ಕಾರ್ಕಳ-ಪಡುಬಿದ್ರಿ ರಸ್ತೆಯಲ್ಲಿ ಟೋಲ್‌ ಸಂಗ್ರಹ ಮಾಡದಂತೆ ಜಿಲ್ಲಾಧಿಕಾರಿಗೆ ಮನವಿ

KannadaprabhaNewsNetwork |  
Published : Aug 03, 2024, 12:38 AM IST
ರಸ್ತೆಯಲ್ಲಿ ಟೋಲ್ ಸಂಗ್ರಹದ ಆದೇಶ ಹಿಂಪಡೆಯಲು ಬಿಜೆಪಿ ಬೆಳ್ಮಣ್ ಮಹಾ ಶಕ್ತಿಕೇಂದ್ರದಿಂದ ಉಡುಪಿಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ | Kannada Prabha

ಸಾರಾಂಶ

. ಪ್ರಸ್ತಾಪಿತ ಟೋಲ್ ಸಂಗ್ರಹ ಕೇಂದ್ರ ನಿರ್ಮಾಣವಾದಲ್ಲಿ ಕಾರ್ಕಳ-ಬೆಳ್ಮಣ್ ಮೂಲಕ ಮೂಲ್ಕಿ-ಮಂಗಳೂರು ನಡುವೆ ಸಂಚಾರಕ್ಕೆ ಕೇವಲ 6 ಕಿ.ಮೀ. ಅಂತರದಲ್ಲಿ 2 ಬಾರಿ ಟೋಲ್ ಪಾವತಿಸಬೇಕಾಗುತ್ತದೆ.

\

ಕನ್ನಡಪ್ರಭ ವಾರ್ತೆ ಕಾರ್ಕಳ

ಕಾರ್ಕಳ-ಪಡುಬಿದ್ರಿ-ಬೆಳ್ಮಣ್ ರಸ್ತೆಯಲ್ಲಿ ಹೊಸದಾಗಿ ಟೋಲ್ ಸಂಗ್ರಹ ಮಾಡುವ ಪ್ರಸ್ತಾಪದಿಂದ ಜನರಿಗಾಗುವ ತೊಂದರೆಯನ್ನು ಜಿಲ್ಲಾಧಿಕಾರಿಗಳು ತಕ್ಷಣ ರಾಜ್ಯ ಸರ್ಕಾರದ ಗಮನಕ್ಕೆ ತರುವ ಮೂಲಕ ರಾಜ್ಯ ಸರ್ಕಾರ ನೂತನ ಟೋಲ್ ಸಂಗ್ರಹಕ್ಕೆ ನೀಡಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಬಿಜೆಪಿ ಬೆಳ್ಮಣ್ ಮಹಾ ಶಕ್ತಿ ಕೇಂದ್ರದ ವತಿಯಿಂದ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪಡುಬಿದ್ರಿ-ಬೆಳ್ಮಣ್ ರಸ್ತೆಯಲ್ಲಿ ಆ.16ರಿಂದ ಟೋಲ್ ಸಂಗ್ರಹ ಮಾಡುವಂತೆ ರಾಜ್ಯ ಸರ್ಕಾರ ಹಾಸನ ಮೂಲದ ಭಾರತಿ ಕನ್‌ಸ್ಟ್ರಕ್ಷನ್‌ ಸಂಸ್ಥೆಗೆ ಆದೇಶ ನೀಡಿರುವುದು ಅತ್ಯಂತ ಖಂಡನೀಯ. ಪ್ರಸ್ತಾಪಿತ ಟೋಲ್ ಸಂಗ್ರಹ ಕೇಂದ್ರ ನಿರ್ಮಾಣವಾದಲ್ಲಿ ಕಾರ್ಕಳ-ಬೆಳ್ಮಣ್ ಮೂಲಕ ಮೂಲ್ಕಿ-ಮಂಗಳೂರು ನಡುವೆ ಸಂಚಾರಕ್ಕೆ ಕೇವಲ 6 ಕಿ.ಮೀ. ಅಂತರದಲ್ಲಿ 2 ಬಾರಿ ಟೋಲ್ ಪಾವತಿಸಬೇಕಾಗುತ್ತದೆ. ಈಗಾಗಲೇ ಜನತೆ ರಾಜ್ಯ ಸರ್ಕಾರದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕ್ರಮದಿಂದ ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಇದೀಗ ಹೊಸ ಟೋಲ್ ಸಂಗ್ರಹದ ಹುನ್ನಾರದಿಂದ ಈ ಭಾಗದ ಜನತೆಗೆ ಅತ್ಯಧಿಕ ಆರ್ಥಿಕ ಹೊರೆಯಾಗಲಿದೆ. ಇದು ಕಾರ್ಕಳ ಮತ್ತು ಬೆಳ್ಮಣ್ ಆಸುಪಾಸಿನ ಜನತೆಗೆ ರಾಜ್ಯ ಸರ್ಕಾರ ಮಾಡುತ್ತಿರುವ ಅತೀ ದೊಡ್ಡ ದ್ರೋಹವಾಗಿದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಬೆಳ್ಮಣ್ ಬಳಿ ಟೋಲ್ ನಿರ್ಮಾಣಕ್ಕೆ ಚಾಲನೆ ನೀಡಿತ್ತು. ಆ ಸಂದರ್ಭದಲ್ಲಿ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಹಾಗೂ ಸ್ಥಳೀಯರ ತೀವ್ರ ಹೋರಾಟದ ಫಲವಾಗಿ ಆದೇಶವನ್ನು ಸರ್ಕಾರ ಹಿಂಪಡೆದಿತ್ತು. ಪ್ರಸ್ತುತ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನಿಲುವಿನಿಂದಾಗಿ ರಾಜ್ಯ ದಿವಾಳಿಯ ಅಂಚಿನತ್ತ ಸಾಗುತ್ತಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪುನಃ ಈ ಭಾಗದಲ್ಲಿ ಟೋಲ್ ಸಂಗ್ರಹ ಮಾಡುವುದಕ್ಕೆ ಆದೇಶ ನೀಡುವ ಮೂಲಕ ಜನತೆಗೆ ಮತ್ತಷ್ಟು ತೊಂದರೆ ನೀಡುತ್ತಿದೆ. ಈ ಪ್ರಸ್ತಾಪಿತ ಟೋಲ್ ಸಂಗ್ರಹ ಕೇಂದ್ರದಿಂದ ಜನರಿಗಾಗುವ ತೊಂದರೆಯನ್ನು ಕೂಡಲೇ ಜಿಲ್ಲಾಧಿಕಾರಿಗಳು ಸರ್ಕಾರದ ಗಮನಕ್ಕೆ ತರುವ ಮೂಲಕ ರಾಜ್ಯ ಸರ್ಕಾರ ಟೋಲ್ ಸಂಗ್ರಹಕ್ಕೆ ನೀಡಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ತಪ್ಪಿದಲ್ಲಿ ಬಿಜೆಪಿ ಬೆಳ್ಮಣ್ ಮಹಾ ಶಕ್ತಿಕೇಂದ್ರ ಪರಿಸರದ ಎಲ್ಲ ಗ್ರಾಮಗಳ ಪ್ರಮುಖರೊಂದಿಗೆ ಸ್ಥಳೀಯ ಟೋಲ್ ಸಂಗ್ರಹ ವಿರೋಧಿ ಹೋರಾಟ ಸಮಿತಿಯೊಂದಿಗೆ ಕೈಜೋಡಿಸಿ ತೀವ್ರ ಪ್ರತಿಭಟನೆ ನಡೆಸಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಜಿ.ಪಂ. ಮಾಜಿ ಸದಸ್ಯೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೋಳ ಜಯರಾಮ ಸಾಲ್ಯಾನ್, ಬೆಳ್ಮಣ್ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ದೇವೇಂದ್ರ ಶೆಟ್ಟಿ, ಪ್ರಮುಖರಾದ ಸೂರ್ಯಕಾಂತ ಶೆಟ್ಟಿ, ಬಾಲಕೃಷ್ಣ ಹೆಗ್ಡೆ, ಪ್ರವೀಣ್ ಸಾಲ್ಯಾನ್, ಬೆಳ್ಮಣ್‌ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಂದೀಪ್ ಅಂಚನ್, ಗ್ರಾಮ ಪಂಚಾಯಿತಿ ಸದಸ್ಯ ಪ್ರೇಮ್ ಕುಲಾಲ್, ದಯಾನಂದ ಶೆಟ್ಟಿ, ಮೋಹನ್‌ ಶೆಟ್ಟಿ ಬೋಳ, ಕಿರಣ್ ಶೆಟ್ಟಿ, ವಿಶಾಲ್ ಸಾಲಿಯಾನ್, ನಂದಳಿಕೆ ಗ್ರಾಮ ಪಂಚಾಯಿತಿ ಸದಸ್ಯ ನಿತ್ಯಾನಂದ ಅಮೀನ್, ಗಿರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳ ಮದುವೆ ಸಂಬಂಧ ಹತ್ಯೆ ಯತ್ನಕ್ಕೊಳಗಾಗಿದ್ದ ಮಹಿಳೆ ಸಾವು
ಕೋಗಿಲು ಒತ್ತುವರಿಗೆ ಇಬ್ಬರು ಖಾಕಿಬಲೆಗೆ