ಬ್ಯಾಡಗಿ: ಹಾವೇರಿ ಜಿಲ್ಲೆ ರೈತರಿಗೆ ಪ್ರತಿ ಎಕರೆಗೆ ₹೨೫ ಸಾವಿರಗಳಂತೆ ಬರ ಪರಿಹಾರ ಘೋಷಿಸಿ ಸಮಯಕ್ಕೆ ಸರಿಯಾಗಿ ಬೆಳೆವಿಮೆ ಹಣ ವಿತರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಶುಕ್ರವಾರ ಬ್ಯಾಡಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಗಮಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಶತಮಾನಗಳಿಂದ ಕೇಳರಿಯದ ಬರಗಾಲ ಜಿಲ್ಲೆ ಹಾಗೂ ರಾಜ್ಯವನ್ನು ಆವರಿಸಿದೆ.ಇದರಿಂದ ರೈತರು ಆರ್ಥಿಕ ಸಂಕಷ್ಠಕ್ಕಿಡಾಗಿದ್ದಾರೆ. ಜಿಲ್ಲೆಯ ರೈತರು ಎರಡೆರಡು ಬಾರಿ ಬಿತ್ತನೆ ಮಾಡಿದರೂ ಕೂಡ ವರುಣ ರೈತನ ಮೇಲೆ ಕಿಂಚಿತ್ತು ಕಾಳಜಿ ತೋರಲಿಲ್ಲ. ಮಳೆ ಬಾರದೇ ಬೆಳೆ ಕಳೆದುಕೊಂಡ ರೈತ ಆತ್ಮಹತ್ಯೆಯಂತಹ ದಾರಿ ಹಿಡಿದಿದ್ದಾನೆ.ರಾಜ್ಯ ಸರ್ಕಾರ ರೈತರ ಹೋರಾಟಕ್ಕೆ ಮಣಿದು ಜಿಲ್ಲೆಯ ಎಂಟು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಕೈತೊಳೆದುಕೊಂಡಿದೆ.ಎರಡು ಸಾವಿರ ಪರಿಹಾರ ಕೊಟ್ಟಿದ್ದನ್ನು ಬಿಟ್ಟರೆ ಈವರೆಗೂ ಯಾವುದೇ ಪರಿಹಾರ ನೀಡಿಲ್ಲ. ರಾಜ್ಯದಲ್ಲಿ ೨೮ ಲೋಕಸಭಾ ಸದಸ್ಯರಿದ್ದರು ಕೂಡ ಬರಗಾಲದ ಕುರಿತು ತುಟಿ ಬಿಚ್ಚದೇ ಮೌನಕ್ಕೆ ಶರಣಾಗಿದ್ದಾರೆ. ರಾಜ್ಯದಲ್ಲಿರುವ ಎಲ್ಲ ಪಕ್ಷಗಳು ರೈತರ ಹೆಸರಿನಲ್ಲಿ ಚುನಾವಣೆ ಮಾಡಿ ಕೊನೆಗೆ ಪ್ರಮಾಣ ವಚನ ಸ್ವೀಕಾರ ಮಾಡಿ ಬಳಿಕ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಇದನ್ನು ರೈತ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಆರೋಪಿಸಿದರು.
ಕೇಂದ್ರದ ಮೇಲೆ ರಾಜ್ಯದ ಮೇಲೆ ಕೇಂದ್ರ ಸರ್ಕಾರಗಳು ಬರಪರಿಹಾರದ ಕುರಿತು ಬೆರಳು ತೋರಿಸುತ್ತಾ ರಾಜಕೀಯ ಮಾಡುತ್ತ ರೈತರಿಗೆ ಮೋಸ ಮಾಡುತ್ತಿವೆ.ರಾಜಕೀಯ ಪಕ್ಷಗಳು ಕೇಂದ್ರದ ಚುನಾವಣೆಯ ಗುಂಗಿನಲ್ಲಿದ್ದು, ರೈತರ ಸಮಸ್ಯೆಗಳ ಕುರಿತು ಚರ್ಚಿಸದಿರುವುದು ವಿಷಾಧನೀಯ. ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕರಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಬೀಜ ಗೊಬ್ಬರ ಉಳಿಮೆ ಖರ್ಚು ಸೇರಿದಂತೆ ಪ್ರತಿ ಎಕರೆಗೆ ₹ ೨೦ಸಾವಿರ ಖರ್ಚು ಬರುತ್ತದೆ. ಹೀಗಾಗಿ ಪ್ರತಿ ಎಕರೆಗೆ ₹೨೫ ಸಾವಿರ ಬರಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರೈತ ಮುಖಂಡರಾದ ಗಂಗಣ್ಣ ಎಲಿ, ಕಾರ್ಯಾಧ್ಯಕ್ಷ ಕಿರಣಕುಮಾರ ಗಡಿಗೋಳ, ಬಸವರಾಜ ಕುಮ್ಮೂರ, ನಿಂಗಪ್ಪ ಹೆಗ್ಗಣ್ಣನವರ, ಜಾನಪುನಿತ ಸೇರಿದಂತೆ ರೈತ ಮುಖಂಡರು ಇದ್ದರು.