ನೈಜ ಸಾಗುವಳಿದಾರರಿಗೆ ನ್ಯಾಯ ಒದಗಿಸಲು ಮನವಿ

KannadaprabhaNewsNetwork |  
Published : Mar 01, 2026, 03:00 AM IST
ನೈಜ ಸಾಗುವಳಿದಾರರಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಅರಣ್ಯ ಹಕ್ಕುಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳ ಸ್ಥಳ ಮಹಜರು ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲ ಮತ್ತು ಲೋಪದೋಷಗಳನ್ನು ಕೂಡಲೇ ಸರಿಪಡಿಸಬೇಕು ಹಾಗೂ ನೈಜ ಸಾಗುವಳಿದಾರರಿಗೆ ನ್ಯಾಯ ಒದಗಿಸಬೇಕು.

ಕನ್ನಡಪ್ರಭ ವಾರ್ತೆ ಯಲ್ಲಾಪುರಜಿಲ್ಲೆಯಲ್ಲಿ ಅರಣ್ಯ ಹಕ್ಕುಕಾಯ್ದೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳ ಸ್ಥಳ ಮಹಜರು ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲ ಮತ್ತು ಲೋಪದೋಷಗಳನ್ನು ಕೂಡಲೇ ಸರಿಪಡಿಸಬೇಕು ಹಾಗೂ ನೈಜ ಸಾಗುವಳಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿಯ ನಿಯೋಗವು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

೨೦೦೫ಕ್ಕಿಂತ ಪೂರ್ವದಲ್ಲಿ ಅರಣ್ಯ ಭೂಮಿಯನ್ನು ಅವಲಂಬಿಸಿ ಬದುಕುತ್ತಿರುವ ಪಾರಂಪರಿಕ ಅರಣ್ಯವಾಸಿಗಳಿಗೆ ಭೂಮಿಯ ಹಕ್ಕು ನೀಡುವಲ್ಲಿ ಆಗುತ್ತಿರುವ ಗೊಂದಲಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ, ಮೂರು ತಲೆಮಾರುಗಳ ವಾಸ್ತವ್ಯ ಎನ್ನುವ ನಿಯಮದ ವ್ಯಾಖ್ಯೆಯ ಬಗ್ಗೆ ಅಧಿಕಾರಿಗಳಲ್ಲಿರುವ ತಪ್ಪು ಕಲ್ಪನೆ ಸರಿಪಡಿಸಲು ನಿಯೋಗ ಯತ್ನಿಸಿತು. ೨೦೦೫ ಕ್ಕಿಂತ ಮೊದಲು ಅರಣ್ಯ ಭೂಮಿಯನ್ನು ವಸತಿ ಮತ್ತು ಜೀವನೋಪಾಯಕ್ಕೆ ಅವಲಂಬಿಸಿರುವ ನೈಜ ಪ್ರಕರಣಗಳಲ್ಲಿ ಹಿರಿಯರ ಹೇಳಿಕೆ ಹೊರತುಪಡಿಸಿ ಒಂದೇ ಒಂದು ನೈಜ ಸಾಂದರ್ಭಿಕ ಪುರಾವೆ ಲಭ್ಯವಿದ್ದರೂ ಅಂತಹ ಅರ್ಜಿಗಳನ್ನು ಪರಿಗಣಿಸಿ ಭೂಮಿಯ ಹಕ್ಕು ನೀಡಲು ಕ್ರಮ ಕೈಗೊಳ್ಳುವುದಾಗಿ ನಿಯೋಗಕ್ಕೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ತಿಳಿಸಿದ್ದಾರೆ.ವಿಶೇಷವಾಗಿ ಇತರ ಪಾರಂಪರಿಕ ಅರಣ್ಯವಾಸಿಗಳು ತಾವು ವಾಸವಿರುವ ಜಾಗದಲ್ಲಿ ೭೫ ವರ್ಷಗಳ ಕಾಲ ಸಾಗುವಳಿ ಮಾಡಿದ್ದಕ್ಕೆ ದಾಖಲೆ ನೀಡಬೇಕಿಲ್ಲ. ಬದಲಾಗಿ ಆ ಪ್ರದೇಶದಲ್ಲಿ ೭೫ ವರ್ಷಗಳಿಂದ ವಾಸವಿದ್ದಾರೆ ಎಂಬ ಪುರಾವೆ ನೀಡಿದರೆ ಸಾಕು ಎಂದು ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯವು ೨೦೧೪ರಲ್ಲಿ ನೀಡಿರುವ ಸ್ಪಷ್ಟನೆಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಯಿತು.ಹೋರಾಟ ಸಮಿತಿಯ ಆಕ್ಷೇಪ:

ಪ್ರಸ್ತುತ ಜಿಲ್ಲೆಯಲ್ಲಿ ನಡೆಯುತ್ತಿರುವ ಸ್ಥಳ ಮಹಜರು ಪ್ರಕ್ರಿಯೆಯು ಕೇವಲ ಕಾಟಾಚಾರಕ್ಕೆ ಎಂಬಂತೆ ನಡೆಯುತ್ತಿದೆ ಎಂದು ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದೆ.ಕ್ಲೇಮುದಾರರಿಗೆ ಯಾವುದೇ ಪೂರ್ವ ಸೂಚನೆ ನೀಡದೇ, ಕ್ಲೇಮಿನ ಸ್ಥಳದ ಸರ್ವೆಕಾರ್ಯ ನಡೆಸಿದೆ. ಸಾಂದರ್ಭಿಕ ಸಾಕ್ಷ್ಯಗಳನ್ನು ಗುರುತಿಸದೇ ಅಪೂರ್ಣವಾಗಿ ತನಿಖೆ ನಡೆಸುತ್ತಿವೆ. ಅದರಲ್ಲೂ ವಿಶೇಷವಾಗಿ ತೀರ ಕಡಿಮೆ ಜಮೀನು ಹೊಂದಿರುವ ಸಣ್ಣ ಹಿಡುವಳಿದಾರರನ್ನು ಮಹಜರು ಪ್ರಕ್ರಿಯೆಯಿಂದ ಹೊರಗಿಡುತ್ತಿರುವುದು ಪಕ್ಷಪಾತದ ಧೋರಣೆಯಾಗಿದ್ದು ಇದು ನೈಸರ್ಗಿಕ ನ್ಯಾಯದ ಉಲ್ಲಂಘನೆಯಾಗಿದೆ ಎಂದು ನಿಯೋಗವು ಪ್ರತಿಪಾದಿಸಿತು. ಅರಣ್ಯವಾಸಿಗಳನ್ನು ಹಕ್ಕಿನಿಂದ ವಂಚಿಸುವ ಬದಲಾಗಿ ಅವರಿಗೆ ಹಕ್ಕು ನೀಡಲು ಪೂರಕವಾದ ಸಾಂದರ್ಭಿಕ ಸಾಕ್ಷ್ಯಗಳನ್ನು ಗುರುತಿಸಿ, ದಾಖಲಿಸಲು ಯೋಗ್ಯ ಬದಲೀ ಮಾರ್ಗಸೂಚಿ ರೂಪಿಸಬೇಕು ಎಂದು ಹೋರಾಟ ಸಮಿತಿಯು ಆಗ್ರಹಿಸಿತು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿ ಸರಿಪಡಿಸುವ ಭರವಸೆ ನೀಡಿದ್ದಾರೆ. ಈ ನಿಯೋಗದಲ್ಲಿ ಪ್ರಮುಖರಾದ ಜಿ.ಎಂ.ಶೆಟ್ಟಿ ಅಚಿವೆ, ಪಿ.ಟಿ. ನಾಯ್ಕ ಮೂಡ್ಕಣಿ, ಡಾ. ನಾಗೇಶ ನಾಯ್ಕ, ಶಾಮನಾಥ ನಾಯ್ಕ, ಮಂಜುನಾಥ ಶಾಸ್ತ್ರೀ ಯಲ್ಲಾಪುರ, ನವೀನ ಸಿದ್ಧಿ, ನಾಗರಾಜ ಕಟ್ಟಿಮನಿ ಮುಂಡಗೋಡ, ಶ್ರೀಧರ ಶೆಟ್ಟಿ ಜಂಬೆಬೆಟ್ಟ, ಯೋಗೇಶ ರಾಯ್ಕರ ಹೊನ್ನಾವರ, ಸುರೇಶ ರಾಠೋಡ, ಬಸವಂತಪ್ಪ, ರಘು ಮರಾಠಿ, ಗಿರೀಶ ನಾಯ್ಕ, ಗಣೇಶ ಪಟಗಾರ ಯಲ್ಲಾಪುರ, ರವಿ ಶಾಸ್ತ್ರಿ, ಬಾಲಕೃಷ್ಣ ಗೌಡ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲೆಯ ೪ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ: ದಿನೇಶ ಗುಂಡೂರಾವ್
ರಾಜ್ಯದಲ್ಲಿ ಜನರು ಆತಂಕದಲ್ಲೇ ಬದುಕುವಂತಾಗಿದೆ: ಕಾಗೇರಿ