ಕನ್ನಡಪ್ರಭ ವಾರ್ತೆ ಶಿರಸಿ
ಪ್ರಾಸ್ತಾವಿಕವಾಗಿ ಮಾತನಾಡಿದ ಟಿ.ಎಂ.ಎಸ್. ನಿರ್ದೇಶಕ ಎಂ.ಪಿ. ಹೆಗಡೆ, ನಮ್ಮ ಜಿಲ್ಲೆಯ ಬೆಳೆಗಾರರ ಕೌಟುಂಬಿಕ ಹಾಗೂ ಆರ್ಥಿಕ ಸ್ಥಿತಿ ಅಡಕೆಯ ಬೆಳೆಯ ಮೇಲೆ ಅವಲಂಬಿತವಾಗಿದೆ. ಅಡಕೆ ಬೆಳೆಯನ್ನು ನಂಬಿ ಕೇವಲ ಅಡಕೆ ಬೆಳೆಗಾರರು ಮಾತ್ರ ಬದುಕನ್ನು ಕಟ್ಟಿಕೊಂಡಿಲ್ಲ, ಬದಲಾಗಿ ಈ ಬೆಳೆಯನ್ನು ಸಂಸ್ಕರಿಸುವ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಹಾಗೂ ಈ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವ ಅದೆಷ್ಟೋ ಲಕ್ಷ ಕೃಷಿ ಕೂಲಿಕಾರರ ಕುಟುಂಬ ಈ ಬೆಳೆಯ ಮೇಲೆ ಅವಲಂಬಿತವಾಗಿದೆ. ಜಿಲ್ಲೆಯ ಆರ್ಥಿಕ ಹಾಗೂ ಸಹಕಾರ ವ್ಯವಸ್ಥೆ ಗಟ್ಟಿಗೊಳ್ಳಲು ಈ ಬೆಳೆ ಮೂಲಾಧಾರವಾಗಿದೆ. ಹೀಗಾಗಿ ಅಡಕೆ ಮಾರಾಟದಲ್ಲಿನ ಸಮಸ್ಯೆಗಳ ನಿವಾರಣೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಟಿ.ಎಸ್.ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ನಮ್ಮಲ್ಲಿನ ಅಡಕೆಯ ಗುಣಮಟ್ಟ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅಡಕೆ ಸಂಸ್ಕರಣೆ ಮಾಡುವಲ್ಲಿ ನಾವು ಸರಿಯಾದ ಮಾರ್ಗ ಅನುಸರಿಸಬೇಕು. ಹಸಿ ಅಡಕೆ ಖರೀದಿ ಮಾಡುತ್ತಿರುವುದು ತಪ್ಪು ಎಂದು ಭಾಸವಾಗುತ್ತಿದೆ. ಏಕೆಂದರೆ ಅಡಕೆಯನ್ನು ಖರೀದಿಸಿದವರು ಯಾವ ರೀತಿ ಸಂಕ್ಕರಣೆ ಮಾಡುತ್ತಿದ್ದಾರೆ ಎನ್ನುವುದು ನಮಗೆ ಗೊತ್ತಾಗುತ್ತಿಲ್ಲ. ನಮ್ಮ ಅಡಕೆಯನ್ನು ಹಿಡಿದಿರುವುದು ತಪ್ಪು ನಿಜ. ಆದರೆ ಅಡಕೆಯನ್ನು ಯಾಕೆ ಹಿಡಿದಿದ್ದಾರೆ ಎನ್ನುವುದನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕು. ಇದೀಗ ನಮ್ಮ ಅಡಕೆಯ ಗುಣಮಟ್ಟದ ಬಗ್ಗೆ ಮಾನದಂಡಗಳ ಅನುಸಾರ ಪರೀಕ್ಷೆ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಎಫ್.ಎಸ್.ಎಸ್.ಐ ಮಾನದಂಡದ ಪ್ರಕಾರ ಅಡಕೆಯನ್ನು ಹಿಡಿಯಲಾಗುತ್ತಿದೆ. ಇದು ಬೆಳೆಗಾರರಿಗೆ ಸಮಸ್ಯೆ ತಂದೊಡ್ಡಿದೆ. ಮಹಾರಾಷ್ಟ್ರದಲ್ಲಿ ಲಾರಿಗಳನ್ನು ತಡೆದ ಮೇಲೆ ನಮ್ಮ ತಲೆಬಿಸಿ ಮತ್ತಷ್ಟು ಜಾಸ್ತಿಯಾಗಿದೆ. ಈಗಾಗಲೇ ಅಡಕೆ ಮಹಾಮಂಡಲದಿಂದ ನವದೆಹಲಿಯಲ್ಲಿ 2 ಸಭೆ ನಡೆಸಲಾಗಿದೆ. ನಮ್ಮ ಲಾರಿಗಳನ್ನು ಹಿಡಿಯದಂತೆ ಮಾಡಿದ ಮನವಿಗೆ ಸ್ಪಂದಿಸಿ ಅದನ್ನು ಮುಕ್ತವಾಗಿಸಿದ್ದಾರೆ ಎಂದರು.ಎಪಿಎಂಸಿ ಆಡಳಿತಾಧಿಕಾರಿ, ತಹಸೀಲ್ದಾರ್ ಪಟ್ಟರಾಜ ಗೌಡ ಮನವಿ ಸ್ವೀಕರಿಸಿ, ಮನವಿಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಜಿಲ್ಲಾಧಿಕಾರಿಗೆ ಕಳುಹಿಸುತ್ತೇವೆ. ಬಣ್ಣ ಹಾಕುವ ವಿಷಯವನ್ನು ನಾವು ಇದುವರೆಗೂ ಕೇಳಿರಲಿಲ್ಲ. ಇಂತಹ ಕೆಲಸವನ್ನು ಕೂಡ ಮಾಡುವವರಿದ್ದಾರೆ ಎನ್ನುವುದು ದುರದೃಷ್ಟಕರ. ಆದ್ದರಿಂದ ಇದರ ಬಗ್ಗೆ ಕೂಡಲೇ ಕ್ರಮವಾಗಬೇಕಿದೆ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್, ಶಿರಸಿ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿ. ತೋಟಗಾರ್ಸ್ ಸೇಲ್ ಸೊಸೈಟಿ ಲಿ, ಹಾಗೂ ತೋಟಗಾರ್ಸ್ ರೂರಲ್ ಕೋ-ಆಪ್‌ರೇಟಿವ್ ಅಗ್ರಿಕಲ್ಪರಲ್ ಮಲ್ಟಿಪರ್ಪಸ್ ಸೊಸೈಟಿ ಲಿ. ಹಾಗೂ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಮನವಿ ನೀಡಲಾಯಿತು.