ಕನ್ನಡಪ್ರಭ ವಾರ್ತೆ ಕಾರವಾರ
ಕಡವಾಡ ಗ್ರಾಮದ ಸರ್ವೆ ನಂ. 396ರಲ್ಲಿ ಇರುವ ಹಳೆಯ ಕೆರೆಯು ಹಿಂದಿನಿಂದಲೂ ಜಾನುವಾರುಗಳಿಗೆ ನೀರಿನ ಮೂಲವಾಗಿದ್ದು, ಸುತ್ತಮುತ್ತಲಿನ ಕುಡಿಯುವ ನೀರಿನ ಬಾವಿಗಳ ಜಲಮಟ್ಟ ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿತ್ತು. ಹಲವು ವರ್ಷಗಳ ಹಿಂದೆ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು, 2005ರಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು.
ಆ ಸಂದರ್ಭ ಕೆರೆಯಲ್ಲಿದ್ದ ಸುಮಾರು 3 ಅಡಿ ಹೂಳು ತೆಗೆಯುವುದರೊಂದಿಗೆ ಕಲ್ಲಿನ ಪಿಚ್ಚಿಂಗ್ ಕಾಮಗಾರಿ ನಡೆಸಲಾಗಿತ್ತು. ಕೆರೆಯ ನಾಲ್ಕು ಬದಿಗಳಲ್ಲೂ ಕಲ್ಲಿನ ಪಿಚ್ಚಿಂಗ್, ಏರಿಯ ಮೇಲೆ ಮಣ್ಣು ತುಂಬಿಸುವುದು ಹಾಗೂ ರಸ್ತೆ ಬದಿಯಲ್ಲಿ ಸಾರ್ವಜನಿಕರು ಮತ್ತು ಶಾಲಾ ಮಕ್ಕಳು ಸಂಚರಿಸಲು ಅನುಕೂಲವಾಗುವಂತೆ ಚೀರೇಕಲ್ಲಿನ ಗೋಡೆ ನಿರ್ಮಿಸಲಾಗಿತ್ತು.ಆದರೆ, 2025ರಲ್ಲಿ ಚಿಕ್ಕ ನೀರಾವರಿ ಇಲಾಖೆಯ ಉಪವಿಭಾಗದಿಂದ ಇದೇ ಕೆರೆಯನ್ನು ಅಭಿವೃದ್ಧಿಪಡಿಸುವ ಹೆಸರಿನಲ್ಲಿ ಮತ್ತೆ ಕಾಮಗಾರಿ ಆರಂಭಿಸಲಾಗಿದೆ. ಈ ವೇಳೆ ಕೆರೆಯಲ್ಲಿದ್ದ ಹೂಳನ್ನು ತೆಗೆದು ಪಕ್ಕದಲ್ಲಿ ಹಾಕಿ, ಹಿಂದೆ ನಿರ್ಮಿಸಲಾಗಿದ್ದ ಕಲ್ಲಿನ ಪಿಚ್ಚಿಂಗ್ ಅನ್ನು ಮಣ್ಣಿನಿಂದ ಮುಚ್ಚಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ರಸ್ತೆ ಬದಿಯಲ್ಲಿದ್ದ ಚಿರೆಕಲ್ಲಿನ ಗೋಡೆಯನ್ನೂ ಕೆಡವಲಾಗಿದ್ದು, ಅದನ್ನು ಪುನಃ ನಿರ್ಮಿಸದೇ ಹಾಗೆಯೇ ಬಿಡಲಾಗಿದೆ ಎಂದು ದೂರಲಾಗಿದೆ.
ಈ ಕುರಿತು 2025ರ ಜೂ. 5ರಂದು ಕಡವಾಡ ಗ್ರಾಪಂಗೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಪಂಚಾಯಿತಿಯಿಂದ ಸಂಬಂಧಪಟ್ಟ ಇಲಾಖೆಗೆ ನೋಟಿಸ್ ನೀಡಲಾಗಿದ್ದು, 2025ರ ಮಳೆಗಾಲದ ನಂತರ ಕಾಮಗಾರಿ ಪೂರ್ಣಗೊಳಿಸುವುದಾಗಿ ಇಲಾಖೆ ತಿಳಿಸಿತ್ತು. ಆದರೆ 2026ರಲ್ಲಿ ಮತ್ತೆ ಕಾಮಗಾರಿ ಆರಂಭಿಸಿದಂತೆ ಮಾಡಿ, ಕೇವಲ ಎರಡು ದಿನಗಳ ಬಳಿಕ ಕೆಲಸ ಸ್ಥಗಿತಗೊಳಿಸಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ದೇವಿದಾಸ ಲಿಂಗು ತಳೇಕರ, ಉತ್ತಮ್ ವಿ. ರೇವಣಕರ, ವಿದ್ಯಾ ವಿ. ರೇವಣಕರ, ರಾಜೇಶ ರೇವಣಕರ, ರೋಷನಿ ರೇವಣಕರ, ವಿನಯ ರೇವಣಕರ ಹಾಗೂ ವಿನೋದ ಗಣೇಶ ವೈಂಗಣಕರ ಉಪಸ್ಥಿತರಿದ್ದರು.