅವರು ಅಂದು ಟಿಪ್ಪು ಸುಲ್ತಾನ ಇಂದು ಶಿವಾಜಿ ಮಹಾರಾಜರು ಎಂದು ಲೇವಡಿ ಮಾಡಿದರು.ತಿಡಗುಂದಿ ಬಳಿ ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ವಿಚಾರವಾಗಿ ಮಾತನಾಡಿ, ನಾವು ಯಾರಿಗೂ ಅನ್ಯಾಯ ಮಾಡಲ್ಲ, ಅಲ್ಲಿ ಭೂಮಿಗೆ ಬೆಲೆ ಎಷ್ಟಿದೆ ಅದರ ಶೇ.70ರಿಂದ 80ರಷ್ಟು ಹೆಚ್ಚಿಗೆ ಹಣವನ್ನು ಕೊಡಲಾಗುತ್ತಿದೆ. ಈ ಮೂಲಕ ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳ ಲಾಗುವುದು. ರೈತರದ್ದು ಎರಡು ಎಕರೆ ಭೂಮಿ ಹೋದರೆ ಅದೇ ಹಣದಲ್ಲಿ ಅವರಿಗೆ ಪಕ್ಕದಲ್ಲೇ ಮೂರು ಎಕರೆ ಬರುವಂತೆ ಪರಿಹಾರದ ಹಣ ಹೆಚ್ಚಿಸಿ ಕೊಡಲಾಗುವುದು ಎಂದರು.