ಕನ್ನಡಪ್ರಭ ವಾರ್ತೆ ಕಲಬುರಗಿ
ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ವಿ. ದಿವಾಕರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ನಂತರ ರೈಲು ನಿಲ್ದಾಣದ ಅಧಿಕಾರಿ ಮೂಲಕ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಸೊಲ್ಲಾಪುರ ರೈಲ್ವೆ ವಿಭಾಗದ ಡಿಆರ್‌ಎಂ ಅವರಿಗೆ ಮನವಿ ಪತ್ರ ಸಲ್ಲಿಸಿ, ಜಿಲ್ಲೆಯ ಜನಪ್ರತಿನಿಧಿಗಳು ಜನರಿಗೆ ರೈಲು ಸೌಲಭ್ಯಗಳನ್ನು ಕೊಡಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕಲಬುರ್ಗಿ ಮತ್ತು ವಾಡಿ ರೈಲು ನಿಲ್ದಾಣಗಳಿಂದ ಕೋಟ್ಯಾಂತರ ರೂ.ಗಳ ಲಾಭವಾಗುತ್ತಿದ್ದರೂ ರೈಲ್ವೆ ಇಲಾಖೆ ಜಿಲ್ಲೆಯ ಜನರ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಕಲಬುರ್ಗಿಯಿಂದ ಬೆಂಗಳೂರಿಗೆ ರೈಲಿನಲ್ಲಿ ದಟ್ಟಣೆಯ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಬೆಂಗಳೂರಿಗೆ ಹೊಸ ರೈಲುಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಹಲವಾರು ಬಾರಿ ಹೋರಾಟಗಳನ್ನು ಮಾಡಿದರೂ ಸಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ತಕ್ಷಣವೇ ಕಲಬುರ್ಗಿ- ಬೆಂಗಳೂರು ಹೊಸ ಇಂಟರ್‍ಸಿಟಿ ವೇಗಧೂತ ರೈಲು ಪ್ರಾರಂಭಿಸಿದರೆ ಸಮಸ್ಯೆ ನೂರಕ್ಕೆ ನೂರರಷ್ಟು ಪರಿಹಾರವಾಗದಿದ್ದರೂ ಶೇಕಡಾ 50ರಷ್ಟು ಸಮಸ್ಯೆ ಪರಿಹಾರಗೊಳ್ಳಲಿದೆ ಎಂದು ಅವರು ಹೇಳಿದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು ಕೇಂದ್ರದ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಕಲಬುರ್ಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿಯನ್ನು ಮಂಜೂರು ಮಾಡಿದ್ದರು. ಇಲ್ಲಿಯವರೆಗೆ ಆ ಕಾಮಗಾರಿಯ ಪ್ರಗತಿಯಾಗಿಲ್ಲ. ಕೂಡಲೇ ನೆನೆಗುದಿಗೆ ಬಿದ್ದಿರುವ ಕಾರ್ಯಗಳನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿರುವ ಎಲ್ಲ ರೈಲು ನಿಲ್ದಾಣಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ, ಉದ್ಯಾನ್ ಎಕ್ಸ್‌ಪ್ರೆಸ್ ಹಾಗೂ ಇನ್ನಿತರ ಎಕ್ಸ್‌ಪ್ರೆಸ್, ಬಾಗಲಕೋಟೆ- ಯಶವಂತಪುರ ಸಾಮಾನ್ಯ ಬೋಗಿಗಳನ್ನು ಹೆಚ್ಚಿಸುವಂತೆ, ವಾರಕ್ಕೆ ಒಂದು ದಿನ ಬೀದರ್‌ನಿಂದ ಕಲಬುರ್ಗಿ ಮಾರ್ಗವಾಗಿ ಯಶವಂತಪೂರಕ್ಕೆ ಹೊರಡುವ ರೈಲನ್ನು ಪ್ರತಿ ದಿನ ಓಡಿಸುವಂತೆ, ರೈಲ್ವೆ ಖಾಸಗೀಕರಣ ನಿಲ್ಲಿಸುವಂತೆ ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿ. ನಾಗಮ್ಮಾಳ್, ರಾಮಣ್ಣ ಎಸ್. ಇಬ್ರಾಹಿಂಪೂರ್, ಸ್ನೇಹಾ ಕಟ್ಟಿಮನಿ, ಅಶ್ವಿನಿ, ಶರಣು ಹೇರೂರ್ ಮುಂತಾದವರು ಪಾಲ್ಗೊಂಡಿದ್ದರು.