ತಳಕಲ್ಲು ಕೆರೆಗೆ ನೀರು ತುಂಬಿಸಲು ಮನವಿ

KannadaprabhaNewsNetwork |  
Published : Jun 14, 2025, 01:50 AM IST
ಹೂವಿನಹಡಗಲಿ ತಾಲೂಕಿನ ಇಟಿಗಿ ಗ್ರಾಮದಲ್ಲಿ ತಳಕಲ್ಲು ಹೋರಾಟ ಸಮಿತಿ ಸದಸ್ಯರು ಶಾಸಕ ಕೃಷ್ಣನಾಯ್ಕ ಇವರಿಗೆ ತಳಕಲ್ಲು ಕೆರೆಗೆ ನೀರು ತುಂಬಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ಹೂವಿನಹಡಗಲಿ ತಾಲೂಕಿನ ಇಟಿಗಿ ಹೋಬಳಿ ವ್ಯಾಪ್ತಿಯ ತಳಕಲ್ಲು ಗ್ರಾಮದ ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಬೇಕು ಎಂದು ತಳಕಲ್ಲು ಕೆರೆ ಹೋರಾಟ ಸಮಿತಿ ಪದಾಧಿಕಾರಿಗಳು ಇಟಿಗಿ ಗ್ರಾಮದಲ್ಲಿ ಶಾಸಕ ಕೃಷ್ಣ ನಾಯ್ಕ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಹೂವಿನಹಡಗಲಿ: ತಾಲೂಕಿನ ಇಟಿಗಿ ಹೋಬಳಿ ವ್ಯಾಪ್ತಿಯ ತಳಕಲ್ಲು ಗ್ರಾಮದ ಕೆರೆಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸಬೇಕು ಎಂದು ತಳಕಲ್ಲು ಕೆರೆ ಹೋರಾಟ ಸಮಿತಿ ಪದಾಧಿಕಾರಿಗಳು ಇಟಿಗಿ ಗ್ರಾಮದಲ್ಲಿ ಶಾಸಕ ಕೃಷ್ಣ ನಾಯ್ಕ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕೆರೆ ಹೋರಾಟ ಸಮಿತಿ ಅಧ್ಯಕ್ಷೆ ಎಂ.ಪಿ. ಸುಮಾ, ತಾಲೂಕಿನ ಮಾಗಳ ಬಳಿ ನಿರ್ಮಾಣವಾಗಿರುವ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ವ್ಯಾಪ್ತಿಗೆ ಒಳಪಟ್ಟಿದೆ. ನೀರು ಹರಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿ, ರಾಜ್ಯ ಹೆದ್ದಾರಿಯಲ್ಲಿ ಹೋರಾಟ ಮಾಡಲಾಗಿತ್ತು. ಕೆಲವು ತಾಂತ್ರಿಕ ದೋಷಗಳಿವೆ, ಇವುಗಳನ್ನು ಸರಿಪಡಿಸಿ ನೀರು ಹರಿಸುವಂತೆ, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಸಮಸ್ಯೆ ಹೇಳಿಕೊಂಡಾಗ, ₹27 ಕೋಟಿಗಳ ಡಿಪಿಆರ್‌ ಸಿದ್ಧಪಡಿಸಿದ್ದರು. ಇದರಿಂದ ಎಕ್ಸ್‌ಪ್ರೆಸ್‌ ಲೈನ್‌ ಸಿದ್ಧವಾಗಿದೆ. ಆದರೆ ಪದೇ ಪದೇ ವಿದ್ಯುತ್‌ ಕೈ ಕೊಡುವ ಕಾರಣ ಕಳೆದ ವರ್ಷ ಕೆರೆ ತುಂಬಿಸಲು ಸಾಧ್ಯವಾಗಿಲ್ಲ. ಈ ಬಾರಿಯಾದರೂ ನೀರು ಹರಿಸುವಂತೆ ಶಾಸಕ ಕೃಷ್ಣನಾಯ್ಕ ಅವರಿಗೆ ಮನವಿ ಮಾಡಿದರು.

ಈ ತಳಕಲ್ಲು ಕೆರೆಗೆ ನೀರಿ ಹರಿಸುವುದರಿಂದ ಸುತ್ತ ಹತ್ತಾರು ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸುತ್ತದೆ. ಜಾನುವಾರುಗಳ ನೀರಿನ ದಾಹ ಇಂಗಿಸುತ್ತದೆ. ಆದರಿಂದ ಈ ಕೂಡಲೇ ಆಗಿರುವ ಸಮಸ್ಯೆಯನ್ನು ಬಗೆಹರಿಸಿ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಕೃಷ್ಣನಾಯ್ಕ, ಈ ಭಾಗ ನೀರಾವರಿ ಯೋಜನೆಗಳಿಂದ ವಂಚಿತವಾಗಿದೆ. ಈ ಕೆರೆಗೆ ನೀರು ಹರಿಸುವುದರಿಂದ ರೈತರಿಗೆ, ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಬಗೆ ಹರಿಯುತ್ತದೆ. ಈ ಸರ್ಕಾರದಲ್ಲಿ ಅನುದಾನ ಕೊರತೆ ಕಾಡುತ್ತಿದೆ. ತಾವು ವಿರೋಧ ಪಕ್ಷದ ಶಾಸಕರಾಗಿದ್ದು, ಅನುದಾನ ನೀಡುತ್ತಿಲ್ಲ. ಆದರೂ ಹೋರಾಟ ಮಾಡಿ ಈ ಬಾರಿ ಕೆರೆಗೆ ನೀರು ಹರಿಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ರಾಮನಗೌಡ, ಕೆ.ಪಿ. ಚಂದ್ರಪ್ಪ, ತಳಕಲ್ಲು ಚಂದ್ರಪ್ಪ ಸೇರಿದಂತೆ ಇತರರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ