ಅರಸೀಕೆರೆ: ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಕಾರ್ಯದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ಸಿಬ್ಬಂದಿಯ ಹಲವು ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಗೃಹರಕ್ಷಕರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರಿಗೆ ಮನವಿ ಸಲ್ಲಿಸಿದರು.ಗೃಹರಕ್ಷಾ ದಳದ ಜಿಲ್ಲಾ ಕಮಾಂಡರ್ ಕೆ.ಪಿ. ವಿರೂಪಾಕ್ಷ ನೇತೃತ್ವದಲ್ಲಿ ಸಚಿವರನ್ನು ಭೇಟಿ ಮಾಡಿದ ಗೃಹರಕ್ಷಕ ಹಾಗೂ ಗೃಹರಕ್ಷಕಿಯರ ನಿಯೋಗ, ಸೇವೆ ಸಲ್ಲಿಸುತ್ತಿದ್ದರೂ ಉದ್ಯೋಗದ ಭದ್ರತೆ ಹಾಗೂ ಕುಟುಂಬದ ಭವಿಷ್ಯದ ಕುರಿತು ಅನಿಶ್ಚಿತತೆ ಎದುರಿಸುತ್ತಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಪಿ. ವಿರೂಪಾಕ್ಷ, ಸಾರ್ವಜನಿಕರ ಸೇವೆಯನ್ನೇ ಧ್ಯೇಯವಾಗಿಸಿಕೊಂಡು ಗೃಹರಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಸೇವೆಗೆ ಸೂಕ್ತ ಮಾನ್ಯತೆ ಹಾಗೂ ಅಗತ್ಯ ಸೌಲಭ್ಯಗಳು ದೊರೆಯಬೇಕಾಗಿದೆ. ಸಿಬ್ಬಂದಿಯ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಮನವಿ ಸ್ವೀಕರಿಸಿದ ಸಚಿವ ಕೆ.ಎಂ. ಶಿವಲಿಂಗೇಗೌಡ, ಗೃಹರಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಿ, ಅವರ ಹಾಗೂ ಕುಟುಂಬದ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸಹಾಯಕ ಬೋಧಕರಾದ ಹಾಜಿರಾಖಾನಂ, ಎಸ್.ಜೆ. ಶರತ್, ತಾಲೂಕು ಘಟಕ ಅಧಿಕಾರಿ ಶಿವರಾಜ್, ಕಣಕಟ್ಟೆ ಘಟಕ ಅಧಿಕಾರಿ ಮಹಮ್ಮದ್ ಖಲಂದರ್, ಬಾಣಾವರ ಘಟಕ ಅಧಿಕಾರಿ ಕುಮಾರ್ ನಾಯ್ಕ, ಹಾರನಹಳ್ಳಿ ಘಟಕ ಅಧಿಕಾರಿ ದೇವರಾಜ್ ನಾಯ್ಕ, ಗಂಡಸಿ ಘಟಕ ಅಧಿಕಾರಿ ಕೆಂಪತಿಮ್ಮೇಗೌಡ, ದೊಡ್ಡಮೇಟಿಕುರ್ಕೆ ಘಟಕ ಅಧಿಕಾರಿ ರೇಣುಕಕುಮಾರ್, ಬೆಳಗುಂಬ ಘಟಕ ಅಧಿಕಾರಿ ವಿಶ್ವನಾಥ್, ಕೊಳಗುಂದ ಘಟಕ ಅಧಿಕಾರಿ ಹೇಮಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.