ನಗರದಲ್ಲಿ ಸತ್ಯಾಗ್ರಹ ಪಾರ್ಕ್ ಸ್ಥಾಪನೆಗೆ ಮನವಿ

KannadaprabhaNewsNetwork | Published : Apr 11, 2025 12:32 AM

ಸಾರಾಂಶ

ಸಾರ್ವಜನಿಕರು ಪ್ರತಿಭಟನೆ, ಧರಣಿ, ಸತ್ಯಾಗ್ರಹ ಮಾಡಲು ಅನುಕೂಲ ಆಗುವಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ ಮಾದರಿಯಲ್ಲಿ ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತ್ಯೇಕ ಸ್ಥಳ ಒದಗಿಸಬೇಕು ಎಂದು ಜಿಲ್ಲಾ ಮಹಿಳಾ ಸಂರಕ್ಷಣಾ ವೇದಿಕೆ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಸಾರ್ವಜನಿಕರು ಪ್ರತಿಭಟನೆ, ಧರಣಿ, ಸತ್ಯಾಗ್ರಹ ಮಾಡಲು ಅನುಕೂಲ ಆಗುವಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ ಮಾದರಿಯಲ್ಲಿ ತುಮಕೂರಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತ್ಯೇಕ ಸ್ಥಳ ಒದಗಿಸಬೇಕು ಎಂದು ಜಿಲ್ಲಾ ಮಹಿಳಾ ಸಂರಕ್ಷಣಾ ವೇದಿಕೆ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.ವೇದಿಕೆ ಅಧ್ಯಕ್ಷೆ ತಾಹೆರಾ ಕುಲ್ಸುಮ್ ನೇತೃತ್ವದಲ್ಲಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಶುಭಕಲ್ಯಾಣ್‌ ಅವರಿಗೆ ಮನವಿ ಪತ್ರ ಸಲ್ಲಿಸಿ ನಗರದಲ್ಲೂ ಫ್ರೀಡಂ ಪಾರ್ಕ್ ಮಾದರಿಯಲ್ಲಿ ಜಾಗ ಗುರುತಿಸಬೇಕು ಎಂದು ಕೋರಿದರು.ಅನ್ಯಾಯವಾದಾಗ, ಹಕ್ಕು, ಸೌಲಭ್ಯಗಳನ್ನು ಕೇಳಲು ಸಾರ್ವಜನಿಕರು ಪ್ರತಿಭಟನೆ ಮಾಡಬೇಕಾಗುತ್ತದೆ. ಅಹಿಂಸಾ ಮಾದರಿಯಲ್ಲಿ ಹೋರಾಟ ಮಾಡಬೇಕು ಎಂದು ಮಹಾತ್ಮಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್‌ ಅವರು ನಮಗೆಲ್ಲಾ ಮಾರ್ಗದರ್ಶನ ನೀಡಿ ಹೋರಾಟ ಮನೋಭಾವ ಮೂಡಿಸಿದ್ದಾರೆ. ಪ್ರತಿ ಹೋರಾಟದ ಸಂದರ್ಭದಲ್ಲಿ ಸಂಘಟಕರು ಗಾಂಧೀಜಿ, ಅಂಬೇಡ್ಕರ್ ಭಾವಚಿತ್ರ ಇಟ್ಟುಕೊಂಡು ಪ್ರತಿಭಟನೆ ಮಾಡುವ ಸಂಪ್ರದಾಯವಿದೆ ಎಂದು ಹೇಳಿದ್ದಾರೆ. ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಮೀಪದಲ್ಲಿ ಫ್ರೀಡಂ ಪಾರ್ಕ್ ರೀತಿಯ ಸತ್ಯಾಗ್ರಹದ ಪಾರ್ಕ್ ನಿರ್ಮಾಣ ಮಾಡಿ, ಅಲ್ಲಿ ಮಹಾತ್ಮಗಾಂಧೀಜಿ, ಡಾ.ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ಮಾಡಿ ಹೋರಾಟಗಾರರಿಗೆ ಅನುಕೂಲ ಮಾಡಿಕೊಡಬೇಕು. ನಗರದಲ್ಲಿ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳ ಪ್ರತಿಭಟನೆಗಳು ಆಗಿಂದಾಗ್ಯೆ ನಡೆಯುತ್ತಲೇ ಇವೆ. ಇಂತಹ ಪ್ರತಿಭಟನೆ ಮಾಡಲು ವ್ಯವಸ್ಥಿತವಾದ, ನಿರ್ದಿಷ್ಟ ಸ್ಥಳವಿಲ್ಲ. ಈ ಕಾರಣದಿಂದ ಹೋರಾಟ ಮಾಡಲು ಅನುಕೂಲವಾಗುವ ರೀತಿಯಲ್ಲಿ ಸ್ಥಳಾವಕಾಶ ಕಲ್ಪಿಸಬೇಕು ಎಂದು ತಾಹೆರಾಕುಲ್ಸುಮ್ ಮನವಿ ಮಾಡಿದ್ದಾರೆ.ವೇದಿಕೆಯ ರಾಧಮ್ಮ, ಫಸೀಹಾ ಬಾನು, ಅಬಿದಾ, ಲಲಿತಾಬಾಯಿ ಮೊದಲಾದವರು ಭಾಗವಹಿಸಿದ್ದರು.ಇದಕ್ಕೂ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕ ಜಿ.ಬಿ.ಜ್ಯೋತಿಗಣೇಶ್ ಮತ್ತಿತರರಿಗೆ ಈ ಸಂಬಂಧ ಮನವಿ ಮಾಡಿಕೊಂಡಿರುವುದಾಗಿ ತಾಹೆರಾಕುಲ್ಸುಮ್ ಹೇಳಿದರು.

Share this article