ರಾಣಿಬೆನ್ನೂರಿನ ಮಾರುತಿ ನಗರದ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಮನವಿ

KannadaprabhaNewsNetwork | Published : Jul 2, 2025 12:19 AM
ರಾಣಿಬೆನ್ನೂರಿನ ಮಾರುತಿ ನಗರದ ನಿವಾಸಿಗಳು ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಇ- ಸ್ವತ್ತು ಬಂದಾಗಿನಿಂದ 312 ಸರ್ವೆ ನಂಬರಿನ ಜನರು ಇ- ಸ್ವತ್ತಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದರೂ ಅದನ್ನು ಪೂರೈಸಿಲ್ಲ.

ರಾಣಿಬೆನ್ನೂರು: ಇಲ್ಲಿನ ಮಾರುತಿ ನಗರದ ಸರ್ಕಾರಿ ಜಾಗದಲ್ಲಿ ಸುಮಾರು ವರ್ಷಗಳಿಂದ ವಾಸವಿರುವ ಜನತೆಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಮಂಗಳವಾರ ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ ಅವರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಮಾರುತಿ ನಗರದ ರಿ.ಸ.ನಂ. 312 ಸರ್ವೆ ನಂಬರಿನ ಜಾಗದಲ್ಲಿ ಸುಮಾರು ವರ್ಷಗಳಿಂದ ಹೆಚ್ಚಾಗಿ ದಿನಗೂಲಿ ಕಾರ್ಮಿಕರೇ ವಾಸವಾಗಿದ್ದಾರೆ. ಅಲ್ಲಿರುವ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಳ್ಳಲು ಹಾಗೂ ಮನೆತನದ ಅಡಚಣೆಗಾಗಿ ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಳ್ಳಲು ಇ- ಸ್ವತ್ತು ಅತಿ ಅವಶ್ಯಕವಾಗಿದೆ.

ಇ- ಸ್ವತ್ತು ಬಂದಾಗಿನಿಂದ 312 ಸರ್ವೆ ನಂಬರಿನ ಜನರು ಇ- ಸ್ವತ್ತಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದರೂ ಅದನ್ನು ಪೂರೈಸಿಲ್ಲ. ಇ- ಸ್ವತ್ತಿಗಾಗಿ ಬಂದಂತಹ ಜನತೆಗೆ ಈ ಹಿಂದೆ ಇದ್ದ ಅಧಿಕಾರಿಗಳು ಇಲ್ಲಸಲ್ಲದ ಉತ್ತರ ನೀಡುತ್ತಾ ಬಂದಿದ್ದಾರೆ. ಆದ್ದರಿಂದ ಇ- ಸ್ವತ್ತಿಗಾಗಿ ಅಲೆದಾಡಿ, ರೋಸಿ ಹೋಗಿರುವ ಜನತೆಗೆ ಇ- ಸ್ವತ್ತು ಹಾಗೂ ಸುಮಾರು 25- 30 ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ವಾಸವಿರುವ ಬಡಜನತೆಗೆ ಹಕ್ಕುಪತ್ರ(ಆ ಜಾಗವನ್ನು ಅವರ ಹೆಸರಿನಲ್ಲಿ ಮಾಡಿಕೊಡಬೇಕು) ನೀಡಬೇಕು. 15 ದಿನದೊಳಗಾಗಿ ಇ- ಸ್ವತ್ತು ಒದಗಿಸಬೇಕು ಮತ್ತು ಈಗಾಗಲೇ ಸರ್ಕಾರದ ಆದೇಶದ ಪ್ರಕಾರ ‘ಬ’ ಖಾತೆ ಕೊಡುತ್ತಿದ್ದು, ಇದರಿಂದ ಯಾವುದೇ ರೀತಿಯ ಸಾಲ ಸೌಲಭ್ಯಗಳು ಇಲ್ಲದೆ ವಂಚಿತರಾಗಿದ್ದಾರೆ. ಕೂಡಲೇ ‘ಬ’ ಖಾತೆಗೆ ಸಂಬಂಧಪಟ್ಟ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಗರಸಭೆ ಕಛೇರಿಯ ಮುಂಭಾಗದಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ರಾಜು ಅಂಗಡಿ, ಮಂಜುನಾಥ ಗುಡ್ಡಣ್ಣನವರ, ಮಂಜುನಾಥ ಸಂಬೋಜಿ, ಶೋಭಾ ಇಚ್ಚಂಗಿ, ಬಿ.ಬಿ. ಆಸ್ಮಾ, ಕುಮಾರ ಜಂಬಗಿ, ಬಷಿರ್ ಸೈಯ್ಯದ, ಕರಬಸಪ್ಪ ಎನ್.ಕೆ., ಯಲ್ಲಪ್ಪ ಚಿಕ್ಕಣ್ಣನವರ, ದ್ಯಾಮವ್ವ ನೇಕಾರ, ಮಾಲತೇಶ ಮಡಿವಾಳರ, ಶಾಂತಾ ಬಸಪ್ಪನವರ, ಮಂಜುನಾಥ ಐರಣಿ ಮತ್ತಿತರರಿದ್ದರು.

PREV