ಅಕ್ರಮ ಮಣ್ಣು ಸಾಗಣೆ ತಡೆಗೆ ತಹಸೀಲ್ದಾರ್‌ಗೆ ಮನವಿ

KannadaprabhaNewsNetwork |  
Published : Nov 07, 2023, 01:31 AM IST
ಅಕ್ರಮ ಮಣ್ಣು ಸಾಗಣೆ ತಡೆಗಟ್ಟಿ ಎಂದು ದಲಿತ ಪರ ಮತ್ತು ರೈತ ಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನ ತಲುಪಿದ್ದು ಇಂದು ತಹಶೀಲ್ದಾರ್ ರಾಜೇಶ್ ಕುಮಾರ್ ರವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಗೋಮಾಳ, ಅರಣ್ಯ ಇಲಾಖೆ, ದಲಿತರ ಜಮೀನುಗಳಿಂದ ಮಣ್ಣು ಸಾಗಣೆ ಆರೋಪ

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನಾದ್ಯಂತ ಅಕ್ರಮವಾಗಿ ಮಣ್ಣು ಸಾಗಿಸಲಾಗುತ್ತಿದೆ ಎಂದು ಆರೋಪಿಸಿ ದಲಿತಪರ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದ ತಾಲೂಕು ಕಚೇರಿ ಮುಂಭಾಗ ಶನಿವಾರ ಆರಂಭಿಸಿದ್ದ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ತಾಲೂಕಿನಾದ್ಯಂತ ಸರ್ಕಾರಿ ಗೋಮಾಳಗಳಲ್ಲಿ, ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ, ದಲಿತರ ಜಮೀನುಗಳಲ್ಲಿ ಹಾಗೂ ಉಡುವಳ್ಳಿ ಬಳಿ ಫೀಡರ್ ಚಾನೆಲ್ ತೆಗೆದ ಮಣ್ಣನ್ನು ಸಹ ಸಾಗಿಸುತ್ತಿದ್ದು, ಕೋಟ್ಯಂತರ ರು. ಬೆಲೆ ಬಾಳುವ ಮಣ್ಣಿನ ಸಾಗಾಟ ನಡೆಯುತ್ತಿದೆ. ತಾಲೂಕು ಆಡಳಿತ ಕಂಡು ಕಾಣದಂತೆ ಇರುವುದು ಅನುಮಾನಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ದಲಿತರ ಸಾಗುವಳಿ ಜಮೀನಿನಲ್ಲಿನ ಫಲವತ್ತಾದ ಮಣ್ಣನ್ನು ರಸ್ತೆ ನಿರ್ಮಾಣಕ್ಕೆ ಬಳಸಲಾಗಿದೆ. ತಾಲೂಕಿನ ಮೂರ್ನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣ ದಂಧೆ ನಡೆಯುತ್ತಿದ್ದು, ತಾಲೂಕು ಕಚೇರಿಯ ಸುತ್ತ ಮುತ್ತಲೂ ಲೇಔಟ್ ಗಳಿಗೆ ಸಾವಿರಾರು ಲೋಡ್ ಮಣ್ಣು ಸಾಗಣೆ ಆಗಿರುವುದನ್ನು ತಿಳಿಸಿದರೂ ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹಾಗಾಗಿ ತಾಲೂಕಿನ ಹಲವು ಜನಪರ ಸಂಘಟನೆಗಳ ಒಕ್ಕೂಟದಿಂದ ಈ ಪ್ರತಿಭಟನೆ ಕೈಗೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ತಹಸೀಲ್ದಾರ್ ರಾಜೇಶ್ ಕುಮಾರ್ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಮಾಹಿತಿ ಪಡೆಯುತ್ತೇನೆ. ಕೆಲವು ಇಲಾಖೆಯ ಅನುಮತಿ ಇದೆ ಎನ್ನಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದರು.

ತಹಸೀಲ್ದಾರ್ ಉತ್ತರಕ್ಕೆ ಸಂತೃಪ್ತರಾಗದ ಪ್ರತಿಭಟನಾಕಾರರು ಮಣ್ಣು ಸಾಗಾಟ ಸಂಪೂರ್ಣ ನಿಲ್ಲುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನೆ ಮುಂದುವರೆಸಿದರು. ಈ ಸಂದರ್ಭದಲ್ಲಿ ಭಾರತೀಯ ದಲಿತ ಸಂಘರ್ಷ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ತಿಮ್ಮರಾಜು, ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ತಾಲೂಕು ಅಧ್ಯಕ್ಷರಾದ ಬಿ.ಓ.ಶಿವಕುಮಾರ್, ಕೆ.ಟಿ.ತಿಪ್ಪೇಸ್ವಾಮಿ, ಹೆಗ್ಗೆರೆ ಮಂಜುನಾಥ್, ಕೇಶವಮೂರ್ತಿ, ಘಾಟ್ ಚಂದ್ರಪ್ಪ, ಯಳನಾಡು ಚೇತನ್, ಘಾಟ್ ಮಂಜುನಾಥ್, ಶಶಿಕಲಾ, ದಾಸಪ್ಪ, ಆನಂದಪ್ಪ, ಈರಪ್ಪ, ರಂಗಸ್ವಾಮಿ, ಮೋಹನ್ ಮುಂತಾದವರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ