ಕನ್ನಡಪ್ರಭ ವಾರ್ತೆ ಮೈಸೂರುಬೆಂಗಳೂರು-ನೀಲಗಿರಿ ರಸ್ತೆಯಲ್ಲಿರುವ ಕೇಂದ್ರ ಬಸ್ ನಿಲ್ದಾಣವು ಇಂದಿನ ಪ್ರಯಾಣಿಕರ ಸಂಖ್ಯೆ ಹಾಗೂ ನಿಲ್ದಾಣದಲ್ಲಿ ಬಸ್ ಗಳ ಸಂಖ್ಯೆಗೆ ತುಂಬಾ ಕಿರಿದಾಗಿದ್ದು, ಈ ನಿಲ್ದಾಣವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವುದು ಅತ್ಯಗತ್ಯವಾಗಿದೆ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.ಬಸ್ ನಿಲ್ದಾಣವು ಎಂಬತ್ತರ ದಶಕದಲ್ಲಿ ನಿರ್ಮಿಸಿರುವ ನಿಲ್ದಾಣವಾಗಿದ್ದು, ನಂತರ 2007ನೇ ಇಸವಿಯಲ್ಲಿ ಅದನ್ನು ನವೀಕರಿಸಲಾಗಿದೆ. ಇಂದು ಪ್ರತಿನಿತ್ಯ ಸುಮಾರು ಮೂರು ಸಾವಿರಕ್ಕೂ ಅಧಿಕ ಬಸ್ಸುಗಳು ದಿನದ 24 ಗಂಟೆಯಲ್ಲಿ ಬಂದು ಹೋಗುತ್ತಿವೆ. ರಾಜ್ಯದ ಎಲ್ಲ ಜಿಲ್ಲೆಗಳ ಹಾಗೂ ಅಂತಾರಾಜ್ಯದ ಬಸ್ಸುಗಳು ಇಲ್ಲಿನ ನಿಲ್ದಾಣದಿಂದ ಸಂಚರಿಸಲಿವೆ. ತುಂಬ ಕಿರಿದಾದ ಸ್ಥಳವಾಗಿರುವ ಕಾರಣ ನಿಲ್ದಾಣದ ಒಳಗೆ ಪ್ರಯಾಣಿಕರು ಪ್ರಾಣ ಭೀತಿಯಿಂದ ನಡೆದಾಡುವಂತಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಕಾರಣ ವಿಸ್ತಾರವಾದ ಸ್ಥಳದಲ್ಲಿ ಈ ಕೇಂದ್ರ ಬಸ್ ನಿಲ್ದಾಣವನ್ನು ನಿರ್ಮಿಸುವ ಮೂಲಕಜನರಿಗೆ ಅನುಕೂಲ ಕಲ್ಪಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ರಸ್ತೆಯೂ ಅವ್ಯವಸ್ಥೆಯಿಂದ ಕೂಡಿರುವುದನ್ನು ಕಾಣಬಹುದು. ಅಲ್ಲಲ್ಲಿ ರಸ್ತೆಯು ಗುಂಡಿ ಬಿದ್ದಿವೆ. ಸಂಚಾರಿ ಪೋಲೀಸರ ಬ್ಯಾರಿಗೇಟ್ ಗಳು ಅಡ್ಡಲಾಗಿ ಮತ್ತಷ್ಟು ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ನಿಲ್ದಾಣದಿಂದ ಬಸ್ಸುಗಳು ಒಳಗೆ ಹೋಗುವಾಗ ಹಾಗೂ ಹೊರಗೆ ಬರುವಾಗ ಅದೇ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಸುಗಮ ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಆ ರಸ್ತೆಯ ಅಕ್ಕಪಕ್ಕದ ಪಾದಚಾರಿ ಮಾರ್ಗದಲ್ಲಿ ಜನರ ಸಂಚಾರಕ್ಕು ಸಹ ಸಮಸ್ಯೆ ಎದುರಿಸುವಂತಾಗಿದೆ.ಬಿ.ಎನ್. ರಸ್ತೆಯು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿದ್ದು, ಎಫ್.ಟಿ.ಎಸ್. ವೃತ್ತದಿಂದ ಹಾರ್ಡೆಂಜ್ ವೃತ್ತದವರೆಗೆ ರಸ್ತೆ ಅಗಲೀಕರಣ ಮಾಡಿ ಉತ್ತಮ ಮಾರ್ಗ ರೂಪಿಸುವ ಯೋಜನೆಯು ನೆನಗುದಿಗೆ ಬಿದ್ದಿದೆ. ಆದ್ದರಿಂದ ಮಹಾನಗರ ಪಾಲಿಕೆ ಆಯುಕ್ತರು, ಪೊಲೀಸ್ ಆಯುಕ್ತರು, ಕೆಎಸ್.ಆರ್.ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಅವರ ಜೊತೆ ಕೇಂದ್ರ ಬಸ್ ನಿಲ್ದಾಣಕ್ಕೆ ಹಗಲು ಮತ್ತು ರಾತ್ರಿ ವೇಳೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.ಈ ಕೇಂದ್ರ ಬಸ್ ನಿಲ್ದಾಣವನ್ನು ಬೇರೆ ಸೂಕ್ತ ಸ್ಥಳಕ್ಕೆ ಅಥವಾ ಬನ್ನಿಮಂಟಪದ ಬಳಿ ಇರುವ ಬಸ್ ಡಿಪೋದಲ್ಲಿನ ಜಾಗಕ್ಕೆ ವರ್ಗಾಯಿಸಿ, ಮೈಸೂರು ನಗರ ಬಸ್ ನಿಲ್ದಾಣವನ್ನು ಕೇಂದ್ರ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದರೆ ಅನುಕೂಲವಾಗಲಿದೆ.ಕೇಂದ್ರ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ ಹಾಗೂ ರೇಲ್ವೆ ನಿಲ್ದಾಣ ಇವುಗಳ ನಡುವೆ ಸಾರಿಗೆ ವ್ಯವಸ್ಥೆ ಕಲ್ಪಿಸಬಹುದಾಗಿದೆ. ಈವರೆಗೆ ಯಾವುದೇ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಹಳೇ ವ್ಯವಸ್ಥೆಯನ್ನು ಬದಲಿಸಿ ಹೊಸ ಸೌಲಭ್ಯವನ್ನು ಜನರಿಗೆ ಕಲ್ಪಿಸಲು ಮುಂದಾಗದಿರುವುದು ವಿಷಾದನೀಯ. ನಾನು ಪಾಲಿಕೆ ಸದಸ್ಯನಾಗಿ, ಮೇಯರ್ಆಗಿ ಇಲ್ಲಿನ ಸಮಸ್ಯೆಯನ್ನು ಅರಿತು ತಮ್ಮಲ್ಲಿ ವಿನಂತಿಸುತ್ತಿದ್ದೇನೆ. ದಯವಿಟ್ಟು ಕೇಂದ್ರ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ತಾವು ಅಗತ್ಯ ಕ್ರಮ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.. ಪ್ರತ್ಯೇಕ ಬಸ್ ವ್ಯವಸ್ಥೆ ಕಲ್ಪಿಸಿಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಕಲ್ಪಿಸಿರುವ ಕಾರಣ, ದಿನನಿತ್ಯ ಶಾಲಾ ಕಾಲೇಜಿಗೆ ಸಂಚರಿಸುವ ವಿದ್ಯಾರ್ಥಿಗಳು ಬಸ್ಸಿಗಾಗಿ ಪರಿತಪಿಸುವಂತಾಗಿದೆ. ಪ್ರತಿ ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಕಾಣಬಹುದಾಗಿದೆ. ಆದ್ದರಿಂದ ಕೆಲವು ಬಸ್ಸುಗಳನ್ನು ವಿದ್ಯಾರ್ಥಿಗಳಿಗೆ ಮೀಸಲಿರಿಸಿ ಸಂಚರಿಸುವಂತೆ ತಾವು ಸಾರಿಗೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಅವರು ಕೋರಿದ್ದಾರೆ.