ಕಸಾಯಿಖಾನೆ ನಿರ್ಮಾಣ ಕೈ ಬಿಡುವಂತೆ ಮನವಿ

KannadaprabhaNewsNetwork | Published : Feb 25, 2024 1:47 AM

ಸಾರಾಂಶ

ರೈತರ ಜಾನುವಾರುಗಳಿಗೆ ಮೇವಿನ ತೊಂದರೆಯಾಗಿದೆ, ಜಾನುವಾರುಗಳ ಮೇವಿಗಾಗಿ ಜಾಗೆಯಿಲ್ಲದೇ ಕಾರಣ ಸಾಕಷ್ಟು ಪರದಾಡುತ್ತಿದ್ದಾರೆ, ಕೃಷಿ ಅಭಿವೃದ್ಧಿಯ ಬೆನ್ನೆಲುಬಾಗಿರುವ ಜಾನುವಾರುಗಳು, ಹೈನುಗಾರಿಕೆ ತೊಂದರೆಯಿಂದ ಆರ್ಥಿಕವಾಗಿ ಹಿಂದುಳಿಯುವಂತಾಗಿದೆ

ಬ್ಯಾಡಗಿ: ಪಟ್ಟಣದ ಅಗಸನಹಳ್ಳಿ ಗೋಮಾಳದ ಸರ್ಕಾರಿ ಜಮೀನಿನಲ್ಲಿ ಕಸಾಯಿಖಾನೆ ನಿರ್ಮಿಸುವ ಮೂಲಕ ಸ್ಥಳೀಯ ನಿವಾಸಿಗಳಿಗೆ ತೊಂದರೆ ಮಾಡುತ್ತಿರುವ ತಾಲೂಕಾಧಿಕಾರಿಗಳು ಕೂಡಲೇ ಸರ್ವೇ ಕಾರ್ಯ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಬ್ಯಾಡಗಿ ಮತ್ತು ಅಗಸನಹಳ್ಳಿ ರೈತರು ಹಾಗೂ ಗ್ರಾಮಸ್ಥರು ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪಗೆ ಶುಕ್ರವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡ ಶಿವಮೂರ್ತಿ ಉಪ್ಪಾರ, ಅಗಸನಹಳ್ಳಿ ಗ್ರಾಮದ ರಿ.ಸ.ನಂ. 13 ರಲ್ಲಿ 72 ಎಕರೆ ಹುಲ್ಲುಗಾವಲು ಭೂಮಿ ಜಾನುವಾರು ಮೇಯಿಸುವುದಕ್ಕಾಗಿ ನೂರಾರು ವರ್ಷಗಳ ಹಿಂದೆ ಮೀಸಲಿಟ್ಟಿದೆ. ಆದರೆ ಸದರಿ ಜಮೀನಿನಲ್ಲಿ ಕಸಾಯಿಖಾನೆ ಮಾಡಲು ಮುಂದಾಗಿರುವುದು ಅವೈಜ್ಞಾನಿಕ ಕ್ರಮವಾಗಿದ್ದು, ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.

ರೈತರ ಜಾನುವಾರುಗಳಿಗೆ ಮೇವಿನ ತೊಂದರೆಯಾಗಿದೆ, ಜಾನುವಾರುಗಳ ಮೇವಿಗಾಗಿ ಜಾಗೆಯಿಲ್ಲದೇ ಕಾರಣ ಸಾಕಷ್ಟು ಪರದಾಡುತ್ತಿದ್ದಾರೆ, ಕೃಷಿ ಅಭಿವೃದ್ಧಿಯ ಬೆನ್ನೆಲುಬಾಗಿರುವ ಜಾನುವಾರುಗಳು, ಹೈನುಗಾರಿಕೆ ತೊಂದರೆಯಿಂದ ಆರ್ಥಿಕವಾಗಿ ಹಿಂದುಳಿಯುವಂತಾಗಿದೆ, ಸುತ್ತಲಿನ ರೈತರು ಹಾಗೂ ಸಾರ್ವಜನಿಕರಿಗೂ ಶುದ್ಧ ವಾತಾವರಣ ಇಲ್ಲದಂತಾಗಿದ್ದು, ಕೂಡಲೇ ಕಸಾಯಿಖಾನೆ ನಿರ್ಮಾಣ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.

ರಮೇಶ ಬೂದಗಟ್ಟಿ ಮಾತನಾಡಿ, ಕೃಷಿಯ ಜತೆಗೆ ಪಶುಸಂಗೋಪನೆ ಸಹ ರೈತರಿಗೆ ಅತ್ಯಂತ ಮುಖ್ಯ ಕಸುಬಾಗಿದೆ, ಪ್ರಸಕ್ತ ವರ್ಷ ಮಳೆಯಿಲ್ಲದೇ ಬೆಳೆಯೂ ಇಲ್ಲ, ಮೇವುಯಿಲ್ಲದೇ ರೈತರು ಜಾನುವಾರು ಅತ್ಯಂತ ಕಷ್ಟದಲ್ಲಿ ಸಾಕುತ್ತಿದ್ದಾರೆ, ಇಂತಹ ಸಮಯದಲ್ಲಿ ಇರುವ ಅಲ್ಪಸ್ವಲ್ಪ ಜಾಗ ಸಹ ವಿವಿಧ ಕೆಲಸಕ್ಕೆ ಹಂಚಿಕೆ ಮಾಡಿದರೇ ಇರುವ ಜಾನುವಾರುಗಳನ್ನು ತಹಸೀಲ್ದಾರ ಕಚೇರಿಯಲ್ಲಿ ತಂದು ಸಾಕಬೇಕೆ..? ಎಂದು ಪ್ರಶ್ನಿಸಿದರು.

ಈ ವೇಳೆ ತಹಸೀಲ್ದಾರ ಎಫ್.ಎ. ಸೋಮನಕಟ್ಟಿ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೊಳ, ರಮೇಶ ಬೂದಗಟ್ಟಿ, ಲಿಂಗರಾಜ ಮಡಿವಾಳರ, ಭರಮಣ್ಣ ಗಾಜೇರ ಸುರೇಶ ಜಾಲಮ್ಮನವರ, ವಿನಯ ರಾವಳ, ಹರೀಶ ದೊಡ್ಮನಿ, ಐ.ಸಿ. ಕೋಟೇರ ಕುಮಾರ ಮಂಚಿಕೊಪ್ಪ, ಶಿವಣ್ಣ ಪೂಜಾರ, ಮಂಜಣ್ಣ ಮಡಿವಾಳರ, ಮಾಲತೇಶ ಉಪ್ಪಾರ, ವಿನಾಯಕ ರಾವಳ, ಉಮೇಶ ಸಣ್ಣಗೌಡ್ರ, ಮಂಜುನಾಥ ಮುಂಡರಗಿ, ಸುರೇಶ ಗಾಜೇರ ಅರ್ಜುನ ಬಂಡಿವಡ್ಡರ, ಮಂಜಪ್ಪ ಆಡಿವನರ ಸೇರಿದಂತೆ ಹಲವರು ಭಾಗವಹಿಸಿದ್ದರು.

ಜಾನುವಾರುಗಳೊಂದಿಗೆ ಪ್ರತಿಭಟನೆ:

ಬ್ಯಾಡಗಿ ಸೇರಿದಂತೆ ಶಿಡೇನೂರ ಹಾಗೂ ಸುತ್ತಮುತ್ತಲ ಗ್ರಾಮದ ಜಾನುವಾರುಗಳು ಬದುಕಲು ಸಾಧ್ಯವಾಗಿದೆ, ನಮ್ಮ ವಿರೋಧದ ನಡುವೆಯೂ ಜಾಗ ಮಂಜೂರು ಮಾಡಿದಲ್ಲಿ ಜಾನುವಾರುಗಳೊಂದಿಗೆ ಅನಿರ್ದಿಷ್ಟಾವಧಿವರೆಗೆ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ.

Share this article