ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತ ಆಧಾರಿತ ಪಕ್ಷವಾದ್ದರಿಂದ ಎಂದಿಗೂ ಪಕ್ಷದಲ್ಲಿ ವ್ಯತ್ಯಾಸ ಆಗುವುದಿಲ್ಲ. ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೆ ವೈಚಾರಿಕ ನೆಲೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಜಿಲ್ಲಾ ಬಿಜೆಪಿ ಉಸ್ತುವಾರಿ ಹಾಗೂ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚನ್ನಬಸಪ್ಪ ಕರೆ ನೀಡಿದರು.
ಅಭಿಪ್ರಾಯಗಳನ್ನು ಸಂಗ್ರಹ ಮಾಡಿ ಸಂಘಟನೆಗೆ ಶಕ್ತಿ ಸಿಗುವ ರೀತಿ ಜಿಲ್ಲಾಧ್ಯಕ್ಷರ ಆಯ್ಕೆ ಚಟುವಟಿಕೆಯನ್ನು ಇಡೀ ರಾಜ್ಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡೆಸುತ್ತಿದ್ದಾರೆ. ಹಿಂದೆ ಸದಸ್ಯತ್ವ ನೊಂದಾಯಿಸಿ ನಂತರ ಬೂತ್ ಅಧ್ಯಕ್ಷ, ಮಂಡಲ ಅಧ್ಯಕ್ಷ ನಂತರ ಜಿಲಾಧ್ಯಕ್ಷ, ರಾಜ್ಯ ನಂತರ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿತ್ತು. ಒಟ್ಟು ಪರಿಸ್ಥಿತಿಗನುಗುಣವಾಗಿ ಯೋಚಿಸಿ ಮೇಲ್ಮಟ್ಟದಿಂದಲೇ ಎಲ್ಲಾ ಆಯ್ಕೆ ಪ್ರಕ್ರಿಯೆಗಳನ್ನು ಆರಂಭಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು.
ಎಲ್ಲಿಯೂ ಗೊಂದಲಗಳಿಲ್ಲದೆ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಅದನ್ನು ಸ್ವಾಗತ ಮಾಡಲಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಅನೇಕ ಸಂಗತಿಗಳು ಒಪ್ಪಿಗೆ ಆಗದಿರಬಹುದು. ಅದನ್ನು ಸಹಿಸಿಕೊಳ್ಳುವ ಶಕ್ತಿ ಕಾರ್ಯಕರ್ತರಿಗಿದೆ ಎಂದು ಹೇಳಿದರು.ಕಾಂಗ್ರೆಸ್‌ನವರು ಬಿಜೆಪಿ ಬಗ್ಗೆ ಬೇರೆ ಬೇರೆ ರೀತಿಯ ಮಾತುಗಳನ್ನು ಆಡುತ್ತಿದ್ದರೆ, ಬಿಜೆಪಿಯಲ್ಲಿರುವ ಕೆಲವರೂ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ. ಅದನ್ನು ಹಿರಿಯರು ಸರಿಪಡಿಸುತ್ತಾರೆ. ಅಂತಹ ನಡವಳಿಕೆ ಸರಿಯಲ್ಲ. ಎಷ್ಟೇ ದೊಡ್ಡವರಾದರೂ ಕೂಡ ಪಕ್ಷದ ರೀತಿ ನೀತಿ, ಶಿಸ್ತಿಗೆ ಅನುಗುಣವಾಗಿ ನಡೆಯುವುದು ಜವಾಬ್ದಾರಿ, ಅದನ್ನು ತಿದ್ದುವ ಕೆಲಸ ರಾಷ್ಟ್ರೀಯ ನಾಯಕರು ಮಾಡುತ್ತಾರೆ. ನಾವ್ಯಾರು ಗೊಂದಲಕ್ಕೆ ಸಿಕ್ಕಿಕೊಳ್ಳಬಾರದು ಎನ್ನುವ ಕಾರಣಕ್ಕೆ ಈ ವಿಚಾರ ಪ್ರಸ್ತಾಪ ಮಾಡುತ್ತಿದ್ದೇನೆ. ಚುನಾವಣೆ ಬರುತ್ತದೆ, ಹೋಗುತ್ತದೆ. ಆದರೆ, ನಮ್ಮಲ್ಲಿ ಗೊಂದಲಗಳು ಬೇಡ. ನಾವು ಇಟ್ಟಿರುವ ನಂಬಿಕೆ, ವೈಚಾರಿಕ ನೆಲೆಗಟ್ಟನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕಾಶ್ಮೀರಕ್ಕಾಗಿ, ದೇಶಕ್ಕಾಗಿ ಬದುಕಿದಂತಹ ಪಕ್ಷ ಬಿಜೆಪಿ, ಪಕ್ಷದ ಮೊದಲ ಹೋರಾಟವೇ ಕಾಶ್ಮೀರ ಉಳುವಿಗಾಗಿ ನಡೆದಿದೆ.ದೇಶ ಮೊದಲು ಎಂದು ಹೇಳಿದ ಪಕ್ಷ ನಮ್ಮದು ಎಂದು ಹೇಳಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಪ್ರಧಾನ ಕಾರ್ಯದರ್ಶಿ ದೇವರಾಜ್ ಶೆಟ್ಟಿ, ಬೆಳವಾಡಿ ರವೀಂದ್ರ ಉಪಸ್ಥಿತರಿದ್ದರು.