ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾಗಿ ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಆಯ್ಕೆ

KannadaprabhaNewsNetwork |  
Published : Dec 30, 2023, 01:15 AM ISTUpdated : Dec 30, 2023, 01:16 AM IST
29ಕೆಪಿಎಲ್24  ಬಸವರಾಜ ರಾಯರಡ್ಡಿ | Kannada Prabha

ಸಾರಾಂಶ

ಶಾಸಕ ಬಸವರಾಜ ರಾಯರಡ್ಡಿ ಅವರಿಗಾಗಿಯೇ ಈ ಹಿಂದೆ ಜೆ.ಎಚ್. ಪಟೇಲ್ ನೇತೃತ್ವದ ಸರ್ಕಾರದಲ್ಲಿ ದೆಹಲಿ ಪ್ರತಿನಿಧಿ ಎನ್ನುವ ಸಂಪುಟ ದರ್ಜೆಯ ಸ್ಥಾನಮಾನವುಳ್ಳ ಹುದ್ದೆ ಸೃಜಿಸಲಾಗಿತ್ತು. ಈಗ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಎನ್ನುವ ಹೊಸ ಹುದ್ದೆಯನ್ನು ಸೃಜಿಸಿರುವುದು ವಿಶೇಷ.

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರರಾಗಿ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಸವರಾಜ ರಾಯರಡ್ಡಿ ನೇಮಕವಾಗಿದ್ದಾರೆ.ಸರ್ಕಾರದಲ್ಲಿದ್ದುಕೊಂಡೇ ಸರ್ಕಾರದ ವಿರುದ್ಧ ಗುಡುಗುತ್ತಲೇ ಇದ್ದ ರಾಯರಡ್ಡಿ, ನಿಗಮ, ಮಂಡಳಿ ಅಧ್ಯಕ್ಷ ಸ್ಥಾನವನ್ನು ನಯವಾಗಿಯೇ ತಿರಸ್ಕಾರ ಮಾಡಿದ್ದರು. ಅಲ್ಲದೆ, ನಾನು ಶಾಸಕನಾಗಿಯೇ ಇರುತ್ತೇನೆ ಎನ್ನುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು.ಆಗೊಮ್ಮೆ, ಈಗೊಮ್ಮೆ ಸರ್ಕಾರದ ವಿರುದ್ಧ ಗುಡುಗಿದರೂ ಸಿಎಂ ಸಿದ್ದರಾಮಯ್ಯ ಅವರನ್ನು ಬಲವಾಗಿ ಸಮರ್ಥಿಸಿಕೊಳ್ಳುವುದು ಹಾಗೂ ಸರ್ಕಾರ ಇಕ್ಕಟ್ಟಿಗೆ ಸಿಲುಕಿದಾಗಲೆಲ್ಲ ಸರ್ಕಾರದ ಪರವಾಗಿ ಗಟ್ಟಿಯಾಗಿ ನಿಲ್ಲುತ್ತಿದ್ದರು.ಈಗ ಸಿಎಂ ಸಿದ್ದರಾಮಯ್ಯ ಆರ್ಥಿಕ ಸಲಹೆಗಾರ ಎನ್ನುವ ಸಂಪುಟ ದರ್ಜೆಯ ಸ್ಥಾನಮಾನವುಳ್ಳ ಹುದ್ದೆಯನ್ನು ಸೃಜಿಸಿ, ರಾಯರಡ್ಡಿ ಅವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ.

ರಾಜ್ಯಪಾಲರ ಆದೇಶನುಸಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಡಿ.29ರಂದು ಆದೇಶ ಹೊರಡಿಸಿದ್ದಾರೆ.ರಾಯರಡ್ಡಿಗಾಗಿ ಹುದ್ದೆಗಳು ಸೃಷ್ಟಿ: ಶಾಸಕ ಬಸವರಾಜ ರಾಯರಡ್ಡಿ ಅವರಿಗಾಗಿಯೇ ಈ ಹಿಂದೆ ಜೆ.ಎಚ್. ಪಟೇಲ್ ನೇತೃತ್ವದ ಸರ್ಕಾರದಲ್ಲಿ ದೆಹಲಿ ಪ್ರತಿನಿಧಿ ಎನ್ನುವ ಸಂಪುಟ ದರ್ಜೆಯ ಸ್ಥಾನಮಾನವುಳ್ಳ ಹುದ್ದೆ ಸೃಜಿಸಲಾಗಿತ್ತು. ಈಗ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಎನ್ನುವ ಹೊಸ ಹುದ್ದೆಯನ್ನು ಸೃಜಿಸಿರುವುದು ವಿಶೇಷ.ಆರು ಬಾರಿ ಶಾಸಕರು ಮತ್ತು ಒಂದು ಬಾರಿ ಸಂಸದರಾಗಿರುವ ಬಸವರಾಜ ರಾಯರಡ್ಡಿ ವಸತಿ ಹಾಗೂ ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಈಗ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರಾಗಿ ಸಂಪುಟ ದರ್ಜೆಯ ಸ್ಥಾನಮಾನ ಪಡೆದುಕೊಂಡಿದ್ದಾರೆ.ಪಕ್ಷದಲ್ಲಿಯೂ ಹಲವಾರು ಹುದ್ದೆಗಳನ್ನು ನಿಭಾಯಿಸಿರುವ ಅವರು ಕೆಪಿಸಿಸಿ ವಕ್ತಾರರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.ಕೈ ತಪ್ಪಿದ್ದ ಸಚಿವ ಸ್ಥಾನ: ಪ್ರಸಕ್ತ ಸರ್ಕಾರದಲ್ಲಿ ಬಸವರಾಜ ರಾಯರಡ್ಡಿ ಇನ್ನೇನು ಸಚಿವರಾದರು ಎನ್ನುವಾಗ ಜಾತಿ ಲೆಕ್ಕಾಚಾರದ ಹಂಚಿಕೆಯಲ್ಲಿ ಸಚಿವ ಸ್ಥಾನ ಕೈ ತಪ್ಪಿತ್ತು. ಸಿಎಂ ಸಿದ್ದರಾಮಯ್ಯ ಸಹ ಹಲವಾರು ಬಾರಿ ರಾಯರಡ್ಡಿ ಸಚಿವರಾಗಬೇಕು, ಅದರಲ್ಲೂ ಆರ್ಥಿಕ ಸಚಿವರಾಗಬೇಕು ಎಂದೆಲ್ಲ ಬಹಿರಂಗ ವೇದಿಕೆಯಲ್ಲೇ ಪದೇಪದೇ ಹೇಳುತ್ತಿದ್ದರು. ಈಗ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿದ್ದಾರೆ.ಧನ್ಯವಾದ: ದೊಡ್ಡ ಜವಾಬ್ದಾರಿ ನೀಡಿದ್ದು ಖುಷಿಯಾಗಿದೆ. ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ಇಂಥದ್ದೊಂದು ಅವಕಾಶ ಕಲ್ಪಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಂದೀಪ್‌ ಸಿಂಗ್ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಧನ್ಯವಾದ ಹೇಳುತ್ತೇನೆ ಎನ್ನುತ್ತಾರೆ ನೂತನ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ