ಅತಿಥಿ ಉಪನ್ಯಾಸಕರ ಜೊತೆ ಸಂಧಾನ ಸಭೆ ವಿಫಲ

KannadaprabhaNewsNetwork | Updated : Dec 30 2023, 01:16 AM IST

ಸಾರಾಂಶ

ರಾಜ್ಯದಲ್ಲಿರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದವರಿಗೆ ನಿರಾಶೆಯಾಗಿದೆ. ರಾಜ್ಯ ಸರ್ಕಾರ ಅವರನ್ನು ಖಾಯಂ ಮಾಡದೆ ಕೇವಲ 5 ಸಾವಿರ ರು. ಸಂಬಳ ಹೆಚ್ಚು ಮಾಡುವುದಾಗಿ ಒಪ್ಪಿದೆ.

ಸರ್ಕಾರದ 4 ಕೊಡುಗೆ ಒಪ್ಪದ ಉಪನ್ಯಾಸಕರು1. 2024ರ ಜನವರಿ ತಿಂಗಳಿಂದಲೇ 5000 ರು. ವೇತನ ಹೆಚ್ಚಳ

2. ವಾರ್ಷಿಕ 5 ಲಕ್ಷ ರು. ಆರೋಗ್ಯ ವಿಮೆ

3. ಕನಿಷ್ಠ 10 ವರ್ಷ ಸೇವೆ ಮಾಡಿರುವವರಿಗೆ ವರ್ಷಕ್ಕೆ 50 ಸಾವಿರ ರು.ನಂತೆ 5 ಲಕ್ಷ ರು. ಫಂಡ್‌

4. ನಿತ್ಯ 15 ಗಂಟೆ ಕಾರ್ಯಭಾರ ಇರುವವರಿಗೆ ಮಾಸಿಕ ಒಂದು ರಜೆ

ಮುಷ್ಕರ ನಿಲ್ಲಿಸದಿದ್ದರೆ ಕೆಲಸದಿಂದಲೇ ವಜಾ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ‘ಸೇವೆ ಕಾಯಂ’ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ರಾಜ್ಯ ಸರ್ಕಾರ, ಇದರ ಬದಲಿಗೆ ಜನವರಿಯಿಂದ 5 ಸಾವಿರ ರು. ವೇತನ ಹೆಚ್ಚಳ ಸೇರಿದಂತೆ ಉಪನ್ಯಾಸಕರ ಪರವಾಗಿ 4 ನಿರ್ಧಾರಗಳನ್ನು ಕೈಗೊಂಡಿದೆ. ಜತೆಗೆ, ಮುಷ್ಕರ ಕೈಬಿಟ್ಟು ತಕ್ಷಣ ಕರ್ತವ್ಯಕ್ಕೆ ಹಾಜರಾಗದಿದ್ದರೆ ತಮ್ಮ ಸ್ಥಾನಗಳಿಗೆ ಹೊಸಬರನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ ಎಂದು ಖಡಕ್‌ ಎಚ್ಚರಿಕೆಯನ್ನೂ ನೀಡಿದೆ.

ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಅತಿಥಿ ಉಪನ್ಯಾಸಕರು ಸಡ್ಡು ಹೊಡೆದಿದ್ದು, ವೇತನ ಹೆಚ್ಚಳ ಸೇರಿ ಬೇರೆ ಯಾವ ಸೌಲಭ್ಯವೂ ಬೇಡ. ಸೇವೆ ಕಾಯಂ ಒಂದೇ ನಮ್ಮ ಬೇಡಿಕೆ. ಅದು ಈಡೇರುವವರೆಗೆ ಹೋರಾಟದಿಂದ ಹಿಂದೆಸರಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಜತೆಗೆ, ಇಲ್ಲ. ಜ.1ರಂದು ತುಮಕೂರಿನಿಂದ ಬೆಂಗಳೂರಿಗೆ ಬೃಹತ್‌ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ.

ತನ್ಮೂಲಕ ಅತಿಥಿ ಉಪನ್ಯಾಸಕರು ಹಾಗೂ ಸರ್ಕಾರದ ನಡುವಿನ ಹಗ್ಗ-ಜಗ್ಗಾಟ ಮುಂದುವರೆದಂತಾಗಿದ್ದು, ಕಳೆದ ಒಂದು ತಿಂಗಳಿನಿಂದ ಪದವಿ ಕಾಲೇಜಗಳ ಪಠ್ಯ ಪ್ರವಚನ ಸ್ಥಗಿತ ಮತ್ತಷ್ಟು ಮುಂದುವರೆಯುವ ಸಾಧ್ಯತೆಯಿದೆ.

ಸಂಧಾನ ಸಭೆ ವಿಫಲ:

ಸೇವೆ ಕಾಯಂ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ 37 ದಿನಗಳಿಂದ ತರಗತಿ ಬಹಿಷ್ಕರಿಸಿ ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು ವಿಕಾಸಸೌಧದಲ್ಲಿ ಶುಕ್ರವಾರ ಸಭೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ, ಸೇವೆ ಕಾಯಂ ಬಿಟ್ಟು ಸರ್ಕಾರದ ಯಾವ ಸಂಧಾನಕ್ಕೂ ಅತಿಥಿ ಉಪನ್ಯಾಸಕರು ಒಪ್ಪಲಿಲ್ಲ. ಇದರಿಂದ ಸಭೆ ವಿಫಲವಾಗಿವೆ.

ಸರ್ಕಾರದ 4 ಆಫರ್‌:

ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವರು, ಅತಿಥಿ ಉಪನ್ಯಾಸಕರ ಸೇವೆ ಕಾಯಂ ಮಾಡಲು ಕಾನೂನು ವ್ಯಾಪ್ತಿಯಲ್ಲಿ ಅವಕಾಶವಿಲ್ಲ. ಹಾಗಾಗಿ ಅವರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಬದಲಿಗೆ ಹೊಸವರ್ಷ 2024ರ ಜನವರಿ ತಿಂಗಳಿಂದಲೇ ಅವರಿಗೆ 5000 ರು. ವೇತನ ಹೆಚ್ಚಳ, ವಾರ್ಷಿಕ 5 ಲಕ್ಷ ರು. ಆರೋಗ್ಯ ವಿಮೆ, 60 ವರ್ಷ ಮೀರಿದವರು ಬರಿಗೈಯಲ್ಲಿ ಹೋಗಬಾರದೆಂದು ಕನಿಷ್ಠ 10 ವರ್ಷ ಸೇವೆ ಮಾಡಿರುವವರಿಗೆ ವರ್ಷಕ್ಕೆ 50 ಸಾವಿರ ರು.ನಂತೆ 5 ಲಕ್ಷ ರು. ಇಡುಗಂಟು ನೀಡುವುದು, ನಿತ್ಯ 15 ಗಂಟೆ ಕಾರ್ಯಭಾರ ಇರುವವರಿಗೆ ಮಾಸಿಕ ಒಂದು ರಜೆ ನೀಡಲು ಸರ್ಕಾರ ತೀರ್ಮಾನಿಸಿದೆ.

ಇದನ್ನ ಒಪ್ಪಿ ಎಲ್ಲ ಅತಿಥಿ ಉಪನ್ಯಾಸಕರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ತಪ್ಪಿದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಮ್ಮ ಸ್ಥಾನಗಳಿಗೆ ಅನಿವಾರ್ಯವಾಗಿ ಹೊಸಬರನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಲೇಜುಗಳಲ್ಲಿ ಪ್ರಾಂಶುಪಾಲರು ಹಾಗೂ ಇತರೆ ಕಾಯಂ ಪ್ರಾಧ್ಯಾಪಕರು ಅತಿಥಿ ಉಪನ್ಯಾಸಕರನ್ನು ಅಗೌರವದಿಂದ ನಡೆಸಿಕೊಳ್ಳುತ್ತಾರೆ ಎಂಬ ಬಗ್ಗೆ ದೂರುಗಳಿವೆ. ಈ ಸಂಬಂಧ ಈಗಾಗಲೇ ಬೆಳಗಾವಿ ಅಧಿವೇಶನದ ವೇಳೆಯಲ್ಲೇ ಅತಿಥಿ ಉಪನ್ಯಾಸಕರನ್ನೂ ಸಮಾನಗೌರವದಿಂದ ನೋಡಿಕೊಳ್ಳಬೇಕೆಂದು, ಅವರಿಗೆ ಇರುವ ನೈಜ ಕಾರ್ಯಭಾರ ಮುಚ್ಚಿಡದೆ ನೀಡಬೇಕೆಂದು ಎಲ್ಲ ಕಾಲೇಜುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಪ್ರತೀ ವರ್ಷ ಕೌನ್ಸೆಲಿಂಗ್‌ ಮೂಲಕ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಯುತ್ತದೆ. ಕೌನ್ಸೆಲಿಂಗ್‌ ಕೈಬಿಡಬೇಕು ಎಂಬ ಬೇಡಿಕೆ ಇದೆ. ಆದರೆ, ಇದು ಕೂಡ ಸಾಧ್ಯವಿಲ್ಲ. ಆದರೆ, ಕೌನ್ಸೆಲಿಂಗ್‌ ವೇಳೆ ಅವರ ಸೇವಾ ಅವಧಿಗೆ ಅನುಗುಣವಾಗಿ ವರ್ಷಕ್ಕೆ 3 ಕೃಪಾಂಕ ಸಿಗುತ್ತದೆ. ಉದಾಹಣೆಗೆ 16 ವರ್ಷ ಸೇವೆ ಮಾಡಿದ್ದರೆ 48 ಅಂಕ ಬರುತ್ತದೆ. ಇದರಿಂದ ಕೌನ್ಸೆಲಿಂಗ್‌ನಲ್ಲಿ ಇತರೆ ಅಭ್ಯರ್ಥಿಗಳಿಗಿಂತ ಸೇವೆಯಲ್ಲಿರುವವರ ಆಯ್ಕೆಗೆ ಆದ್ಯತೆ ದೊರೆಯುತ್ತದೆ. ಅವರ ದಾಖಲಾತಿಗೆ ಸೂಕ್ತ ಗುರುತಿನ ಚೀಟಿ ನೀಡಲು ಪ್ರಾಂಶುಪಾಲರುಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಸುಧಾಕರ್‌ ತಿಳಿಸಿದರು. ಇವತ್ತಿನ ಎಲ್ಲ ನಿರ್ಧಾರಗಳು ಕೇವಲ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಅತಿಥಿ ಉಪನ್ಯಾಸಕರಿಗೆ ಮಾತ್ರವಲ್ಲ, ತಾಂತ್ರಿಕ ಶಿಕ್ಷಣ ಇಲಾಖೆಯಡಿ ಬರುವ ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೂ ಅನ್ವಯಿಸಲಿವೆ ಎಂದು ಅವರು ಸ್ಪಷ್ಟಪಡಿಸಿದರು.

ಅತಿಥಿ ಉಪನ್ಯಾಸಕರ ಸಡ್ಡು:ಸರ್ಕಾರದ ನಿರ್ಧಾರಕ್ಕೆ ಅತಿಥಿ ಉಪನ್ಯಾಸಕರು ಸಡ್ಡು ಹೊಡೆದಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಕಲ್ಮನಿ, ಸರ್ಕಾರದ ನಿರ್ಧಾರಕ್ಕೆ ನಾವ್ಯಾರೂ ಒಪ್ಪಿಲ್ಲ. ಶುಭ ಸುದ್ದಿ ಕೊಡುತ್ತೇನೆಂದು ಹೇಳಿ ಭರವಸೆ ಹುಸಿಗೊಳಿಸಿದ್ದಾರೆ. ಕನಿಷ್ಠ ವರ್ಷಕ್ಕೆ 12 ತಿಂಗಳಂತೆ 60 ವರ್ಷ ಸೇವೆ ಮಾಡಬಹುದು ಎಂದಾದರೂ ಹೇಳಿದ್ದರೆ ಒಪ್ಪಬಹುದಿತ್ತು. ಆದರೆ, ಸರ್ಕಾರ ಹೇಳಿರುವ ಅಂಶಳಿಂದ ಉಪನ್ಯಾಸಕರಿಗೆ ಯಾವುದೇ ಉಪಯೋಗವಿಲ್ಲ. ಕಣ್ಣೊರೆಸುವ ತಂತ್ರ ನಡೆಸಿದೆ. ಸಚಿವರು ತಪ್ಪು ಸಂದೇಶ ನೀಡಿದ್ದಾರೆ. ನಮ್ಮ ಸಂಘಟನೆಗಳು ಬೇರೆ ಬೇರೆ ಇರಬಹುದು. ಎಲ್ಲರ ಬೇಡಿಕೆ ಒಂದೇ ಸೇವಾ ಭದ್ರತೆ. ಅದು ಈಡೇರುವವರೆಗೆ ನಮ್ಮ ಹೋರಾಟ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು.ಈ ವೇಳೆ ಸಂಘದ ಪದಾಧಿಕಾರಿ ಶಿವಪ್ಪ, ಪ್ರಸನ್ನ, ನರೇಂದ್ರ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜ.1ರಿಂದ ಪಾದಯಾತ್ರೆ

ನಮಗೆ 1 ರು. ವೇತನ ಹೆಚ್ಚಳವೂ ಬೇಡ, ನಾವು ಕೇಳುತ್ತಿರುವುದು ಸೇವೆ ಕಾಯಮಾತಿ ಮಾತ್ರ. ಸರ್ಕಾರ ಈ ಬೇಡಿಕೆ ಈಡೇರಿಸದ ಹೊರತು ನಾವು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಅತಿಥಿ ಉಪನ್ಯಾಸಕರು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ, ಸರ್ಕಾರ ಏನು ಬೇಕಾದರೂ ಮಾಡಿಕೊಳ್ಳಲಿ ಜ.1ರಂದು ತುಮಕೂರಿನಿಂದ ಬೆಂಗಳೂರಿಗೆ ಬೃಹತ್‌ ಪಾದಯಾತ್ರೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

Share this article