ಶಿರಹಟ್ಟಿ: ಕಳೆದ ವರ್ಷದಿಂದ ಹೊಸ ಪಡಿತರ ಚೀಟಿ ವಿತರಣೆ, ತಿದ್ದುಪಡಿಯನ್ನು ಸರ್ಕಾರ ಸ್ಥಗಿತಗೊಳಿಸಿದ್ದು, ಸಧ್ಯ ಮತ್ತೆ ಆರಂಭಿಸಿದ್ದು, ನಿತ್ಯ ಗ್ರಾಮೀಣ ಪ್ರದೇಶದಿಂದ ನೂರಾರು ಜನ ಹೊಸ ಪಡಿತರ ಚೀಟಿ ಪಡೆಯಲು ಮತ್ತು ತಿದ್ದುಪಡಿಗೆಂದು ಆಗಮಿಸುತ್ತಿದ್ದು, ಸರ್ವರ್ ಸಮಸ್ಯೆಯಿಂದ ಗೋಳಾಡುತ್ತಿದ್ದು, ಅಧಿಕಾರಿಗಳು ಜನರ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಕರ್ನಾಟಕ ಪ್ರಜಾಪರ ವೇದಿಕೆ ತಾಲೂಕಾಧ್ಯಕ್ಷ ಹಸನ್ ಎನ್. ತಹಸೀಲ್ದಾರ ಆಗ್ರಹಿಸಿದರು.
ಸಂಘಟನೆ ಅಧ್ಯಕ್ಷ ಹಸನ್ ಎನ್.ತಹಸೀಲ್ದಾರ್ ಮಾತನಾಡಿ, ಸರ್ಕಾರ ಪಡಿತರ ಚೀಟಿಯಲ್ಲಿ ಹೊಸ ಸದಸ್ಯರ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ ಕಲ್ಪಿಸಿದ್ದು, ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಇಲಾಖೆಯ ಸರ್ವರ್ ಸಮಸ್ಯೆಯಿಂದ ಗ್ರಾಮ ಒನ್ ಕೇಂದ್ರಗಳ ಮುಂದೆ ಪಡಿತರ ಚೀಟಿ ಫಲಾನುಭವಿಗಳು ದಿನಗಟ್ಟಲೆ ಕಾದರೂ ಕೆಲಸ ಆಗುತ್ತಿಲ್ಲ ಎಂದು ದೂರಿದರು.ಸರ್ವರ್ ಸಮಸ್ಯೆಯಿಂದ ತುರ್ತು ಸೇವೆಗೂ ಪಡಿತರ ಚೀಟಿ ಇಲ್ಲದಂತಾಗಿದೆ. ಚೀಟಿ ಇಲ್ಲದಿದ್ದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಸಾವಿರಾರು ಹಣ ಖರ್ಚು ಮಾಡುವಂತಾಗಿದೆ. ಪಡಿತರ ಚೀಟಿ ತಿದ್ದುಪಡಿ ಅರ್ಜಿ ಹಾಕುವುದಕ್ಕೆ ಫಲಾನುಭವಿಗಳು ತಮ್ಮ ಕೆಲಸ ಕಾರ್ಯ ಬಿಟ್ಟು ಕಾಯುವಂತಾಗಿದೆ. ಬೆಳಗ್ಗೆಯಿಂದ ಸಂಜೆವರೆಗೂ ಹೊಸ ಪಡಿತರಕ್ಕೆ ಅರ್ಜಿ ಹಾಕಲು ಅಲೆದಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದರು.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಪಡಿತರ ಚೀಟಿಯ ಹೊಸ ಅರ್ಜಿಗೆ ಸಾರ್ವಜನಿಕರ ಒತ್ತಾಯದ ಮೇರೆಗೆ ಸರ್ಕಾರ ಪುನಃ ಅವಕಾಶ ಕಲ್ಪಿಸಿದೆ. ಸರ್ವರ್ ಸಮಸ್ಯೆಯಿಂದ ಸುಗಮವಾಗಿ ನಡೆಯದೆ ಗ್ರಾಮೀಣ ಜನರು ಹೈರಾಣಾಗಿದ್ದಾರೆ.ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮೀ ಯೋಜನೆಗೆ ಪಡಿತರ ಚೀಟಿಯಲ್ಲಿ ಯಜಮಾನಿ ಫಲಾನುಭವಿ ಆಗುತ್ತಾರೆ. ಅಲ್ಲದೆ ಅನ್ನಭಾಗ್ಯ ಯೋಜನೆಯ ಪಡಿತರ ಪಡೆಯಲು ಪಡಿತರ ಚೀಟಿ ಅತೀ ಮುಖ್ಯವಾಗಿದೆ. ಹಾಗಾಗಿ ನಿತ್ಯ ಜನ ಸೇವಾ ಕೇಂದ್ರದ ಮುಂದೆ ಜಮಾಯಿಸುತ್ತಿದ್ದಾರೆ.
ಆಹಾರ ಮತ್ತು ನಾಗರಿಕ ವ್ಯವಹಾರಗಳ ಇಲಾಖೆ ಹೊಸ ಪಟಿತರ ಚೀಟಿ ಅರ್ಜಿ, ತಿದ್ದುಪಡಿಗೆ ಮುಕ್ತ ಅವಕಾಶ ನೀಡದೇ ಇರುವುದರಿಂದ ಪದೆ ಪದೇ ಸರ್ವರ್,ವಿದ್ಯುತ್ ಕೈಕೊಟ್ಟು ಜನ ಅರ್ಜಿ ಸಲ್ಲಿಸಲು ಪರದಾಡುವಂತಾಗಿದೆ.ನಂತರ ತಹಸೀಲ್ದಾರ ಅನಿಲ ಕೆ. ಬಡಿಗೇರ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಶಿವಾನಂದ ಸುಲ್ತಾನಪೂರ, ಹನಮಂತಪ್ಪ ಹರಿಜನ, ಸತೀಶ ನರಗುಂದೆ, ಶರೀಫ ಗುಡಿಮನಿ, ಸಾಧಿಕ ಮುಳಗುಂದ, ವಾಸಿಮ್ ಬೈರೆಕದಾರ ಸೇರಿದಂತೆ ಇತರರು ಇದ್ದರು.