ಹಾನಗಲ್ಲ: ಬೆಳಗಾಲಪೇಟೆಯಲ್ಲಿ ಇರುವ ಶ್ರೀಗುರು ಕುಮಾರೇಶ್ವರ ಮಠದ ಆಸ್ತಿಯಲ್ಲಿ ಬೋಗಟದಾರ (ಬಳಕೆದಾರ) ಕಾಲಂನಲ್ಲಿ ಈಗಿರುವಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಇತರರ ಹೆಸರನ್ನು ಸೇರಿಸಬಾರದು ಎಂದು ಶ್ರೀಗುರು ಕುಮಾರೇಶ್ವರ ಜೀರ್ಣೋದ್ಧಾರ ಸಾರ್ವಜನಿಕ ಸೇವಾ ಟ್ರಸ್ಟ್ ಹಾಗೂ ಸಾರ್ವಜನಿಕರು ಪಿಡಿಒಗೆ ಬುಧವಾರ ಮನವಿ ಸಲ್ಲಿಸಿದರು. ಬೆಳಗಾಲಪೇಟೆಯಲ್ಲಿ 2 ಎಕರೆ 38 ಗುಂಟೆ ಇರುವ ಆಸ್ತಿಯನ್ನು ಹಾನಗಲ್ಲ ಲಿಂ. ಗುರು ಕುಮಾರ ಶಿವಯೋಗಿಗಳು ಗ್ರಾಮದಲ್ಲಿ ಮಠ ಕಟ್ಟುವ ಉದ್ದೇಶಕ್ಕಾಗಿ ಬಿನ್ ಶೇತ್ಕಿ ಮಾಡಿಸಿದ್ದರು. ಈಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಆಸ್ತಿಯನ್ನು ದುರುದ್ದೇಶ ಹಾಗೂ ಸ್ವಾರ್ಥಕ್ಕಾಗಿ ಬಳಸಲು ನಂತರದ ಉತ್ತರಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ದುರುಪಯೋಗ ಮಾಡಿಕೊಳ್ಳುವ ಹುನ್ನಾರ ನಡೆದಿದೆ ಎಂದು ವಿವರಿಸಿದ್ದಾರೆ. ಆ ಕಾರಣಕ್ಕಾಗಿ ಈ ಆಸ್ತಿಯು ಮಠ ಕಟ್ಟಲು ಕಾದಿರಿಸಬೇಕು. ಇಲ್ಲಿ ಬೇರೆಯವರ ಹೆಸರು ನೋಂದಾಯಿಸಕೂಡದು. ಅದಕ್ಕೆ ನಮ್ಮ ತಕರಾರಿದೆ ಎಂದು ಟ್ರಸ್ಟ್ ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿರುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಬೆಳಗಾಲಪೇಟೆ ಗ್ರಾಪಂ ಪಿಡಿಒ ಚಂದ್ರಕಾಂತ ಮಣ್ಣವಡ್ಡರ, ಈ ಆಸ್ತಿಯಲ್ಲಿ ಮೊದಲು ಬೋಗಟದಾರರು ಇದ್ದರು. ಅವರ ಹೆಸರನ್ನು ತೆಗೆಯಲು ಈಗಿರುವ ಶ್ರೀಗಳು 2022ರಲ್ಲಿ ಪತ್ರ ನೀಡಿದ್ದರು. ಆಗ ನಾವು ಕಾನೂನು ರೀತಿ ಬೋಗಟುದಾರರ ಹೆಸರುಗಳನ್ನು ತೆಗೆದೆವು. ಬಳಿಕ ಸ್ವಾಮೀಜಿಯವರು, ನಾನು ಪ್ರಮಾದದಿಂದ ಈ ಹಿಂದೆ ಬೋಗಟದಾರರ ಹೆಸರನ್ನು ತೆಗೆಯಲು ಪತ್ರ ನೀಡಿದ್ದೆ. ಈಗ ಒಬ್ಬರ ಹೆಸರನ್ನು ಮಾತ್ರ ಬೋಗಟುದಾರರ ಕಾಲಂನಲ್ಲಿ ನಮೂದಿಸಲು ಪತ್ರ ನೀಡಿದ್ದರು. ನಾವು ಯಥಾಸ್ಥಿತಿ ಮುಂದುವರಿಸಿದೆವು. ಕಾನೂನು ತಜ್ಞರ ಸಲಹೆ ಪಡೆದು, ಪಂಚಾಯಿತಿಯ ಸರ್ವ ಸದಸ್ಯರ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಕ್ರಮ ಜರುಗಿಸಲಾಗುವುದು ಎಂದರು.ಸಾರ್ವಜನಿಕರು ಬೋಗಟದಾರರ ಕಾಲಂನಲ್ಲಿ ಯಾರ ಹೆಸರನ್ನೂ ನಮೂದಿಸಕೂಡದು, ಮಠದ ಆಸ್ತಿ ಉಳಿಸಿ ಎಂದು 500ಕ್ಕೂ ಅಧಿಕ ಪತ್ರಗಳು ಬಂದಿವೆ ಎಂದರು.
ಪ್ರತಿಭಟನೆಯಲ್ಲಿ ಜಯಲಿಂಗಪ್ಪ ಹಳಿಕೊಪ್ಪದ, ಮನೇಶಗೌಡ ಮೆಳ್ಳಾಗಟ್ಟಿ, ಶಂಭುಲಿಂಗ ಕಮಡೊಳ್ಳಿ, ಪ್ರಶಾಂತ ಮುಚ್ಚಂಡಿ, ವೀರಣ್ಣ ಹುಗ್ಗಿ, ಶೇಶಣ್ಣ ಹೂಗಾರ, ಶಿವಣ್ಣ ಕುಂಬಾರ, ಶಂಭುಲಿಂಗ ಮಾವಲಿ ಮೊದಲಾದವರಿದ್ದರು.