ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಜೋಶಿ ಹೇಳಿಕೆ
ಕನ್ನಡಪ್ರಭ ವಾರ್ತೆ ದಾವಣಗೆರೆಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕಳೆದ 10 ವರ್ಷಗಳಲ್ಲಿ ದೇಶದ ಬಡವರಿಗಾಗಿ 4 ಕೋಟಿಗೂ ಅಧಿಕ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ದಾವಣಗೆರೆ ತಾಲೂಕಿನ ಹೆಮ್ಮನಬೇತೂರು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಬಡ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ಕಲ್ಪಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಭಾರತ ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು.ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೈ ಗೊಂಡಿರುವ ಜನಕಲ್ಯಾಣ ಕಾರ್ಯಕ್ರಮಗಳಿಂದ ದೇಶದ ಅಭಿವೃದ್ಧಿ ಚಿತ್ರಣ ಬದಲಾಗಿದೆ. ಉಜ್ವಲ 2.0 ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಮತ್ತೆ ನಾಲ್ಕು ಲಕ್ಷ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಹರಿಹರ ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕರಾದ ಬಸವರಾಜ್ ನಾಯ್ಕ್, ಪ್ರೊ.ಲಿಂಗಪ್ಪ, ಎಸ್.ವಿ.ರಾಮಚಂದ್ರ, ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಹೆಮ್ಮನಬೇತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಮ್ಮ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮ್ಯಾನೇಜರ್ ಪ್ರಕಾಶ್, ದಾವಣಗೆರೆ ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಗಿರಿ, ಕೆನರಾಬ್ಯಾಂಕ್ ಎಜಿಎಂ ಶಿವಪ್ರಸಾದ್, ವಿವಿಧ ಇಲಾಖೆ ಅಧಿಕಾರಿಗಳಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ಸಚಿವರು ವಿತರಿಸಿದರು. ಸಂಕಲ್ಪಯಾತ್ರೆ ಅಂಗವಾಗಿ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಆಯೋಜಿಸಲಾಗಿತ್ತು.ಔಷಧ ಸಿಂಪಡಣೆಗೆ ಡ್ರೋಣ್ ಬಳಕೆ
ಭವಿಷ್ಯದಲ್ಲಿ ದೇಶದ ಕೃಷಿ ಕ್ಷೇತ್ರ ಸಂಪೂರ್ಣ ತಾಂತ್ರಿಕತೆಗಳ ಮೇಲೆ ನಡೆಯಲಿದೆ. ಇದರ ಭಾಗವಾಗಿ ಬೆಳೆಗಳಿಗೆ ಔಷಧ ಸಿಂಪಡಣೆಗೆ 15 ಸಾವಿರ ಡ್ರೋಣ್ ಗಳನ್ನು ಸ್ತ್ರೀಶಕ್ತಿ ಸಂಘಗಳಿಗೆ ಶೇ.80 ರಷ್ಟು ಸಹಾಯಧನದೊಂದಿಗೆ ನೀಡಲಿದೆ. ಈ ಯೋಜನೆಗೆ ನಮೋ ಡ್ರೋಣ್ ದೀದಿ ಎಂದು ಹೆಸರಿಸಲಾಗಿದೆ. ಈ ಡ್ರೋಣ್ ಸಹಾಯದಿಂದ ನ್ಯಾನೋ ಯೂರಿಯಾವನ್ನು ದಿನಕ್ಕೆ 100 ಎಕರೆ ಸಿಂಪಡಿಸಬಹುದು.ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ