ರಾಷ್ಟ್ರಕವಿ ಕುವೆಂಪು 20ನೇ ಶತಮಾನ ಶ್ರೇಷ್ಠ ಸಾಹಿತಿ

KannadaprabhaNewsNetwork | Updated : Dec 30 2023, 01:16 AM IST

ಸಾರಾಂಶ

ಕುವೆಂಪು ಆಧ್ಯಾತ್ಮಿಕ ಚಿಂತನೆಯುಳ್ಳ ಶೇಷ್ಠ ಸಾಹಿತಿ. ಅವರು 20ನೇ ಶತಮಾನದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕವಿಯ ಶ್ರೇಷ್ಠತೆ, ಬರಹಗಳು ಓದುಗರ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರುತ್ತವೆ ಎಂದು ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಂಗಾಳಿ ಸಾಹಿತಿ ಶೀರ್ಷೇಂದು ಮುಖ್ಯೋಪಾಧ್ಯಾಯ ಕುಪ್ಪಳಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಕುವೆಂಪು ಆಧ್ಯಾತ್ಮಿಕ ಚಿಂತನೆಯುಳ್ಳ ಶೇಷ್ಠ ಸಾಹಿತಿಯಾಗಿದ್ದು, 20ನೇ ಶತಮಾನದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕವಿಯ ಶ್ರೇಷ್ಠತೆ, ಬರಹಗಳು ಓದುಗರ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರುತ್ತವೆ ಎಂದು ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಂಗಾಳಿ ಸಾಹಿತಿ ಶೀರ್ಷೇಂದು ಮುಖ್ಯೋಪಾಧ್ಯಾಯ ಹೇಳಿದರು.

ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯ ಹೇಮಾಂಗಣದಲ್ಲಿ ರಾಷ್ಟ್ರಕವಿ ಕುವೆಂಪು 119ನೇ ಜನ್ಮದಿನಾಚರಣೆ ಅಂಗವಾಗಿ ಶುಕ್ರವಾರ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ ಪ್ರಶಸ್ತಿ ಫಲಕದೊಂದಿಗೆ ₹5 ಲಕ್ಷ ಮೊತ್ತದ ಕುವೆಂಪು ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

ಆಧ್ಯಾತ್ಮಿಕದೊಂದಿಗೆ ವೈಚಾರಿಕ ಚಿಂತನೆಯನ್ನೂ ಹೊಂದಿದ್ದ ಕುವೆಂಪು ಮೌಢ್ಯಾಚರಣೆ ಕಟುವಾಗಿ ವಿರೋಧಿಸಿದ ಪ್ರಭಾವಿ ಲೇಖಕರಾಗಿದ್ದಾರೆ. ನಿಷ್ಠುರ ವ್ಯಕ್ತಿತ್ವವನ್ನೂ ಹೊಂದಿದ್ದರು. ರಾಮಕೃಷ್ಣ ಪರಮಹಂಸ, ರವೀಂದ್ರನಾಥ ಠಾಗೋರ್, ಅರವಿಂದರ ಪ್ರಭಾವವೂ ಅವರ ಮೇಲಿತ್ತು. ಕುಪ್ಪಳಿಯ ಶ್ರೀಮಂತ ಪರಿಸರ ಕೂಡ ಅವರ ಬರಹಗಳಿಗೆ ಪೂರಕವಾಗಿವೆ. ಕನ್ನಡಿಗರ ಹೃದಯವಂತಿಕೆ ಮತ್ತು ಪ್ರಾಮಾಣಿಕತೆಯೂ ಮೆಚ್ಚುವಂತದ್ದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕುವೆಂಪು ತಮ್ಮ ಕೃತಿಗಳ ಮೂಲಕ ಚಿರಂಜೀವಿ ಆಗಿದ್ದಾರೆ. ಅವರು ಕೊಟ್ಟಿರುವ ಸಂದೇಶ ಮನುಕುಲದ ಏಳಿಗೆಗೆ ಪೂರಕವಾಗಿದೆ. ಕವಿಯ ಹೆಸರಿನಲ್ಲಿ ನಾಡಿನ ಹೊರಗಿನವರಿಗೂ ರಾಷ್ಟ್ರೀಯ ಪುರಸ್ಕಾರ ನೀಡುತ್ತಿರುವುದು ಮತ್ತು ಪ್ರಶಸ್ತಿ ಪುರಸ್ಕೃತರ ಸಾಹಿತ್ಯ ಕೃತಿಯನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಮೂಲಕ ಕನ್ನಡಿಗರಿಗೆ ಓದುವ ಅವಕಾಶ ಕಲ್ಪಿಸುತ್ತಿರುವುದು ಪ್ರಶಂಸನೀಯ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ, ಬೆಂಗಳೂರಿನ ನೆಪ್ರೋ ಯುರಾಲಜಿ ಸ್ಥಾಪಕ ನಿರ್ದೇಶಕ ಡಾ. ಜಿ.ಕೆ. ವೆಂಕಟೇಶ್, ಶಿವಮೊಗ್ಗ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಲೋಖಂಡೆ, ದೇವಂಗಿ ಗ್ರಾಪಂ ಅಧ್ಯಕ್ಷೆ ಗಿರಿಜಾ ವೇದಿಕೆಯಲ್ಲಿದ್ದರು.

ಟಿ.ಎನ್. ಅರವಿಂದ್ ಪ್ರಾರ್ಥಿಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೆಶಕ ಉಮೇಶ್ ಸ್ವಾಗತಿಸಿದರು. ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳು ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರಾಜೇಂದ್ರ ಬುರುಡಿಕಟ್ಟಿ ಪ್ರತಿಷ್ಠಾನದ ಖಜಾಂಚಿ ಡಿ.ಎಂ. ಮನುದೇವ್ ವಂದಿಸಿದರು.

- - -

ಬಾಕ್ಸ್‌-1ಕುವೆಂಪು ಕಲಾ ಮಂದಿರ ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ವಿಶ್ವಮಾನವ ಸಂದೇಶವನ್ನು ಸಾರಿದ ಕುವೆಂಪು ಅವರ ಸಾಹಿತ್ಯ ದೇಶದ ಆಸ್ತಿಯಾಗಿದೆ. ಕನ್ನಡಿಗರ ಹೃದಯದಲ್ಲಿ ಕವಿ ಶಾಶ್ವತವಾಗಿ ನೆಲೆಸಿದ್ದಾರೆ. ಮುಂದಿನ ಜನಾಂಗ ಅರಿಯುವಂತೆ ಅವರನ್ನು ಶಾಶ್ವತಗೊಳಿಸುವ ಕೆಲಸ ಆಗಬೇಕಿದೆ. ಕುವೆಂಪು ಕಲಾ ಮಂದಿರದ ನಿರ್ಮಾಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಸರ್ಕಾರದ ಕಡೆಯಿಂದ ಆಗಬೇಕಿರುವ ಕೆಲಸಗಳನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುವುದಾಗಿಯೂ ತಿಳಿಸಿದರು.

- - - ಬಾಕ್ಸ್‌-2 3500 ಎಕರೆ ಬಯೋರಿಸರ್ವರ್ ಪೋಷಣೆಕುವೆಂಪು ಪ್ರತಿಷ್ಠಾನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಮಾತನಾಡಿ, ಸಾಂಸ್ಕೃತಿಕ ಕಾಳಜಿಯ ರಾಜಕಾರಣಿಗಳಿಂದಾಗಿ ಸ್ಥಾಪನೆ ಆಗಿರುವ ಕುವೆಂಪು ಪ್ರತಿಷ್ಠಾನ ರಾಷ್ಟ್ರದ ಗಮನ ಸೆಳೆಯುತ್ತಿದೆ. ಈ ದೇಶದ ಯಾವುದೇ ಸಾಹಿತಿಗೆ ಸಿಗದ ಗೌರವ ಕುವೆಂಪು ಅವರಿಗೆ ಸಂದಿದೆ. ಕವಿಯ ಹೆಸರಿನಲ್ಲಿ 3500 ಎಕರೆ ಪ್ರದೇಶ ಬಯೋರಿಸರ್ವರ್ ಪೋಷಣೆ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಸ್ವಲ್ಪಮಟ್ಟಿನ ಅಡಚಣೆಯಾಗಿದೆ. ಎಡ, ಬಲ, ಮಧ್ಯಮ ಹೀಗೇ ಎಲ್ಲ ಪಂಥೀಯರೂ ಕವಿಯನ್ನು ಉಲ್ಲೇಖಿಸುತ್ತಾರೆ. ಆದರೆ ಹೇಳುವಂತೆ ನಡೆದುಕೊಳ್ಳುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ ಎಂದರು.

- - -

-29ಟಿಟಿಎಚ್01:

ರಾಷ್ಟ್ರಕವಿ ಕುವೆಂಪು ಅವರ 119ನೇ ಜನ್ಮದಿನಾಚರಣೆ ಅಂಗವಾಗಿ ಕುಪ್ಪಳಿ ಹೇಮಾಂಗಣದಲ್ಲಿ ಬಂಗಾಳಿ ಸಾಹಿತಿ ಶೀರ್ಷೇಂದು ಮುಖ್ಯೋಪಾಧ್ಯಾಯ ಅವರಿಗೆ ಕುವೆಂಪು ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Share this article