ಕನ್ನಡಪ್ರಭ ವಾರ್ತೆ ಬೆಂಗಳೂರು
ಕನ್ನಡ ನಾಮಫಲಕಗಳ ಅಳವಡಿಕೆ ಕಡ್ಡಾಯಕ್ಕೆ ಅಗ್ರಹಿಸಿ ಹೋರಾಟ ನಡೆಸಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ 53ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಕನ್ನಡ ನೂರಕ್ಕೂ ಹೆಚ್ಚು ಸಂಘಟನೆಗಳು ಒಗ್ಗೂಡಿ ವಿರೋಧಿಸಿದ್ದು, ಪ್ರತಿಭಟನೆಯ ಎಚ್ಚರಿಕೆ ನೀಡಿವೆ. ಕನ್ನಡ ಸಂಘಟನೆಗಳ ಈ ನಿರ್ಧಾರಕ್ಕೆ ಹಿರಿಯ ಸಾಹಿತಿಗಳು ಬೆಂಬಲ ಸೂಚಿಸಿದ್ದಾರೆ.ಶುಕ್ರವಾರ ಕನ್ನಡ ಹೋರಾಟಗಾರರ ಬಂಧನ ವಿರೋಧಿಸಿ ವಸಂತ ನಗರದ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಸಭಾಂಗಣದಲ್ಲಿ ನಡೆದ ಕನ್ನಡ ಸಂಘಟನೆಗಳ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದು, ಪ್ರಮುಖ ಎರಡು ನಿರ್ಣಯಗಳನ್ನು ಕೈಗೊಂಡರು. ಕನ್ನಡೇತರ ನಾಮಫಲಕ ತೆರವಿಗೆ ಒತ್ತಾಯಿಸಿ ನಡೆದ ಹೋರಾಟದಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿದಂತೆ ಬಂಧನಕ್ಕೊಳಗಾಗಿರುವ 53ಕ್ಕೂ ಹೆಚ್ಚು ಕಾರ್ಯಕರ್ತರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ರಾಜ್ಯ ಸರ್ಕಾರ ಎಲ್ಲ ಕನ್ನಡಪರ ಹೋರಾಟಗಾರರ ಮೇಲೆ ದಾಖಲಾಗಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕೆಂಬ ಸರ್ಕಾರವನ್ನು ಒತ್ತಾಯಿಸುವ ಕುರಿತು ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಯಿತು.
ಜೈಲಿಗೆ ಹೋಗಲೂ ಸಿದ್ಧ- ಹಂಪಾ:ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಮಾತನಾಡಿ, ಸರ್ಕಾರ ನಾರಾಯಣಗೌಡ ಸೇರಿದಂತೆ ಇತರರನ್ನು ಕೂಡಲೇ ಬಿಡುಗಡೆ ಮಾಡಬೇಕು. ಎಂ.ಜಿ.ರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿಸಬೇಕು. ಕನ್ನಡ ಹೋರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಸರ್ಕಾರ ಕಾನೂನು ರೂಪಿಸಬೇಕು ಎಂದ ಅವರು, ಕನ್ನಡಕ್ಕಾಗಿ ಜೈಲಿಗೆ ಹೋಗಲು ಸಿದ್ಧನಿದ್ದೇನೆ ಎಂದು ಹೇಳಿದರು.ಭಿನ್ನಮತ ಮರೆತು ಒಗ್ಗಟ್ಟಿನ ಮಂತ್ರ:
ಹೋರಾಟಗಾರ ಸಾ.ರಾ.ಗೋವಿಂದು ಮಾತನಾಡಿ, ನಮ್ಮಲ್ಲಿ ಭಿನ್ನಾಭಿಪ್ರಾಯ ಇದ್ದರೂ ಇಂತಹ ಸಂದರ್ಭಗಳಲ್ಲಿ ಕನ್ನಡ ಹೋರಾಟಗಾರರ ಪರ ನಿಲ್ಲಬೇಕಿದೆ. ಗೋಕಾಕ್ ಚಳವಳಿಯ ಸಂದರ್ಭದಲ್ಲೂ ವಿರೋಧ ಮಾಡಿದವರು ಇದ್ದರು. ದ್ವಂದ್ವ ನಿಲುವು ಸಹಜ. ಆದರೆ, ಅಪಸ್ವರ ಬೇಡ. ಕನ್ನಡ ಅನುಷ್ಠಾನ ಜಾರಿಗೊಳ್ಳದಿದ್ದರೆ ಎಲ್ಲ ಸಂಘಟನೆಗಳು ಒಗ್ಗೂಡಿ ಗೋಕಾಕ್ ಮಾದರಿಯಲ್ಲಿ ಹೋರಾಟ ನಡೆಸುವ ಕುರಿತು ಚಿಂತನೆ ನಡೆಸಬೇಕಾಗುತ್ತದೆ ಎಂದರು.ಇದು ದುರ್ದೈವ- ದೊಡ್ಡರಂಗೇಗೌಡ:86ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ದೊಡ್ಡ ರಂಗೇಗೌಡ ಮಾತನಾಡಿ, ರಾಜ್ಯದಲ್ಲಿ ಪ್ರತಿಯೊಂದಕ್ಕೂ ಕನ್ನಡಿಗರು ಹೋರಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ದುರ್ದೈವ. ಇನ್ನು ಇದನ್ನು ಸಹಿಸಲಾಗದು. ಅಕ್ಕರೆಯ ಸ್ವಾಭಿಮಾನವೇ ಕನ್ನಡಿಗರ ಅಸ್ತ್ರ, ಅದನ್ನು ಝಳಪಿಸುವ ಕಾಲ ಕೂಡಿ ಬಂದಿದೆ. ಕನ್ನಡಕ್ಕಾಗಿ ಹೋರಾಟ ಮಾಡುತ್ತಿರುವ ನಾರಾಯಣಗೌಡ ಮತ್ತು ಕಾರ್ಯಕರ್ತರನ್ನು ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮ ಸಮರ್ಥನೀಯವಲ್ಲ. ಕನ್ನಡಪರ ಹೋರಾಟಗಾರರನ್ನು ಬಂಧಿಸಿ ಸರ್ಕಾರ ಜಗಳಕ್ಕಿಳಿದಿದೆ. ಸಾಹಿತಿಗಳು ಕನ್ನಡ ಪರ ಹೋರಾಟಗಾರರಿಗೆ ಸದಾ ಬೆಂಬಲ ನಿಲ್ಲಲಿದ್ದಾರೆ ಎಂದು ಹೇಳಿದರು.
ಸಾಹಿತಿಗಳು-ಹೋರಾಟಗಾರರ ಬೆಂಬಲ:ಕನ್ನಡದ ಉಳಿವಿಗಾಗಿ ಚಳವಳಿ ನಡೆಸಿದ ಹೋರಾಟಗಾರರನ್ನು ಬಂಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಸಾಹಿತಿಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ನೂರಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದು ಖಂಡನಾ ಸಭೆಗೆ ಬೆಂಬಲ ಸೂಚಿಸಿದ್ದವು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮಹೇಶ್ ಜೋಶಿ, ಕರ್ನಾಟಕ ವಿಕಾಸ ರಂಗದ ವ.ಚ.ಚನ್ನೇಗೌಡ, ಸಾಹಿತಿಗಳಾದ ಪದ್ಮಶ್ರೀ ಪುರಸ್ಕೃತ ದೊಡ್ಡರಂಗೇಗೌಡ, ಬೆಂಗಳೂರು ನಗರ ಜಿಲ್ಲೆ ಕಸಾಪ ಅಧ್ಯಕ್ಷ ಪ್ರಕಾಶ್‌ಮೂರ್ತಿ, ತಿಮ್ಮೇಶ್, ಭೈರಪ್ಪ, ರಾ.ನಂ.ಚಂದ್ರಶೇಖರ್, ಹರೀಶ್, ಗಿರೀಶ್‌ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.ಬೆಂಗಳೂರು ಬಂದ್: ಪ್ರವೀಣ್ ಶೆಟ್ಟಿ ಎಚ್ಚರಿಕೆ
ಬೆಂಗಳೂರು: ರಾಜ್ಯ ಸರ್ಕಾರ ಬಂಧಿತ ಕನ್ನಡಪರ ಹೋರಾಟಗಾರರನ್ನು ಬಿಡುಗಡೆ ಮಾಡದಿದ್ದರೆ ಬೆಂಗಳೂರು ಬಂದ್ ಮಾಡುವ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು. ಜೊತೆಗೆ 2024 ಫೆ.28ರೊಳಗೆ ನಾಮಫಲಕಗಳಲ್ಲಿ ಶೇ.60 ಕನ್ನಡ ಅನುಷ್ಠಾನಗೊಳ್ಳಬೇಕು. ಇಲ್ಲದಿದ್ದರೆ ಎಲ್ಲ ಕನ್ನಡಪರ ಸಂಘಟನೆಗಳೊಂದಿಗೆ ಒಟ್ಟಾಗಿ ಬೀದಿಗಿಳಿದು ಉಗ್ರ ಹೋರಾಟ ನಡೆಸುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ಅವರು ಎಚ್ಚರಿಸಿದರು.